ಶ್ರೀಮಂಗಲ, ಮಾ. 21: ಬ್ರಹ್ಮಗಿರಿ ರಕ್ಷಿತಾರಣ್ಯ ಸರಹದ್ದು ಗುರುತಿಸಲು ಖಾಸಗಿ ಸಂಸ್ಥೆ, ಜಿ.ಪಿ.ಎಸ್ ಸರ್ವೆ ಕಾರ್ಯ ನಡೆಸಿ, ಇದೀಗ ಕಾಂಕ್ರೀಟ್ ಕಂಬ ಅಳವಡಿಸುತ್ತಿದ್ದು, ದ. ಕೊಡಗಿನ ಹಲವೆಡೆ ಖಾಸಗಿ ಜಾಗದಲ್ಲಿ ಆ ಜಾಗದ ಮಾಲೀಕರಿಗೆ ಯಾವದೇ ಮಾಹಿತಿ ನೀಡದೆ, ಅತಿಕ್ರಮಣ ಪ್ರವೇಶ ಮಾಡಿ, ಕಾಮಗಾರಿ ಮಾಡುತ್ತಿರುವದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸರ್ವೆ ಮತ್ತು ಕಂಬ ಹಾಕುವ ಕಾರ್ಯಕ್ಕೆ ತಡೆಮಾಡಿದೆ.
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ಬ್ರಹ್ಮಗಿರಿ ವನ್ಯಜೀವಿ ವಲಯದ ರಕ್ಷಿತಾರಣ್ಯ ಪ್ರದೇಶ ಮತ್ತು ಖಾಸಗಿ ಜಾಗ ನಡುವೆ ಸರಹದ್ದು ಗುರುತಿಸಲು ಈಗಾಗಲೇ ಸರ್ವೆ ಕಾರ್ಯ ನಡೆಸಲಾಗಿದೆ. ಸರ್ವೆ ಕಾರ್ಯ ಮತ್ತು ಗಡಿಯಲ್ಲಿ ಕಾಂಕ್ರೀಟ್ ಕಂಬಗಳನ್ನು ಅಳವಡಿಸಲು ಮೈಸೂರು ಪ್ಲಾನಿಂಗ್ ಸಂಸ್ಥೆ ಗುತ್ತಿಗೆ ಪಡೆದಿದೆ.
ಅದರಂತೆ ಕಳೆದ ಹಲವು ದಿನದಿಂದ ಈ ಸಂಸ್ಥೆಯ ಸಹಾಯಕ ಸರ್ವೆ ಅಧಿಕಾರಿ ಪ್ರಶಾಂತ್ ನೇತೃತ್ವದ ತಂಡ, ತೋಟದ ಮಾಲೀಕರಿಗೆ ಯಾವದೇ ಮಾಹಿತಿ ನೀಡದೇ ಖಾಸಗಿ ಜಾಗದಲ್ಲಿ ಮತ್ತು ಕಾಫಿ ತೋಟದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಕಂಬ ಹಾಕಿದೆ. ಈ ವಿಷಯ ಅರಣ್ಯ ಗಡಿಯ ಮಾಲೀಕರಿಗೆ ಗೊತ್ತಾಗಿ, ಕಾಮಗಾರಿಯ ಗುತ್ತಿಗೆ ನಡೆಸುತ್ತಿರುವ ತಂಡವನ್ನು ತಡೆದು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಅರಣ್ಯದ ನೈಜ ಸರಹದ್ದು ಗುರುತಿಸಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದರು. ಬಾಡಗರಕೇರಿ ಕೂಟಿಯಾಲ ಅರಣ್ಯ ಕಾವಲು ಕೇಂದ್ರದಲ್ಲಿ ಸೇರಿದ ಗ್ರಾಮಸ್ಥರು, ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಅವರಿಗೆ ಈ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಒತ್ತಾಯಿಸಿದರು.
ಕೆಲವರು, ಅತಿಕ್ರಮಣ ಪ್ರವೇಶ ಮಾಡಿ, ಖಾಸಗಿ ಕಾಫಿ ತೋಟದಲ್ಲಿ ಸರ್ವೆ ಮಾಡಿ, ಕಂಬ ನೆಟ್ಟಿರುವ ಗುತ್ತಿಗೆ ಸಿಬ್ಬಂದಿಗಳು ಮತ್ತು ಕಾಮಗಾರಿಗೆ ಬಳಸಿದ ವಾಹನಗಳ ಮೇಲೆ ಕೇಸು ಹಾಕುವ ಎಚ್ಚರಿಕೆ ನೀಡಿದರು. ತಮ್ಮ ದಾಖಲೆಯಂತೆ ಅರಣ್ಯ ಸರಹದ್ದು ಈಗ ಇರುವ ಅರಣ್ಯ ಪ್ರದೇಶದ ಅಂಚಿನಲ್ಲಿ ಬರುತ್ತದೆ. ಆದರೆ, ಈಗ ನಡೆಸುತ್ತಿರುವ ಸರ್ವೆ ಪ್ರಕಾರ ಇಲ್ಲಿನ ಬಹಳಷ್ಟು ಕಾಫಿ ತೋಟ ಮತ್ತು ಕೆಲವು ಮನೆ ಸಹ ಅರಣ್ಯ ಪ್ರದೇಶಕ್ಕೆ ಸೇರುತ್ತದೆ, ಇದು ಸರಿಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕಾಫಿ ತೋಟದಲ್ಲಿ ನೆಟ್ಟಿರುವ ಕಂಬಗಳನ್ನು ತೆರವುಗೊಳಿಸುವ ಬಗ್ಗೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ನೀಡಿದರು. ಈ ಸಂದರ್ಭ ಗ್ರಾಮಸ್ಥರಾದ ನೆಲ್ಲೀರ ಮನು, ಚೋನಿರ ಜೀವನ್, ಮಹೇಶ್, ಕೃಷ್ಣ ಮತ್ತು ಶರಣ್ ಚಂಗಪ್ಪ ಮತ್ತಿತರರು ಇದ್ದರು.