ನಾಪೋಕ್ಲು, ಮಾ. 21: ನಾಪೋಕ್ಲುವಿನ ಶ್ರೀ ಭಗವತಿ ವಾರ್ಷಿಕ ದೇವಾಯದ ಕಟ್ಟುಪಾಡಿನಂತೆ ಹಲವು ದಿನಗಳ ಕಾಲ ಜರುಗಿದ್ದು, ಈ ಬಾರಿಯ ಉತ್ಸವ ಸಂಪನ್ನಗೊಂಡಿದೆ. ವಾರ್ಷಿಕ ಉತ್ಸವ ದೇವಾಲಯದ ಶ್ರೀ ಭಗವತಿ ದೇವರ ಆರಾಧನೆಯೊಂದಿಗೆ ವಿವಿಧ ಪೂಜಾ ವಿಧಿವಿಧಾನಗಳಲ್ಲಿ ನಾಡಿನ ಭಕ್ತಾದಿಗಳು ಉತ್ಸವದಲ್ಲಿ ತೊಡಗಿಸಿಕೊಂಡಿದ್ದರು. ಪ್ರಸಕ್ತ ವರ್ಷ ತಾ. 2ರಂದು ಕೊಡಿಮರ ನಿಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ದೊರೆತಿದ್ದು, ತಾ.21ರಂದು ಈ ಸಾಲಿನ ಉತ್ಸವಕ್ಕೆ ತೆರೆಬಿದ್ದಿತು.
ತಾ.17ರಂದು ಅಂದಿ ಬೊಳಕ್, ಮಹಾಪೂಜೆ, ರಾತ್ರಿ ತೆರೆ ಕೈಂಕರ್ಯ ಜರುಗಿದರೆ ತಾ.18 ರಂದು ತೂಚಂಬಲಿ, ದೇವರ ವಿಗ್ರಹ ಸಹಿತವಾಗಿ ದೇವರು ಊರು ಸುತ್ತುವದು, ಬಳಿಕ ವಿಷ್ಣು ದೇವಾಲಯದಲ್ಲಿ ಪೂಜೆಯಂತಹ ವಿಧಿವಿಧಾನಗಳು ಜರುಗಿದವು. ತಾ. 19ರಂದು ಬೆಳಿಗ್ಗೆ ಇರ್‍ಬೊಳಕ್ ಪಟ್ಟಣಿ, ದುಡಿಕೊಟ್ಟ್‍ಪಾಟ್, ಬೊಳಕಾಟ್, ಎತ್ತ್‍ಪೋರಾಟ್, ಅನ್ನದಾನದೊಂದಿಗೆ ಸಂಜೆ ದೇವರ ನೃತ್ಯ ಕಾರ್ಯಗಳು ಜರುಗಿತು. ತಾ.20ರಂದು ಅಪರಾಹ್ನ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಬೊಳಕಾಟ್ ಬಳಿಕ ಸುಮಾರು 3 ಕಿ.ಮೀ. ದೂರದಲ್ಲಿರುವ ಚೆರಿಯಪರಂಬು ಬಳಿಯ ಕಾವೇರಿ ನದಿಯಲ್ಲಿ ದೇವರ ಅವಭೃತ ಸ್ನಾನ, ರಾತ್ರಿ ಉತ್ಸವ ಮೂರ್ತಿ ದರ್ಶನ ನಡೆಯಿತು. ಚಂಡೆ ವಾದ್ಯದೊಂದಿಗೆ ರೋಮಾಂಚನಕಾರಿಯಾಗಿ ದೈವನೃತ್ಯ ಕಾರ್ಯ ದೇವಾಲಯದ 9 ಸುತ್ತು ನಡೆದು ನಾಡಿನ ಭಕ್ತಾದಿಗಳು ಭಕ್ತಿಭಾವದಿಂದ ಭಾಗಿಗಳಾಗಿದ್ದರು. ಇದಾದ ಬಳಿಕ ತೆರೆ ಹಾಗೂ ತಾ.21ರಂದು ಚೌಂಡಿತೆರೆ, ಅಜ್ಜಪ್ಪತೆರೆ ಅನ್ನದಾನದ ಮೂಲಕ ಈ ಬಾರಿಯ ಉತ್ಸವ ಸಂಪನ್ನಗೊಂಡಿತು.
ದೇವತಕ್ಕರು, ನಾಡತಕ್ಕರಾದ ನಾಟೋಳಂಡ ಕುಲ್ಲೇಟಿರ, ತಿರೋಡಿರ ಕುಟುಂಬದವರು ಸೇರಿದಂತೆ ಈ ವಿಭಾಗದ ಇತರ ಕುಟುಂಬಸ್ಥರು, ಭಕ್ತಾದಿಗಳು, ಮಹಿಳೆಯರು, ಅಬಾಲವೃದ್ಧರಾಗಿ ಉತ್ಸವದಲ್ಲಿ ಭಾಗಿಗಳಾಗಿದ್ದರು. ದೇವಾಲಯ ಸಮಿತಿಯ ಅಧ್ಯಕ್ಷ ಕುಲ್ಲೇಟಿರ ಮೇದಪ್ಪ, ಕಾರ್ಯದರ್ಶಿ ಅರೆಯಡ ಸೋಮಪ್ಪ ಸೇರಿದಂತೆ ಇತರ ಪದಾಧಿಕಾರಿಗಳು ಉಸ್ತುವಾರಿ ವಹಿಸಿದ್ದರು. ದೇಗುಲದ ಅರ್ಚಕ ಹರೀಶ್ ಭಟ್ ಮುಂದಾಳತ್ವದಲ್ಲಿ ಪೂಜಾ ವಿಧಿ-ವಿಧಾನಗಳು ಜರುಗಿದವು.