ಸೋಮವಾರಪೇಟೆ, ಮಾ.21: ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂದಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದ ನಿವಾಸಿ ಡಿ.ಕೆ. ಲಿಂಗರಾಜು ಎಂಬಾತನ ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಅದೇ ಗ್ರಾಮದ ಹೆಚ್.ಡಿ. ಲಿಂಗರಾಜು, ಡಿ.ಎಸ್. ಕೀರ್ತಿ ಅವರುಗಳನ್ನು ಸಿನಿಮೀಯ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದ ಪೊಲೀಸರು, ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂದಿತ ಮೂವರಿಗೂ ನ್ಯಾಯಾಧೀಶರು, ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಕಾರ್ಯಾಚರಣೆ ಸಂದರ್ಭ 14 ಲೀಟರ್ ಕಳ್ಳಭಟ್ಟಿ, 3 ಬಾಟಲ್ ರಮ್, 24 ಲೀಟರ್ ಪುಳಿಗಂಜಿ ಸೇರಿದಂತೆ ಕಳ್ಳಭಟ್ಟಿ ತಯಾರಿಸಲು ಬಳಸಲ್ಪಡುತ್ತಿದ್ದ ಪಾತ್ರೆ, ಬಿಂದಿಗೆಗಳನ್ನು ವಶಕ್ಕೆ ಪಡೆದಿದ್ದಾರೆ.
ಹೋಂಸ್ಟೇಯಲ್ಲಿ ತಂಗುವ ನೆಪದಲ್ಲಿ ರೂಂ ಪಡೆದ ಪೊಲೀಸರು, ಸ್ಥಳೀಯನೋರ್ವನ ಸಹಕಾರದಿಂದ ಕಳ್ಳಬಟ್ಟಿ ತಯಾರಿಸುವ ಅಡ್ಡೆಯ ಮಾಹಿತಿ ಪಡೆದು ದಿಢೀರ್ ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ಸಂದರ್ಭ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಕಳೆದ ಅನೇಕ ಸಮಯದಿಂದ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ತೋಳೂರುಶೆಟ್ಟಳ್ಳಿ ಗ್ರಾಮದ ಜಂಕ್ಷನ್‍ನಲ್ಲಿಯೂ ಕೆಲ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಇಂತಹ ಅಂಗಡಿಗಳ ಮೇಲೆಯೂ ಧಾಳಿ ನಡೆಸಬೇಕೆಂದು ಕೆಲ ಸ್ಥಳೀಯರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ದಿನಕರ್ ಶೆಟ್ಟಿ, ವೃತ್ತ ನಿರೀಕ್ಷಕ ನಂಜುಂಡೇಗೌಡ, ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಎಸ್.ಐ. ಮೋಹನ್‍ರಾಜ್, ಸಿಬ್ಬಂದಿಗಳಾದ ದಯಾನಂದ್, ಪ್ರಕಾಶ್, ಜೋಸೆಫ್, ಸಜಿ, ಸುರೇಶ್, ಅರುಣ್, ವಿಶ್ವ, ಶಿವಕುಮಾರ್, ಜಗದೀಶ್, ಪ್ರವೀಣ್, ಶಂಕರ್ ಅವರುಗಳು ಭಾಗವಹಿಸಿದ್ದರು.