ಮಡಿಕೇರಿ, ಮಾ. 20: ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಪಾಲೇಮಾಡುವಿನ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಸ್ಮಶಾನ ಜಾಗದ ವಿವಾದವನ್ನು ಮುಂದಿನ ಏಳು ದಿನಗಳ ಒಳಗಾಗಿ ಇತ್ಯರ್ಥಪಡಿಸದಿದ್ದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಬಹುಜನ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲೇಮಾಡುವಿನ ಪರಿಶಿಷ್ಟ ಜಾತಿಯವರಿಗೆ ಸೇರಿದ ಸ್ಮಶಾನ ಜಾಗವನ್ನು ಕ್ರಿಕೆಟ್ ಸಂಸ್ಥೆಯವರಿಗೆ ಮಂಜೂರು ಮಾಡಿದ ಪರಿಣಾಮ ಹುಟ್ಟಿಕೊಂಡಿರುವ ವಿವಾದವನ್ನು ಇದುವರೆಗೆ ಇತ್ಯರ್ಥ ಮಾಡುವಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರದ ಜೊತೆಗೆ ಯಾವದೇ ಪಕ್ಷದವರಿಗೂ ಕಾಲೋನಿಯಲ್ಲಿ ಮತಯಾಚನೆಗೆ ಅವಕಾಶ ನೀಡುವದಿಲ್ಲ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮಹಿಳಾ ಅಧ್ಯಕ್ಷೆ ಪಿ.ಎ. ಕುಸುಮಾವತಿ, ಭೀಮ ಸೇನಾ ಸಮಿತಿಯ ನಿಶಿತ್‍ಕುಮಾರ್, ಮಾಯಾದೇವಿ ಮಹಿಳಾ ಸಮಿತಿಯ ಎ.ಪಿ. ಹೇಮಾವತಿ ಹಾಗೂ ಹೆಚ್.ಆರ್. ಭವ್ಯ ಉಪಸ್ಥಿತರಿದ್ದರು.