ಮಡಿಕೇರಿ, ಮಾ. 22: ಮಡಿಕೇರಿಯ ಪುರಾತನ ದೇವಾಲಯಗಳಲ್ಲೊಂದಾದ ಶ್ರೀ ಮುತ್ತಪ್ಪ ದೇವಾಲಯದ ಆವರಣ ದಲ್ಲಿರುವ 14 ದೇವಾನುದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಮುತ್ತಪ್ಪ ದೇವರ ಜಾತ್ರೆಯು ಏ. 1 ರಿಂದ 6 ರವರೆಗೆ ಆರು ದಿನಗಳ ಕಾಲ ದೇವಾಲಯದ ತಂತ್ರಿಗಳಾದ ಕೇರಳದ ಪಂದಳಂನ ಮಾಂಗೂರ್ ಪಾರ್ಥ ಸಾರಥಿ ಸ್ಕಂದನ್ ಅವರ ನೇತೃತ್ವದಲ್ಲಿ ನಡೆಯಲಿದೆ.

ಏ. 1 ರಂದು ಸಂಜೆ 5 ಗಂಟೆಗೆ ಪ್ರಾರ್ಥನೆಯೊಂದಿಗೆ ಆರಂಭ ವಾಗಲಿದ್ದು, ಪ್ರಸಾದ ಶುದ್ದಿ, ಗಣಹೋಮ, ಕುಂಬಾಭಿಷೇಕ, ವಾಸ್ತು ಹೋಮ, ವಾಸ್ತುಬಲಿ, ಸುದರ್ಶನ ಹೋಮ ನಡೆಯಲಿದೆ. 2ರಂದು ಬೆಳಿಗ್ಗೆ 7 ಗಂಟೆಗೆ 108 ತೆಂಗಿನ ಕಾಯಿಗಳ ಮಹಾಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾಭಿಷೇಕ, ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ನಾಗದೇವರಿಗೆ ತಂಬಿಲ ಸಮರ್ಪಣೆ ನಡೆಯಲಿದೆ.

ಸಂಜೆ 6.30 ಗಂಟೆಗೆ ಧ್ವಜಾರೋಹಣವನ್ನು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ರೇಡಿಯೋ ಡಯಾಗ್ನೋಸಿಸ್ ತಜ್ಞ ಡಾ. ಚೌರೀರ ಶ್ಯಾಂ ಅಪ್ಪಣ್ಣ, ಬೆಂಗಳೂರಿನ ಉದ್ಯಮಿ ತೇನನ ರಾಜೇಶ್ ಸೋಮಣ್ಣ, ಶಸ್ತ್ರ ಚಿಕಿತ್ಸಕ ಡಾ. ಮನೋಹರ್ ಜಿ. ಪಾಟ್ಕರ್, ಬೆಳೆಗಾರ ಟಿ.ಆರ್. ವಾಸುದೇವ, ಗುತ್ತಿಗೆದಾರ ಜಿ. ಕಿಶೋರ್ ಬಾಬು, ಉದ್ಯಮಿ ಎಂ.ಎ. ಹಮೀದ್, ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಗಜಾನನ ಭಾಗವಹಿಸುವರು. ಸಂಜೆ 6.30 ಗಂಟೆಗೆ ಪಾರ್ವತಿ ದೇವಿಗೆ ದೀಪಾರಾಧನೆ ಮತ್ತು ಪುಷ್ಪಾಭಿಷೇಕ ನೆರವೇರಲಿದೆ.

ತಾ. 3ರಂದು ಬೆಳಿಗ್ಗೆ 7.30ಕ್ಕೆ ಗಣಹೋಮ, 9 ಗಂಟೆಗೆ ಮಹಾ ಮೃತ್ಯುಂಜಯ ಹೋಮ, ಮಹಾಪೂಜೆ, ಶ್ರೀ ಭೂತಬಲಿ, ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವ ನೆರವೇರಲಿದೆ. ತಾ. 4ರಂದು ಬೆಳಿಗ್ಗೆ 6 ಗಂಟೆಗೆ ದೇವಾಲಯದ ಆವರಣದಲ್ಲಿ ಶ್ರೀ ಮುತ್ತಪ್ಪ ದೇವರ ಮೋದಕ ಕಲಶ ಸ್ಥಾಪನೆ, ನಂತರ ನೀರುಕೊಲ್ಲಿ, ಕಡಗದಾಳು, ಮರಗೋಡು, ಸಂಪಿಗೆಕಟ್ಟೆ, ಮೈತ್ರಿಹಾಲ್ ಜಂಕ್ಷನ್‍ನಲ್ಲಿ ನೆರವೇರಲಿದೆ. ಸಂಜೆ 4.30 ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವದು. ಮುತ್ತಪ್ಪ ದೇವರ ವೆಳ್ಳಾಟಂ ನೆರವೇರಲಿದೆ.

ತಾ. 5ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಗಾಂಧಿ ಮೈದಾನದಿಂದ ಮುಖ್ಯ ರಸ್ತೆಯಲ್ಲಿ ಚಂಡೆ ವಾದ್ಯ, ದುಡಿಕೊಟ್ಟ್ ಪಾಟ್ ಸಹಿತ ವಿದ್ಯುತ್ ಅಲಂಕೃತ ಮಂಟಪದಲ್ಲಿ ಕಲಶ ಹಾಗೂ ತಾಲಾಪೊಲಿ ಮೆರವಣಿಗೆ ನಡೆಯಲಿದೆ. ಬೆಂಗಳೂರಿನ ಮಕ್ಕಳ ತಜ್ಞ ಡಾ. ಗೌತಂ ಆರ್. ಚೌದರಿ ದೀಪ ಬೆಳಗುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಕ್ಕಳ ತಜ್ಞ ಡಾ. ಬಿ.ಸಿ. ನವೀನ್ ಕುಮಾರ್ ಕುನ್ನತ್ತೂರು, ಪಾಡಿ ಶ್ರೀ ಮುತ್ತಪ್ಪ ಕ್ಷೇತ್ರಂನ ಮೇಲಾಯಿಪಡಿ ಮುಖ್ಯಸ್ಥ ನಾಯನಾರ್, ಕುಶಾಲನಗರದ ಉದ್ಯಮಿಗಳಾದ ಸುರೇಶ್‍ಕುಮಾರ್ ರಾವಲ್, ವಿ.ಎಂ. ವಿಜಯ ಅವರುಗಳು ಭಾಗವಹಿಸುವರು. ನಂತರ ದೇವಾಲಯದಲ್ಲಿ ಮುತ್ತಪ್ಪ ದೇವರ ಮಲೆ ಇಳಿಸುವದು. ಶಾಸ್ತಪ್ಪ ದೇವರ ವೆಳ್ಳಾಟಂ, ಮುತ್ತಪ್ಪ ದೇವರ ವೆಳ್ಳಾಟಂ, ಮೇಲೇರಿಗೆ ಅಗ್ನಿ ಸ್ಪರ್ಶ, ರಾತ್ರಿ 8.40 ರಿಂದ 10.30ರವರೆಗೆ ಅನ್ನದಾನ, ಪೊವ್ವದಿ ವೆಳ್ಳಾಟಂ, ವಿಷ್ಣುಮೂರ್ತಿ ವೆಳ್ಳಾಟಂ, ಶಿವಭೂತ ತೆರೆ, ಗುಳಿಗ ದೇವರ ತೆರೆ, ಕುಟ್ಟಿಚಾತನ್ ದೇವರ ತೆರೆ, ಕಳಗ ಪಾಟ್, ಸಂಧ್ಯಾವೇಲೆ ನಡೆಯಲಿದೆ.

ತಾ. 6ರಂದು ಬೆಳಿಗ್ಗೆ 4 ಗಂಟೆಗೆ ಶ್ರೀ ಮುತ್ತಪ್ಪ ಮತ್ತು ತಿರುವಪ್ಪ ದೇವರ ತೆರೆ, ವಿಷ್ಣುಮೂರ್ತಿ ದೇವರ ಮೇಲೇರಿ, ಪೊವ್ವದಿ ತೆರೆ, ವಿಷ್ಣುಮೂರ್ತಿ ದೇವರ ಬಾರಣೆ ನಡೆಯಲಿದ್ದು, 11.30ಕ್ಕೆ ಧ್ವಜ ಅವರೋಹಣ ನೆರವೇರಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.