ಕುಶಾಲನಗರ, ಮಾ. 22: ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಎಸ್‍ಎನ್‍ಎಲ್ ಸಂಸ್ಥೆಯ ನೌಕರರಿಗೆ ವೇತನ ಪಾವತಿಸಲು ವಿಳಂಬ ವಾಗಿರುವ ಬೆಳವಣಿಗೆಯೊಂದು ನಡೆದಿದೆ.

ಸರಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಯಮಿತ ತೀವ್ರ ನಷ್ಟದಲ್ಲಿರುವ ಕಾರಣ ಕೊಡಗು ಜಿಲ್ಲೆ ಸೇರಿದಂತೆ ದೇಶಾದ್ಯಂತ ಇರುವ ಬಿ.ಎಸ್.ಎನ್.ಎಲ್.ನ ಅಂದಾಜು 1.76 ಲಕ್ಷ ನೌಕರರಿಗೆ ಫೆಬ್ರವರಿ ತಿಂಗಳ ಸಂಬಳ ಪಾವತಿಸಲು ಸುಮಾರು 15 ದಿನ ತಡವಾಗಿರುವದು ಇದನ್ನು ಪುಷ್ಠೀಕರಿಸಿದೆ.

ಕೊಡಗು ಜಿಲ್ಲೆಯ ಸುಮಾರು 250 ಮಂದಿ ಸಿಬ್ಬಂದಿಗಳು ಕೂಡ ವೇತನ ಇಲ್ಲದೆ ಆತಂಕಕ್ಕೆ ಸಿಲುಕಿದ್ದರು. ನಷ್ಟದ ಜೊತೆಗೆ ಬಿಎಸ್‍ಎನ್‍ಎಲ್ ಕಂಪೆನಿ ಖಾಸಗಿ ದೂರಸಂಪರ್ಕ ಕಂಪೆನಿಗಳಿಂದ ತೀವ್ರ ಪೈಪೋಟಿಯನ್ನು ಎದುರಿಸುತ್ತಿರುವದೇ ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಸಾಮಾನ್ಯವಾಗಿ ಬಿಎಸ್‍ಎನ್‍ಎಲ್ ನೌಕರರಿಗೆ ತಿಂಗಳ ಕೊನೆಯ ದಿನ ಸಂಬಳ ಪಾವತಿಸುವದು ವಾಡಿಕೆ. ಆದರೆ ಮಾರ್ಚ್ ಎರಡನೇ ವಾರ ಕಳೆದರೂ ನೌಕರರಿಗೆ ಫೆಬ್ರವರಿ ತಿಂಗಳ ವೇತನ ಪಾವತಿಯಾಗದೆ ದೇಶದ ಲಕ್ಷಾಂತರ ಅಧಿಕಾರಿ, ಸಿಬ್ಬಂದಿಗಳು ಅನಾನುಕೂಲಕ್ಕೆ ಒಳಗಾಗಬೇಕಾದ ಪರಿಸ್ಥಿತಿಯೂ ಸೃಷ್ಠಿಯಾಗಿತ್ತು.

ದೇಶದ ಜಮ್ಮು-ಕಾಶ್ಮೀರ ಮತ್ತು ಕೇರಳ ದೂರಸಂಪರ್ಕ ವೃತ್ತಗಳನ್ನು ಹೊರತುಪಡಿಸಿದರೆ ಇನ್ನುಳಿದ 20 ದೂರ ಸಂಪರ್ಕ ವೃತ್ತಗಳಲ್ಲಿನ ನೌಕರರಿಗೆ ಪ್ರತಿ ತಿಂಗಳು ಪಾವತಿಸಬೇಕಾದ ರೂ. 1200 ಕೋಟಿ ಸಂಬಳ ಪಾವತಿಸಲು ಬಿಎಸ್‍ಎನ್‍ಎಲ್ ನಷ್ಟದ ಹೆಸರಿನಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿದೆ. ಆದರೆ ಸಂಸ್ಥೆಯ ನಿರ್ವಹಣೆ ಮತ್ತು ನಿವೃತ್ತಿಯಾದ ನೌಕರರ ಪಿಂಚಣಿಗೆ ಯಾವದೇ ಕೊರತೆ ಎದುರಾಗಿಲ್ಲ. ನಿರ್ವಹಣೆಗೆ ಬ್ಯಾಂಕುಗಳಿಂದ ಸಾಲ ಪಡೆದು ಕಾರ್ಯ ನಿರ್ವಹಿಸುತ್ತಿದ್ದರೆ, ನಿವೃತ್ತ ನೌಕರರಿಗೆ ಕೇಂದ್ರ ಸರಕಾರ ಪಿಂಚಣಿ ಪಾವತಿಸುತ್ತಿದೆ.

ಪ್ರತಿ ವರ್ಷ ವೇತನದ ಖರ್ಚು ಶೇ. 8 ರಷ್ಟು ಹೆಚ್ಚಾಗುತ್ತಿದ್ದು ಆದಾಯದ ಕೊರತೆ ಕಾಣುತ್ತಿದೆ. ಸಂಸ್ಥೆಯ ಆದಾಯ ಶೇ. 55 ರಷ್ಟು ಭಾಗ ನೌಕರರ ಸಂಬಳಕ್ಕೆ ತಗಲುತ್ತಿದೆ. ಸಂಸ್ಥೆ ತನ್ನ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯ ಪ್ರಸ್ತಾವನೆಯನ್ನು ನೀಡಿದ್ದು ಈ ಮೂಲಕ ತನ್ನ ನಷ್ಟವನ್ನು ಕಡಿಮೆ ಮಾಡುವ ಚಿಂತನೆ ಕೂಡ ಹರಿಸಿದೆ ಎನ್ನಲಾಗಿದೆ. ಈಗಾಗಲೆ ರಾಷ್ಟ್ರದಾದ್ಯಂತ ಇರುವ ಬಿಎಸ್‍ಎನ್‍ಎಲ್ ಸಂಸ್ಥೆಯ ಆಸ್ತಿಯ ಮೌಲ್ಯಮಾಪನ ಕೂಡ ನಡೆಸಲಾಗಿದ್ದು ಮುಂದಿನ ಬೆಳವಣಿಗೆ ಕೇಂದ್ರ ಸರಕಾರದ ಅಂಗಳದಲ್ಲಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಗೊಂದಲಗಳ ನಡುವೆ ಸಂಸ್ಥೆಯ ಸಿಬ್ಬಂದಿಗಳು ತಮ್ಮ ಜೀವನದ ಭದ್ರತೆ ಬಗ್ಗೆ ಆತಂಕ ಎದುರಿಸುವಂತಾಗಿದೆ. ಈ ನಡುವೆ ವಾರದ ಹಿಂದೆ ಬಿಎಸ್‍ಎನ್‍ಎಲ್ ತನ್ನ ಸಿಬ್ಬಂದಿಗಳಿಗೆ ಫೆಬ್ರವರಿ ತಿಂಗಳ ವೇತನ ಪಾವತಿಸಿದ್ದರೂ ಮುಂದಿನ ದಿನಗಳ ಬೆಳವಣಿಗೆ ಬಗ್ಗೆ ನೌಕರರು ಆತಂಕದೊಂದಿಗೆ ತಮ್ಮ ಕೆಲಸ ನಿರ್ವಹಿಸುತ್ತಿರುವದು ಪ್ರಸಕ್ತ ಬೆಳವಣಿಗೆಯಾಗಿದೆ.

- ಚಂದ್ರಮೋಹನ್