ಗಿರೀಶ್ ಪೆರಾಜೆ/ಕಿರಣ್ ಪೆರಾಜೆ
ಮಡಿಕೇರಿ, ಮಾ. 20: ಮಂಗಳವಾರ ರಾತ್ರಿ ಮಡಿಕೇರಿ ಸಮೀಪ ಅಪಘಾತದಲ್ಲಿ ದುರ್ಮರಣಕ್ಕೀಡಾದ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಪಾಜೆ ಪಯಸ್ವಿನಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಾಲಚಂದ್ರ ಕಳಗಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕೊಡಗು ಸಂಪಾಜೆಯ ಅವರ ಜಾಗದಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು.
ಮಂಗಳವಾರ ರಾತ್ರಿಯೇ ಮಡಿಕೇರಿಯಿಂದ ಮೃತದೇಹವನ್ನು ಕಳಗಿಯ ಅವರ ಮನೆಗೆ ತರಲಾಗಿತ್ತು. ರಾತ್ರಿಯಿಂದಲೇ ಜನಪ್ರವಾಹ ಇತ್ತ ಹರಿದು ಬರತೊಡಗಿತ್ತು. ಬುಧವಾರ ಬೆಳಗ್ಗಿನಿಂದ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು, ಬಂಧುಮಿತ್ರರು ಆಗಮಿಸಿ ಅಂತಿಮ ದರ್ಶನ ಪಡೆದರು; ಕಣ್ಣೀರು ಸುರಿಸಿದರು. ಪಕ್ಷ, ಜಾತಿ ಬೇಧ ಮರೆತು ಎಲ್ಲರೂ ಬಾಲಚಂದ್ರ ಕಳಗಿಯವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು. ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ, ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಡಿಸಿಸಿ ಬ್ಯಾಂಕ್ನ ನಿರ್ದೇಶಕ ಕೆ.ಎಸ್. ದೇವರಾಜ್, ಟೆಲಿಕಾಂ ಸಲಹಾ ಸಮಿತಿ ಸದಸ್ಯ ವೆಂಕಟ್ ದಂಬೆಕೋಡಿ, ಬಿಜೆಪಿ ಮುಖಂಡರಾದ ಎ.ವಿ.ತೀರ್ಥರಾಮ್, ಜಯಪ್ರಕಾಶ್ ಕುಂಚಡ್ಕ, ಪಿ.ಕೆ.ಉಮೇಶ್, ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ರಾಮ್ ಸುಳ್ಳಿ, ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಸೇರಿದಂತೆ ಮಡಿಕೇರಿ ಹಾಗೂ ಸುಳ್ಯದ ಸಾವಿರಾರು ಮಂದಿ ಈ ಸಂದರ್ಭದಲ್ಲಿ ಸೇರಿದ್ದರು.
ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯಿತು. ಮನೆಯಿಂದ ಆರಂಭಗೊಂಡ ಮೆರವಣಿಗೆಯು ಕೊಯಿನಾಡು ಬಳಿಯ ಚಡಾವು ಬಳಿ ಸಾಗಿ ಹಿಂತಿರುಗಿ ಕೊಡಗು ಸಂಪಾಜೆ ಸೊಸೈಟಿವರೆಗೆ ಬಂದು ವಾಪಾಸ್ ತೆರಳಿ ಅಂತ್ಯಸಂಸ್ಕಾರ ನಡೆಸಲಾಯಿತು. ಸಾವಿರಾರು ಮಂದಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ನೂರಾರು ಮಂದಿ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಂದ್: ಅಗಲಿದ ನಾಯಕ ಬಾಲಚಂದ್ರ ಕಳಗಿಯವರ ಗೌರವಾರ್ಥ ಪೆರಾಜೆ, ಚೆಂಬು, ಕಲ್ಲುಗುಂಡಿ, ಕೊಡಗು ಸಂಪಾಜೆ, ಕೊಯಿನಾಡುಗಳಲ್ಲಿ ಬಂದ್ ಆಚರಿಸಲಾಯಿತು. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಸಾಪದಿಂದ ಶ್ರದ್ಧಾಂಜಲಿ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಆಹ್ವಾನಿತರಾಗಿದ್ದ ಬಾಲಚಂದ್ರ ಕಳಗಿಯವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ. ದಯಾನಂದ ಕೂಡಕಂಡಿ, ಜಿಲ್ಲಾ ಸಮಿತಿಯ ನಿರ್ದೇಶಕರಾದ ನಾಗರಾಜಶೆಟ್ಟಿ, ಲೀಲಾಧರ್ ಮತ್ತು ಮಡಿಕೇರಿ ತಾಲೂಕು ಸಮಿತಿಯ ನಿರ್ದೇಶಕರಾದ ಸುನಿತಾ ಇದ್ದರು.