ಶ್ರೀಮಂಗಲ, ಮಾ. 20: ಕೊಡಗಿನ ಗಡಿ ಪ್ರದೇಶವಾದ ಕುಟ್ಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ ವ್ಯಕ್ತಿಯೊಬ್ಬರಿಗೆ ತುರ್ತು ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಮಣಿದು ಬುಧವಾರದಿಂದಲೇ ಜಾರಿಗೆ ಬರುವಂತೆ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರೊಬ್ಬರು ಹಾಗೂ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಹೆಚ್ಚುವರಿ ವೈದ್ಯರನ್ನು ನಿಯೋಜಿಸಲು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಅವರ ಆದೇಶದ ಪ್ರತಿಯನ್ನು ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಅವರು ಪ್ರತಭಟನಾಕಾರರಿಗೆ ಖುದ್ದು ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ಸು ಪಡೆದರು.ಕುಟ್ಟ ಕೆ. ಬಾಡಗದ ಕೆಂಬುಕೊಲ್ಲಿ ನಿವಾಸಿ ಟ್ಯಾಕ್ಸಿ ಚಾಲಕ ಮಣಿ (35) ಅವರು ಕುಟ್ಟಕ್ಕೆ ಎಂದಿನಂತೆ ತಮ್ಮ ಜೀಪಿನಲ್ಲಿ ಕರ್ತವ್ಯಕ್ಕೆ ಬೆಳಗ್ಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡು ಇತರ ಚಾಲಕರು ಕೂಡಲೇ ಕುಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸೆಗಾಗಿ ಕರೆತಂದರೆನ್ನ ಲಾಗಿದೆ. ಆದರೆ ಕೇಂದ್ರದಲ್ಲಿ ಯಾವುದೇ ವೈದ್ಯರು ಇರಲಿಲ್ಲ. ಸಿಬ್ಬಂದಿಗಳು ಸಹ ತುರ್ತು ಚಿಕಿತ್ಸೆ ನೀಡಲು ಬರಲಿಲ್ಲವೆಂದು ಆಕ್ರೋಶ ವ್ಯಕ್ತಗೊಂಡಿತ್ತು. ನಂತರ ಕುಟ್ಟದ ಖಾಸಗಿ ಕ್ಲಿನಿಕ್‍ಗೆ ಕರೆದೊಯ್ದು ಚಿಕಿತ್ಸೆ ನೀಡುತ್ತಿದ್ದ ಸಂದರ್ಭ ಮಣಿ ಅವರು ಮೃತಪಟ್ಟಿದ್ದರು.

ಇದರಿಂದ ತೀವ್ರ ಆಕ್ರೋಶ ಗೊಂಡ ಕುಟ್ಟ ವ್ಯಾಪ್ತಿಯ ವಿವಿಧ ರಾಜಕೀಯ ಪಕ್ಷದ ಪ್ರಮುಖರು ಕಾರ್ಯಕರ್ತರು, ಸಂಘ ಸಂಸ್ಥೆಯ ಪ್ರಮುಖರು, ಬೆಳೆಗಾರರು, ಕಾರ್ಮಿಕರು, ವ್ಯಾಪಾರಿಗಳು, ಆಟೋ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿದರು. ಮಣಿಯವರಿಗೆ ತುರ್ತು ಚಿಕಿತ್ಸೆ ಲಭಿಸಿದಲ್ಲಿ ಅವರು ಬದುಕುತ್ತಿದ್ದರು ಎಂದು ಕಿಡಿಕಾರಿದರು. ಅಲ್ಲದೆ ಕಳೆದ ವಾರ ಕೂಡ ಪುಟ್ಟ ಬಾಲಕಿಯನ್ನು (ಮೊದಲ ಪುಟದಿಂದ) ಜ್ವರದಿಂದ ಆಸ್ಪತ್ರೆಗೆ ಕರೆತಂದ ಸಂದರ್ಭ ಸೂಕ್ತ ಚಿಕಿತ್ಸೆ ಲಭ್ಯವಾಗಲಿಲ್ಲ. ನಂತರ ಕೇರಳದ ಮೇಪಾಡಿ ಮೆಡಿಕಲ್ ಕಾಲೇಜಿಗೆ ದಾಖಲಿಸಿದರೂ ವಿಳಂಬವಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿತ್ತು. ಜನ ಸಾಮಾನ್ಯರಿಗೆ ಸೂಕ್ತ ಚಿಕಿತ್ಸೆ ನೀಡಲು ಕೇಂದ್ರದಲ್ಲಿ ವೈದ್ಯರು ಇಲ್ಲದಿರುವದೆ ಇದಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವಾರ ಮಗು ಮೃತಪಟ್ಟ ಸಂದರ್ಭ ಸಾರ್ವಜನಿಕರು ಪ್ರತಿಭಟನೆ ನಡೆಸಿದಾಗ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಆಗಮಿಸಿ ಕೇಂದ್ರದಲ್ಲಿ ಕರ್ತವ್ಯ ನಿಯೋಜನೆಗೊಂಡಿರುವ ವೈದ್ಯರಾದ ಡಾ. ಸತೀಶ್ ಅವರನ್ನು ವಾರದ ಎಲ್ಲಾ ದಿನ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜಿಸುವ ಭರವಸೆ ನೀಡಿದ್ದರು ಆದರೆ ಅವರ ಭರವಸೆಯಂತೆ ವೈದ್ಯರನ್ನು ನೇಮಿಸಿಲ್ಲ, ಇದೇ ವೈದ್ಯರನ್ನು ಕುಟ್ಟ ಮತ್ತು ಕಾಕೋಟುಪರಂಬುವಿಗೆ ನಿಯೋಜನೆ ಮಾಡಿರುವದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಕಳೆದ ಒಂದು ತಿಂಗಳಿನಿಂದ ಹಲವು ಪ್ರಕರಣಗಳಲ್ಲಿ ಕೇಂದ್ರಕ್ಕೆ ತುರ್ತು ಚಿಕಿತ್ಸೆಗಾಗಿ ಆಗಮಿಸಿದ ಸಂದರ್ಭ ಚಿಕಿತ್ಸೆ ಲಭ್ಯವಾಗದೆ ಸುಮಾರು 8 ರೋಗಿಗಳು ಮೃತಪಟ್ಟಿದ್ದಾರೆ. ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸಬೇಕು ದಿನದ 24 ಗಂಟೆಯು ವೈದ್ಯರು ಲಭ್ಯವಿರಬೇಕು ಎಂದು ಕುಟ್ಟ ಪಟ್ಟಣದಲ್ಲಿ ನಡೆಸಿದ ಪ್ರತಿಭಟಣೆಯಿಂದ ಕುಟ್ಟ – ಮಾನಂದವಾಡಿ ಅಂತರಾಜ್ಯ ಹೆದ್ದಾರಿ, ಕುಟ್ಟ - ಕಾನೂರು ಹೆದ್ದಾರಿ, ಕುಟ್ಟ - ಶ್ರೀಮಂಗಲ ಹೆದ್ದಾರಿಗಳಲ್ಲಿ ಸಂಚಾರ ಬೆಳಗ್ಗೆ 10 ಘಂಟೆಯಿಂದ 1 ಗಂಟೆವರೆಗೆ ಸ್ಥಗಿತವಾಗಿತ್ತು.

ಕರ್ತವ್ಯ ನಿಮಿತ ಬೆಂಗಳೂರಿಗೆ ತೆರಳಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಅವರ ಆದೇಶÀದಂತೆ, ಪ್ರತಿಭಟಣೆಗೆ ಮಣಿದು ಕುಟ್ಟ ಆಸ್ಪತ್ರೆಗೆ ತಾತ್ಕಲಿಕವಾಗಿ ಖಾಯಂ ವೈದ್ಯರನ್ನು ಮತ್ತು ರಾತ್ರಿ ಪಾಳಿಯಲ್ಲಿ ಸೇವೆ ಸಲ್ಲಿಸಲು ವೈದ್ಯರನ್ನು ನಿಯೋಜಿಸಿರುವ ಆದೇಶ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಅವರು ನೀಡಿದರು.

ಆದೇಶ ಪತ್ರದಂತೆ ಕುಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಸತೀಶ್ ಅವರು ಕಾಕೋಟುಪರಂಬು ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುವದನ್ನು ವಾಪಸ್ಸು ಪಡೆದು ಅವರನ್ನು ಕುಟ್ಟದಲ್ಲಿಯೇ ವಾರದ ಎಲ್ಲಾ ದಿನ ಸೇವೆ ಸಲ್ಲಿಸಲು ನಿಯೋಜನೆ, ಅಲ್ಲದೆ ಹುದಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ರೇಖಾ ಪ್ರತಿ ಸೋಮವಾರ, ಕಲ್ಲಹಳ್ಳ ಸಂಚಾರಿ ಗಿರಿಜನ ಆರೋಗ್ಯ ಘಟಕದ ಡಾ. ರವೀಂದ್ರ ಪ್ರತಿ ಬುಧವಾರ, ಬಾಳಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಪ್ರತಾಪ್ ಅವರು ಪ್ರತಿ ಶುಕ್ರವಾರ ರಾತ್ರಿ ಪಾಳಿಯಲ್ಲಿ ಸೇವೆ ಸಲ್ಲಿಸಲು ನಿಯೋಜನೆ. ಅಲ್ಲದೆ ಮಂಗಳವಾರ ಮತ್ತು ಗುರುವಾರ ರಾತ್ರಿ ಪಾಳಿಯಲ್ಲಿ ಕೇಂದ್ರದ ಖಾಯಂ ವೈದ್ಯರಾದ ಡಾ. ಸತೀಶ್ ಅವರನ್ನು ನಿಯೋಜನೆ ಮಾಡಿರುವ ಪತ್ರವನ್ನು ಪ್ರತಿಭಟನಾಕಾರರಿಗೆ ನೀಡಿದರು.

ಕೇಂದ್ರದಲ್ಲಿ 24 ಗಂಟೆ ಇಂದಿನಿಂದಲೇ ಜಾರಿಗೆ ಬರುವಂತೆ ವೈದ್ಯರು ಲಭ್ಯವಿರಬೇಕು. ನೀಡಿರುವ ಭರವಸೆಯಂತೆ ನಡೆದುಕೊಳ್ಳಬೇಕು ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವದು. ಕೇಂದ್ರಕ್ಕೆ ತುರ್ತು ಚಿಕಿತ್ಸೆಗೆ ಆಗಮಿಸುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದೆ ಜೀವ ಹಾನಿ ಉಂಟಾದಲ್ಲಿ ತೀವ್ರ ತರದ ಪ್ರತಿಭಟಣೆ ನಡೆಸುವದಾಗಿ ಎಚ್ಚರಿಸಿ ಪ್ರತಿಭಟನೆ ಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಪ್ರಮುಖರಾದ ಹೆಚ್.ವೈ. ರಾಮಕೃಷ,್ಣ ನವೀನ್ ಅಯ್ಯಪ್ಪ, ಚೋಡುಮಾಡ ದಿನೇಶ್, ಪ್ರಕಾಶ್ ಉತ್ತಪ್ಪ, ಪೆಮ್ಮಣಮಾಡ ನವೀನ್, ಜಾಯ್, ರೆಮ್ಮಿ, ಬೊಳ್ಳೇರ ವಿನಯ್, ಹೊಟ್ಟೆಂಗಡ ತಿಮ್ಮಯ್ಯ, ಚಟ್ಟಮಾಡ ಅನಿಲ್, ತೀತೀರ ದರ್ಶನ್, ಕಾರ್ಮಿಕ ಸಂಘಟನೆಯ ಮುಖಂಡ ನಾಗರಾಜು ಆಟೋಚಾಲಕರ ಸಂಘದ ಸುರೇಶ್, ರೋಸಮ್ಮ, ಪುಷ್ಪ, ಸಿ.ಎನ್. ಸುಬ್ರಮಣಿ, ಗ್ರಾ.ಪಂ. ಸದಸ್ಯರಾದ ಸುಲೈಮಾನ್, ರಂಜಿತ್‍ಕುಮಾರ್, ವಿಜಯ್ ಮತ್ತು ಮುಂಡುಮಾಡ ಕರುಂಬಯ್ಯ ಮತ್ತಿತರರು ಹಾಜರಿದ್ದರು.

ಡಿವೈಎಸ್‍ಪಿ ನಾಗಪ್ಪ, ಸಿ.ಐ.ಗಳಾದ ಮಹೇಶ್, ಕ್ಯಾತೆಗೌಡ, ವಸಂತ್, ಶ್ರೀಮಂಗಲ ಎಸ್.ಐ. ಮರಿಸ್ವಾಮಿ, ಪೊನ್ನಂಪೇಟೆ ಎಸ್.ಐ. ಮಹೇಶ್, ವೀರಾಜಪೇಟೆ ಗ್ರಾಮಾಂತರ ಎಸ್.ಐ. ಸುರೇಶ್ ಬೋಪಣ್ಣ, ಕುಟ್ಟ ಎ.ಎಸ್.ಐ. (ಪ್ರಭಾರ ಎಸ್.ಐ) ಮೊಹಿದ್ದೀನ್ ಬಂದೋಬಸ್ತ್ ಕಲ್ಪಿಸಿದ್ದರು.