ಮಡಿಕೇರಿ, ಮಾ. 20: ಕಳೆದ ಐದು ವರ್ಷಗಳಿಂದ ಕೊಡಗು ಜಿಲ್ಲೆಗೆ ಕೇಂದ್ರ ಸರಕಾರ ಹಾಗೂ ಸಂಸದರ ಕೊಡುಗೆ ಶೂನ್ಯ ಎಂದು ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಸಂಭಾವ್ಯ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಟೀಕಿಸಿದ್ದಾರೆ.ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ನಾಲ್ಕು ಬ್ಲಾಕ್‍ಗಳ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಸಿದ್ಧತಾ ಶಿಬಿರಕ್ಕೆ ಆಗಮಿಸಿದ್ದ ಸಂದರ್ಭ ಮಾತ ನಾಡಿದರು. ತಾನು ಮೂರು ದಿನಗಳಿಂದ ಜಿಲ್ಲೆಯಲ್ಲಿ ಬೂತ್‍ಮಟ್ಟದಲ್ಲಿ ಪ್ರವಾಸ ಮಾಡುತ್ತಿದ್ದು, ಜನತೆಯ ಬಳಿ ಅವಲೋಕನ ಮಾಡಿದಾಗ ಕಳೆದ 5 ವರ್ಷಗಳಲ್ಲಿ ಜಿಲ್ಲೆಗೆ ಕೇಂದ್ರದ ಕೊಡುಗೆ ಶೂನ್ಯವೆಂದು ತಿಳಿದುಬಂದಿದೆ. ಸಂಸದರ ಕೊಡುಗೆ ಕೂಡ ಶೂನ್ಯವಾಗಿದೆ. ಪ್ರಕೃತಿ ವಿಕೋಪ ಉಂಟಾದ ಸಂದರ್ಭ ಕೇಂದ್ರದ ಯಾವದೇ ಸಚಿವರುಗಳು ಜಿಲ್ಲೆಗೆ ಭೇಟಿ ನೀಡಿಲ್ಲ. ನಿರ್ಮಲಾ ಸೀತಾರಾಂ ಅವರು (ಮೊದಲ ಪುಟದಿಂದ) ಸಾಂಕೇತಿಕವಾಗಿ ಬಂದು ಹೋಗಿದ್ದಾರಷ್ಟೇ. ಕೇಂದ್ರದಿಂದ ಸೂಕ್ತ ಪರಿಹಾರ ಕೂಡ ಸಿಕ್ಕಿಲ್ಲ; ಸಿಕ್ಕಿರುವ ಪರಿಹಾರವನ್ನು ಅರ್ಹರಿಗೆ ತಲಪಿಸುವ ನಿಟ್ಟಿನಲ್ಲೂ ಪ್ರಯತ್ನಿಸಿಲ್ಲ. ಇವೆಲ್ಲ ಈ ಬಾರಿಯ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

ಜನತೆ ಬದಲಾಗಿದ್ದಾರೆ. ಪರ್ಯಾಯ ಸರಕಾರದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಅನ್ನು ಬೆಂಬಲಿಸಬೇಕೆಂಬ ನಿಲುವು ತಳೆದಿದ್ದಾರೆ. ಇದರಲ್ಲಿ ಯಾವದೇ ವ್ಯತ್ಯಾಸವಾಗುವದಿಲ್ಲ, ಮೈತ್ರಿ ಅಭ್ಯರ್ಥಿಯನ್ನು ಜನತೆ ಗೆಲ್ಲಿಸಲಿದ್ದಾರೆಂದು ಹೇಳಿದರು.

25ರಂದು ನಾಮಪತ್ರ

ತಾ. 23ರಂದು ದೇಶಾದ್ಯಂತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ತಾ. 25ರಂದು ರಾಜ್ಯ- ರಾಷ್ಟ್ರ ನಾಯಕರುಗಳ ಸಮ್ಮುಖದಲ್ಲಿ ಮಧ್ಯಾಹ್ನ 1ರಿಂದ 2 ಗಂಟೆಯ ಅವಧಿಯಲ್ಲಿ ನಾಮಪತ್ರ ಸಲ್ಲಿಸುವದಾಗಿ ಅವರು ಹೇಳಿದರು. ತಾನು ಮತಯಾಚನೆಗೆ ಬಂದಿಲ್ಲ. ಇದೀಗ ಸಂಘಟನೆ ಮುಖ್ಯ. ಚುನಾವಣೆಗೆ ರಣತಂತ್ರ ರೂಪಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಗೆಲ್ಲಬೇಕೆಂಬ ತಯಾರಿಯಲ್ಲಿರುವದಾಗಿ ಹೇಳಿದರು.

ಮೈತ್ರಿ ಪಕ್ಷವಾಗಿರುವ ಜೆಡಿಎಸ್‍ನವರು ಉತ್ತಮ ರೀತಿಯಲ್ಲಿ ಬೆಂಬಲ ನೀಡುತ್ತಿದ್ದಾರೆ. ಯಾವದೇ ಬಿರುಕಿಲ್ಲ; ಒಗ್ಗಟ್ಟಿನ ಮೂಲಕ ಚುನಾವಣೆ ಎದುರಿಸುತ್ತೇವೆಂದು ಅವರು ಹೇಳಿದರು.

‘ಮಿಡ್‍ನೈಟ್’ ಸರಕಾರ

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೆಪಿಸಿಸಿ ಪ್ರಮುಖ ಮುರಳೀಧರ ಹಾಲಪ್ಪ ಅವರು ಕೇಂದ್ರದಲ್ಲಿರೋದು ಈಗ ‘ಮಿಡ್‍ನೈಟ್’ ಸರಕಾರವೆಂದು ವ್ಯಂಗ್ಯವಾಡಿದರು. ನೋಟು ಅಮಾನ್ಯೀಕರಣವಾಗಿದ್ದು ಮಧ್ಯರಾತ್ರಿಯಲ್ಲಿ, ಜಿಎಸ್‍ಟಿ ಜಾರಿಯಾಗಿದ್ದು ಮಧ್ಯರಾತ್ರಿಯಲ್ಲಿ, ಆರ್‍ಬಿಐ ಗವರ್ನರ್ ಹಾಗೂ ನಿರ್ದೇಶಕರುಗಳು ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿ ಸಿಬಿಐ ಧಾಳಿ ನಡೆಸಿದ್ದು ಎಲ್ಲವೂ ನಡುರಾತ್ರಿಯಲ್ಲೇ. ಈ ದೇಶದಲ್ಲಿ ರಾತ್ರಿ ಅವಾಂತರಗಳು ನಡೆಯುತ್ತಿವೆ. ಇವುಗಳನ್ನು ನಿಲ್ಲಿಸಲು ಎಲ್ಲರ ಸಹಕಾರ ಇರಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ದೇಶದ ಆಡಳಿತ ಚುಕ್ಕಾಣಿ ಹಿಡಿದವರು ಇದುವರೆಗ ಮಾಧ್ಯಮದವರನ್ನು ಭೇಟಿ ಮಾಡಿ, ಪತ್ರಿಕಾಗೋಷ್ಠಿ ಮಾಡಿ ಮಾತನಾಡಿಲ್ಲ. ಮಾಧ್ಯಮದೆದುರು ಬರಲು ಭಯ ಏಕೆ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ಮೋದಿ ಅವರು ಇದುವರೆಗೆ ನಡೆಸಿದ 8 ಪತ್ರಿಕಾಗೋಷ್ಠಿಗಳೂ ಕೂಡ ವಿದೇಶದಲ್ಲಿ ಆಗಿವೆ. ಆಕಾಶವಾಣಿ ಮೂಲಕ ಅವರ ಮಾತುಗಳನ್ನು ಕೇಳಬೇಕಾಗಿದೆ ಎಂದು ಹೇಳಿದರಲ್ಲದೆ, ಇನ್ನೀಗ ಬಂದೇ ಬರುತ್ತಾರೆ. ಆಗ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಬೇಕೆಂದು ಹೇಳಿದರು. ಪುಲ್ವಾಮ ಧಾಳಿಯಾದಾಗಲೂ ಪ್ರಧಾನಿಯಿಂದ ಹಿಡಿದು ಯಾವದೇ ಸಚಿವರುಗಳು ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಆರೋಪಿಸಿದ ಅವರು, ಇದೀಗ ಬೂತ್ ಮಟ್ಟದ ಕಾರ್ಯಕರ್ತರು ಚರ್ಚಿಸಬೇಕಾದ ಕಾಲ ಬಂದಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಬಂದ ಬಳಿಕ ಯಾವದೇ ಸರಕಾರ ಇದುವರೆಗೆ ರೈತರ ಮೇಲೆ ತೆರಿಗೆ ವಿಧಿಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಕೇಂದ್ರ ಸರಕಾರ ಜಿಎಸ್‍ಟಿ ಮೂಲಕ ತೆರಿಗೆ ವಿಧಿಸಿದೆ. ಯುಪಿಎ ಸರಕಾರದ ಯೋಜನೆಯ ಹೆಸರು ಬದಲಿಸಿ ಫಸಲ್ ಭೀಮಾ ಯೋಜನೆ ಎಂಬ ವಿಮಾ ಯೋಜನೆ ಮಾಡಿ ಕಾರ್ಪೋರೇಟ್ ವಿಮಾ ಸಂತ್ರಸ್ತರಿಗೆ 14685 ಕೋಟಿ ಹಣ ಪಾವತಿ ಸಲಾಗಿದೆ. ಆದರೆ ರೈತರಿಗೆ ಸಿಕ್ಕಿದ್ದು ಕೇವಲ 4618 ಕೋಟಿ. ಇಂತವುಗಳನ್ನು ಪ್ರಶ್ನೆ ಮಾಡಿದರೆ ರಾಷ್ಟ್ರದ್ರೋಹಿಗಳೆಂಬ ಪಟ್ಟ ಕಟ್ಟುತ್ತಾರೆಂದು ಹೇಳಿದರು.

ನಾವು ಹೆಣ್ಣಿನ ಕಡೆಯವರು

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಮೈತ್ರಿ ಸರಕಾರವಿದ್ದು, ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಿದ್ದಾರೆ. ಇಲ್ಲಿ ನಾವು ಹೆಣ್ಣಿನ ಕಡೆಯವರ ಹಾಗೆ ಸೌಮ್ಯವಾಗಿರಬೇಕು. ನಾವೇ ತಲೆಬಾಗಿ ಜೆಡಿಎಸ್‍ನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸಿ ಮುಂದಕ್ಕೆ ಹೋಗೋಣವೆಂದು ಕರೆ ನೀಡಿದರು. ಇದೊಂದು ಚಟುವಟಿಕೆ ಆಧಾರಿತ ಕಾರ್ಯಕ್ರಮವಾಗಿದೆ. ಕಾರ್ಯಕರ್ತರು ಆತ್ಮಸ್ಥೈರ್ಯ, ನಾಯಕತ್ವ ಗುಣ ತುಂಬಿಕೊಳ್ಳಲು ಸಹಕಾರಿಯಾಗಲಿದೆ. ಯಾರಲ್ಲಿ ಏನೇ ಸಿಟ್ಟು, ಅಸಮಾಧಾನಗಳಿದ್ದರೆ ರೈತ ವಿರೋಧಿ, ಮನುಷ್ಯ ವಿರೋಧಿ ಬಿಜೆಪಿ ಪಕ್ಷದ ಮೇಲೆ ತೀರಿಸಿಕೊಳ್ಳಿ ಎಂದು ಕರೆ ನೀಡಿದರು.

ಟಿಪ್ಪು ಮನುಷ್ಯನೇ...

ಪ್ರಧಾನಿ ಮೋದಿ ಅವರು ನೀಡಿದ್ದ ಯಾವದೇ ಭರವಸೆಗಳು ಈಡೇರಿಲ್ಲ; ರಾಜ್ಯದಲ್ಲೂ ಬಿಜೆಪಿಯವರದ್ದು ಸಂಕುಚಿತ ಮನೋಭಾವನೆ. ಏನೇ ಬಂದರೂ ಟಿಪ್ಪು ವಿಚಾರ ಮುಂದಿಡುತ್ತಾರೆ. ಟಿಪ್ಪು ಮನುಷ್ಯ ಅಲ್ವ..? ಜಾತಿ, ಧರ್ಮ ಇಟ್ಟುಕೊಂಡು ರಾಜಕಾರಣ ಮಾಡುತ್ತಾರೆ. ವಿಶಾಲ ಮನೋಭಾವ, ಹೃದಯ ವೈಶಾಲ್ಯತೆ ಎಲ್ಲರೂ ಭಾರತೀಯರು ಎಂಬ ಭಾವನೆ ಇರಬೇಕೆಂದು ಮಂಜುನಾಥ್ ಹೇಳಿದರು. ಕಸ್ತೂರಿ ರಂಗನ್ ವರದಿ ಜಾರಿಯಾದಾಗ ಬಾಯಿ ಬಡುಕ ಬಿಜೆಪಿಯವರು ಏಕೆ ಪ್ರಶ್ನೆ ಮಾಡಿಲ್ಲವೆಂದು ಪ್ರಶ್ನಿಸಿದರು.

ಹಿಂದೆ ಸಂಸದರಾಗಿದ್ದ ವಿಶ್ವನಾಥ್ ಅವರು ಕುಶಾಲನಗರವರೆಗೆ ರೈಲ್ವೆ ಯೋಜನೆಗೆ ಪ್ರಯತ್ನಿಸಿದ್ದರು. ಆದರೆ ಪ್ರತಾಪ್ ಸಿಂಹ 5 ವರ್ಷದಲ್ಲಿ ಒಂದು ಹೆಜ್ಜೆ ಕೂಡ ಮುಂದೆ ಹೋಗಿಲ್ಲವೆಂದು ದೂರಿದರು. 5 ವರ್ಷ ಪ್ರತಾಪ್ ಸಿಂಹರ ಕೆಟ್ಟ ಅವಧಿಯಾಗಿತ್ತು. ಜನತೆ ಅವರಿಗೆ ಪಾಠಕಲಿಸಬೇಕಿದ್ದು, ರೈತರ ಪರವಾಗಿರುವ ವಿಜಯಶಂಕರ್‍ರನ್ನು ಗೆಲ್ಲಿಸಬೇಕೆಂದರು.

ಕೋಮು ಗಲಭೆ ಕೆಲಸ

ಸಂಸದ ಪ್ರತಾಪ್ ಸಿಂಹ ಬಾಯಲ್ಲಿ ರೈಲು ಬಿಟ್ಟಿದ್ದೇ ಹೊರತು ಯೋಜನೆ ಜಾರಿಗೆ ಯಾವದೇ ಪ್ರಯತ್ನ ಪಟ್ಟಿಲ್ಲ. ಕೋಮು ಗಲಭೆ ಮಾಡಿಸೋದೆ ಅವರ ಕೆಲಸವೆಂದು ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪ ಅಮರ್‍ನಾಥ್ ಆರೋಪಿಸಿದರು. ಕೊಡಗು - ಮೈಸೂರು ಕ್ಷೇತ್ರಕ್ಕೆ ಪ್ರತಾಪ್ ಸಿಂಹರ ಕೊಡುಗೆ ಶೂನ್ಯವೆಂದು ಹೇಳಿದರು.

ಇದೇ ಸಂದರ್ಭ ಸಂಪನ್ಮೂಲ ವ್ಯಕ್ತಿಗಳಾದ ಜಾನ್ಸನ್ ಹಾಗೂ ಗಣೇಶ್ ಅವರು, ಪ್ರತಿಜ್ಞಾ ವಿಧಿ ಬೋಧಿಸಿದರಲ್ಲದೆ, ಕಾರ್ಯಕರ್ತರಿಗೆ ಶಿಬಿರ ನಡೆಸಿಕೊಟ್ಟರು. ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ವೀಣಾ ಅಚ್ಚಯ್ಯ, ಕೆ.ಪಿ.ಸಿ.ಸಿ. ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಉಸ್ತುವಾರಿ ಕಾರ್ಯದರ್ಶಿ ವೆಂಕಪ್ಪಗೌಡ, ಕೆಪಿಸಿಸಿ ಕಾರ್ಯದರ್ಶಿಗಳಾದ ಕೆ.ಪಿ. ಚಂದ್ರಕಲಾ, ಟಿ.ಪಿ. ರಮೇಶ್, ಮಾಜಿ ಸಚಿವರುಗಳಾದ ಯಂ.ಸಿ. ನಾಣಯ್ಯ, ಸುಮಾವಸಂತ್, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕೆಪಿಸಿಸಿ ಉಸ್ತುವಾರಿ ಮಂಜುಳಾರಾಜ್, ಬ್ಲಾಕ್ ಅಧ್ಯಕ್ಷರುಗಳಾದ ಅಪ್ರು ರವೀಂದ್ರ, ವಿ.ಪಿ. ಶಶಿಧರ್, ವಿ.ಕೆ. ಲೋಕೇಶ್ ಅವರುಗಳಿದ್ದರು.

ಬ್ಲಾಕ್ ಸಂಚಾಲಕ ತೆನ್ನಿರ ಮೈನಾ ನಿರೂಪಿಸಿದರೆ, ಕಾರ್ಯಕರ್ತೆ ಪ್ರೇಮಾ ಪ್ರಾರ್ಥಿಸಿದರು. ನಾಪೋಕ್ಲು ಬ್ಲಾಕ್ ಅಧ್ಯಕ್ಷ ಬೇಕಲ್ ರಮಾನಾಥ್ ಸ್ವಾಗತಿಸಿದರು.