ಶನಿವಾರಸಂತೆ, ಮಾ. 20: 22 ವರ್ಷದ ಯುವತಿಯೊಬ್ಬಳನ್ನು ನಂಬಿಸಿ ವಿವಾಹವಾಗುವದಾಗಿ ಅತ್ಯಾಚಾರವೆಸಗುವ ಮೂಲಕ ಮೋಸಗೊಳಿಸಿರುವ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಪ್ರಮುಖ ಆರೋಪಿ ತಲೆಮರೆಸಿಕೊಂಡು ಅಬುದಾಬಿಗೆ ತೆರಳಿರುವ ಆರೋಪವಿದೆ.

ಕಳೆದ ಸೆಪ್ಟೆಂಬರ್‍ನಲ್ಲಿ ಶನಿವಾರಸಂತೆ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ, ಆಕೆಯನ್ನು ಊರಿಗೆ ಬಿಡುವದಾಗಿ ಗುಡುಗಳಲೆ ತನಕ ಕರೆದೊಯ್ದು, ತನ್ನ ಹೆಸರು ಸಂತೋಷ್ ಎಂಬದಾಗಿಯೂ, ನಿನ್ನನ್ನು ವಿವಾಹವಾಗುವದಾಗಿ ಹೇಳಿಕೊಂಡು ಪುಸಲಾಯಿಸಿ ಅತ್ಯಾಚಾರ ಎಸಗಿದ್ದನೆನ್ನಲಾಗಿದೆ. ಅಲ್ಲದೆ ಮತ್ತೆ ಅನೇಕ ಬಾರಿ ಕೃತ್ಯ ಎಸಗಿದ್ದನೆನ್ನಲಾಗಿದೆ.ಅನಂತರದಲ್ಲಿ ಆರೋಪಿಯು ಸಂತೋಷ್ ಆಗಿರದೆ ಷಂಶುದ್ದೀನ್ ಎಂಬಾತನಾಗಿದ್ದು, ಸೋಮವಾರಪೇಟೆ ಬಳಿಯ ಯಡೂರು ನಿವಾಸಿ ಎಂಬ ಸುಳಿವು ಲಭಿಸಿದ್ದಾಗಿ ತಿಳಿದು ಬಂದಿದೆ. ಆರೋಪಿ ಮಾತ್ರವಲ್ಲದೆ ಗುಂಡ್ಲುಪೇಟೆ ಕಾಗಡಿ ಗ್ರಾಮದ ಸ್ವಾಮಿ ನಾಯ್ಕ (ಚಾಲಕ) ಶಿರಂಗಾಲ ವ್ಯಾಪ್ತಿಯ ಎ. ಆದಂ ಹಾಗೂ ಹನೀಫ್ ಎಂಬವರು ಸೇರಿ ದುಷ್ಕøತ್ಯ ಎಸಗಿರುವ ಆರೋಪ ಮೇರೆಗೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಇದೀಗ ಆದಂ ಹಾಗೂ ಹನೀಫ್‍ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಷಂಶುದ್ದೀನ್ ಮತ್ತು ಸ್ವಾಮಿ ನಾಯ್ಕ ತಲೆಮರೆಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.