ಮಡಿಕೇರಿ, ಮಾ. 20: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ವಿನೂತನ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿದೆ. ಹೀಗಿದ್ದೂ ಅನೇಕ ಸರಕಾರಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಬಾಗಿಲು ಮುಚ್ಚಿಕೊಳ್ಳುತ್ತಿವೆ. ಇಂಥ ಆತಂಕದ ಪರಿಸ್ಥಿಯೊಂದಿಗೆ ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯ ತೊಂಬತ್ತುಮನೆಯ ಸರಕಾರಿ ಪ್ರಾಥಮಿಕ ಶಾಲೆಯ ದಿನಗಳನ್ನು ಎಣಿಸುವಂತಾಗಿದೆ.ಈ ಶಾಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರ ಸ್ಥಿತಿ ಗಮನಿಸಿದರೆ ಜವಾಬ್ದಾರಿಯುತ ಅಧಿಕಾರಿಗಳ ಅಸಹನೆ ಗೋಚರಿಸಲಿದೆ. ಶಾಲೆಯ ನಿರ್ವಹಣೆಯೊಂದಿಗೆ ದೈನಂದಿನ ಕೆಲಸ ಕಾರ್ಯಗಳನ್ನು ಕೇವಲ ಮೂವರು ಶಿಕ್ಷಕಿಯರು ನಿಭಾಯಿಸು ವಂತಾಗಿದೆ. ತೊಂಬತ್ತುಮನೆ ಸರಕಾರಿ ಶಾಲೆಯನ್ನು ಗಮನಿಸಿದರೆ ಜವಾಬ್ದಾರಿಯುತ ಅಧಿಕಾರಿಗಳು ಶಾಲೆಗಳ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ವಹಿಸುತ್ತಿದ್ದಾರೆ ಎನ್ನುವದು ಗೋಚರಿಸುತ್ತದೆ.ಈ ಶಾಲೆಯಲ್ಲಿ ಒಂದರಿಂದ ಏಳನೆಯ ತರಗತಿಯ ತನಕ ದೈನಂದಿನ ಪಠ್ಯಕ್ರಮಗಳು ನಡೆಯುತ್ತಿದೆ. ಮಾತ್ರವಲ್ಲದೆ, ನಿತ್ಯ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟವನ್ನು ಒದಗಿಸಬೇಕಾಗಿದೆ. ಒಂದು ರೀತಿ, ಇರುವ ಮೂವರು ಶಿಕ್ಷಕಿಯರು ಇಲ್ಲಿನ ಮಕ್ಕಳಿಗೆ ಅಚ್ಚುಮೆಚ್ಚು, ಕಾರಣ ಇರುವಷ್ಟು ವ್ಯವಸ್ಥೆಯಲ್ಲಿ ಎಲ್ಲವನ್ನು ಬಳಸಿಕೊಂಡು ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆ. ಹಾಗೆಯೇ ಮಕ್ಕಳು ಕೂಡ ತಮ್ಮ ಶಿಕ್ಷಕಿಯರು ಹಾಗೂ ಶಾಲೆ ಬಗ್ಗೆ ಅಭಿಮಾನ ತೋರುತ್ತಿದ್ದಾರೆ.

ಆದರೆ ವ್ಯವಸ್ಥೆ ಮಾತ್ರ ಬೇಸರ ಉಂಟುಮಾಡುತ್ತಿದೆ. ಇಲ್ಲಿನ ಶಿಕ್ಷಕಿಯರು ಯಾರ್ಯಾರೋ ದಾನಿಗಳನ್ನು ಹಿಡಿದು ಆ ಮೂಲಕ ಶಾಲೆಗೆ ಸುಣ್ಣ ಬಣ್ಣ ಬಳಿಸುತ್ತಿದ್ದಾರೆ. ಪರಿಸರವನ್ನು ಸ್ವಚ್ಛವಿರಿಸಿಕೊಂಡು ಮಕ್ಕಳು ಲವಲವಿಕೆಯಿಂದ ಕಲಿಕೆಂ iÀುತ್ತ ಗಮನ ಹರಿಸುವಂತೆಯೂ ಒತ್ತು ನೀಡಿದ್ದಾರೆ.

ಬದಲಾಗಿ ಪೀಠೋಪಕರಣಗಳ ಕೊರತೆಯಿಂದ ಈ ಶಾಲೆಯೊಳಗೆ ಒಂದರಿಂದ 3ನೇ ತರಗತಿ ಮಕ್ಕಳು, ಒಂದು ಕೊಠಡಿಯಲ್ಲಿ ಕಲಿಯುವದ ರೊಂದಿಗೆ ಹರುಕು ಮುರುಕು ಚಾಪೆಗಳಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿರುವದು ಎದುರಾಗುತ್ತದೆ. ಜವಾಬ್ದಾರಿಯುತ ಅಧಿಕಾರಿಗಳು ಇಲಾಖೆಯ ಅನುದಾನ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಈ ಮೂಲಕ ಹುಟ್ಟುತ್ತದೆ.

ಹೀಗೆ ಒಂದನೇ ತರಗತಿಯ ಇಬ್ಬರು, ಎರಡನೇ ತರಗತಿಯ ನಾಲ್ವರು, ಮೂರನೆಯ ತರಗತಿಯ ಐವರು ಸೇರಿದಂತೆ ಹನ್ನೊಂದು ಮಕ್ಕಳು ಚಾಪೆಯಲ್ಲಿ ಕುಳಿತು ಕಲಿಕೆಯಲ್ಲಿ ತೊಡಗಿದ್ದರೂ ಕ್ರಿಯಾಶೀಲರಾಗಿ ಗೋಚರಿಸುವ ಮೂಲಕ ಮುಗ್ದತೆ ಪ್ರದರ್ಶಿಸಿದ್ದಾರೆ.

ಇನ್ನೊಂದೆಡೆ ನಾಲ್ಕನೆಯ ತರಗತಿಯ ನಾಲ್ವರು, ಐದನೆಯ ತರಗತಿಯ ನಾಲ್ವರು ಒಡಗೂಡಿ ಎಂಟು ಮಕ್ಕಳು ಮತ್ತೊಂದೆಡೆ ಕಲಿಕೆ ಮಾಡುತ್ತಾರೆ.

ಅಂತೆಯೇ ಮುಂದಿನ ಕೊಠಡಿಯೊಳಗೆ ಆರನೇಯ ತರಗತಿಯ ಹನ್ನೊಂದು ವಿದ್ಯಾರ್ಥಿಗಳು

(ಮೊದಲ ಪುಟದಿಂದ) ಹಾಗೂ ಏಳನೆಯ ತರಗತಿಯ ಏಳು ವಿದ್ಯಾರ್ಥಿಗಳು ಎರಡು ಗುಂಪಿನಲ್ಲಿ ಒಂದೊಂದು ಕೊಠಡಿಯಲ್ಲಿ ಇರುತ್ತಾರೆ. ಇಲ್ಲಿಯು ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಜತೆ ಜತೆಯಾಗಿ ಕುಳ್ಳಿರಿಸಿ ಪಾಠ ಕಲಿಸುವ ಅನಿವಾರ್ಯ ಸ್ಥಿತಿ ಶಿಕ್ಷಕಿಯರದ್ದಾಗಿದೆ. ಈ ಶಾಲೆಯಲ್ಲಿ ಒಟ್ಟು 37 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಹಾಜರಾಗುತ್ತಿದ್ದಾರೆ. ವರ್ಷಗಳ ಹಿಂದೆ ಸರಿ ಸುಮಾರು 150 ವಿದ್ಯಾರ್ಥಿಗಳು ಬರುತ್ತಿದ್ದರಾದರೂ, ಇಲಾಖೆಯ ನಿರ್ಲಕ್ಷ್ಯ ಗಮನಿಸಿದ ಪೋಷಕರು ಅಲ್ಲಿ ಇಲ್ಲಿ ದುಡಿಮೆ ಮಾಡಿ ತಮ್ಮ ಮಕ್ಕಳನ್ನು ದೂರದ ಮಡಿಕೇರಿ, ಮೂರ್ನಾಡುವಿನ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.

ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತು ಶಿಕ್ಷಕ ವರ್ಗವನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಆಡಳಿತ ಶಾಹಿತ್ವ, ಮಕ್ಕಳ ಪ್ರತಿಭೆ, ಭವಿಷ್ಯವನ್ನು ನಿರ್ಲಕ್ಷಿಸುತ್ತಿರುವ ಪರಿಣಾಮ ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳು ಬಾಗಿಲು ಮುಚ್ಚಿಕೊಳ್ಳುವಂತಾಗಿದೆ ಎಂಬದು ತೊಂಬತ್ತುಮನೆ ಶಾಲೆಯ ಒಳಹೊಕ್ಕಾಗ ದೃಢವಾಗುತ್ತದೆ.

ಕೇವಲ ಕನ್ನಡಕ್ಕಾಗಿ ಬೊಗಳೆಯ ತುತ್ತೂರಿ ಊದುವ ಬದಲು ಇಂಥ ಶಾಲೆಗಳನ್ನು ಸಂರಕ್ಷಿಸಿಕೊಳ್ಳುವತ್ತ ಕಾಳಜಿ ತೋರುವಂತಾಗಿದೆ, ಅಲ್ಲಿನ ಗ್ರಾಮಸ್ಥರ ಸಹಿತ ಮಕ್ಕಳಿಗೆ ಕೂಡ ‘ನಮ್ಮೂರ ಶಾಲೆ’ ಎಂಬ ಅಭಿಮಾನವಾದರೂ ಉಳಿಯುವಂತಾದೀತು. ಇದು ಕೇವಲ ಒಂದು ಶಾಲೆಯ ವ್ಯಥೆಯಾಗಿರದೆ ಬಹುತೇಕ ಸರಕಾರಿ ಶಾಲೆಗಳ ಕಥೆಯೂ ಆಗಿದೆ. - ಶ್ರೀಸುತ