ಜಗತ್ತಿನ ಜೀವಿಗಳಲ್ಲಿ ಮನುಷ್ಯ ಸಂತಸದ ಕ್ಷಣಕ್ಕಾಗಿ ನಿರಂತರ ಶೋಧ ನಡೆಸುತ್ತಿರುತ್ತಾನೆ. ಸಂತಸ ಯಾರಿಗೆ ಬೇಕಿಲ್ಲ? ದುಃಖದ ಕಡೆ ಯಾರು ತಾನೇ ಮುಖ ಮಾಡಲು ಇಚ್ಛಿಸುತ್ತಾರೆ? ಆದರೆ ಇಂದು ನಾವೆಲ್ಲಾ ಮೊಬೈಲ್ ಎಂಬ ಸಂತಸದಲ್ಲಿ ಕಳೆದು ಹೋಗುವಷ್ಟು ವ್ಯಸನಿಗಳಾಗಿದ್ದೇವೆ. ಸಂತಸ ಎಂದೊಡನೆ ಅದು ಎಲ್ಲಿ ಸಿಗುತ್ತದಯ್ಯಾ ಎಂಬ ಪ್ರಶ್ನೆ ಕೆಲವೊಮ್ಮೆ ಚಿಂತನೆಗೆ ಹಚ್ಚಿ ಬಿಡುತ್ತದೆ. ಅದು ನಮ್ಮೊಳಗೆ ಅವಿತಿದೆ ಎಂಬದು ನಮ್ಮ ಅರಿವಿಗೆ ದೂರವಿದ್ದು ಅದರ ಹುಡುಕಾಟದಲ್ಲಿ ತೊಳಲಾಡುತ್ತೇವೆ. ಸರಿಯಾದ ಹುಡುಕಾಟ ನಡೆಯಬೇಕಷ್ಟೆ.
ಯಾವಾಗಲೂ ಭೂತದಲ್ಲಿ ಮುಳುಗಿ ಏಳಲಾರದೆ ತತ್ತರಿಸಿ ಮುಖ ಸಪ್ಪೆ ಮಾಡಿ ಮುಪ್ಪು ಆವರಿಸಿದಂತೆ ಅಥವಾ ಪ್ರಪಂಚವೇ ತಲೆ ಮೇಲೆ ಬಿದ್ದಂತೆ ಇರುತ್ತೇವೆ. ಯಾಕೆ? ಕಳೆದ ಕೆಟ್ಟ ಕ್ಷಣಗಳ ಯಾತನೆ ಅನುಭವಿಸಿಯಾಗಿದೆ. ಅದನ್ನೇ ಮತ್ತೆ ಮತ್ತೆ ಮೆಲುಕಿಸಿ ಆ ಸಂಕಟಗಳನ್ನು ಮತ್ತಷ್ಟು ವಿಸ್ತಾರವಾಗಿಸಿ ವರ್ತಮಾನದ ನೆಮ್ಮದಿಯನ್ನು ದೂರ ತಳ್ಳಬೇಕೆ?
ಕೆಲವೊಮ್ಮೆ ಭವಿಷ್ಯದ ಭಯ ಎಡೆಬಿಡದೆ ಕಾಡಿ ಬೆನ್ನಟ್ಟುತ್ತದೆ. ಕಾಣದ ಭವಿಷ್ಯವನ್ನೂ, ತಿಳಿಯದ ವಿಚಾರಗಳನ್ನೂ, ನಾವೇ ಕಲ್ಪಿಸಿ ಭಯ ಪಡುವದರಲ್ಲಿ ಅರ್ಥವಿದೆಯೇ? ಸಕಾರಾತ್ಮಕ ಕನಸುಗಳನ್ನು ಕಾಣಲು ಖರ್ಚೇನೂ ಇಲ್ಲವಲ್ಲಾ! “ಕನಸ್ಸು ಕಾಣಿರಿ, ನಿಮ್ಮ ಕನಸು ನನಸಾಗುವುದು” ಎಂದು ಅಬ್ದುಲ್ ಕಲಾಂರವರು ಹೇಳಿಲ್ಲವೇ? ಒಳ್ಳೆಯ ಕನಸ್ಸು ನನಸಾಗಿಸಲು ಪ್ರಯತ್ನ ಮಾಡುವದು. ಒಂದು ವೇಳೆ ನನಸಾಗದಿದ್ದರೆ ನಷ್ಟವಾಯಿತೆಂದು ಹೇಳಲು ನಾವೇನೂ ಬಂಡವಾಳ ಹಾಕಿಲ್ಲವಲ್ಲಾ.
ಭೂತ ಭವಿಷ್ಯದ ಕತ್ತರಿಗೆ ಸಿಕ್ಕಿ ಪ್ರಫುಲ್ಲವಾಗಿರಬೇಕಾದ ಮನಸ್ಸನ್ನು ನಜ್ಜುಗುಜ್ಜು ಮಾಡುವುದೇಕೆ? ಆ ಕ್ಷಣದ ಸುಖವನ್ನು ಆಗಲೇ ಆಸ್ವಾದಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವದರಿಂದ ವರ್ತಮಾನಕ್ಕೆ ಜೀವಂತಿಕೆ ದಕ್ಕುತ್ತದೆ. ವರ್ತಮಾನದ ಸುಖವನ್ನು ಆಸ್ವಾದಿಸುವಲ್ಲಿ ಭೂತ, ಭವಿಷ್ಯಕ್ಕೆ ನುಸುಳಲು ಅವಕಾಶಕೊಡಬೇಕೆ? ಸಾಧ್ಯವಾದಷ್ಟು ಸಂತಸದಿಂದಿರುವ ಪ್ರಯತ್ನದಲ್ಲಿ ನಾವೂ ನಗುತ್ತಾ ಇತರರನ್ನೂ ನಗಿಸುವ ಪ್ರಕ್ರಿಯೆ ಪಾಲಿಸೋಣ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ನನಗೆ ಒತ್ತಡ, ಆತಂಕ, ಸಮಯದ ಅಭಾವ ಎಲ್ಲವೂ ಇದ್ದರೂ ವಿದ್ಯಾರ್ಥಿಗಳೊಡನೆ ಸಿಗುವ ಸಂತಸದ ಕ್ಷಣಗಳನ್ನು ಸಾಕಷ್ಟು ಅನುಭವಿಸಲು ಪ್ರಯತ್ನಿಸುತ್ತಿರುತ್ತೇನೆ. ಗಂಭೀರ ಪಠ್ಯ ವಿಷಯದ ಅವಧಿಗಳಲ್ಲೂ ಐದು ನಿಮಿಷವಾದರೂ ಹಾಡಿ, ಕುಣಿದು, ಕುಣಿಸಿ, ನಕ್ಕು, ಚಪ್ಪಾಳೆ ತಟ್ಟಿಸುವಾಗ ಆ ಪುಟ್ಟ ತುಟಿಗಳ ನಗು ಕಣ್ಣುಗಳನ್ನು ತುಂಬಿ ನನ್ನೊಳಗೆ ಸಾರ್ಥಕ್ಯ ಮೂಡಿ ನವಿರಾದ ಸಂತಸ ಆವರಿಸಿ ಬಿಡುತ್ತದೆ.
ನಾವು ಗೆಳೆತಿಯರು ಸಿಕ್ಕಾಗಲೆಲ್ಲಾ ಅಥವಾ ಕರೆ ಮಾಡಿ ಹರಟುವಾಗಲೆಲ್ಲಾ ಚಿಕ್ಕ ಸಂಗತಿಗಳನ್ನು ದೊಡ್ಡದು ಮಾಡಿ ನಕ್ಕು ಸಂತಸವನ್ನು ಬಾಚಿಕೊಳ್ಳಲು ಹಾತೊರೆಯುತ್ತೇವೆ. ಅದಕ್ಕಾಗಿ ಸಂಭಾಷಣೆಯಲ್ಲಿ ನಾನ್ ವೆಜ್ ಅಥವಾ ಡಬಲ್ ಮೀನಿಂಗ್ ಮೊರೆ ಹೋಗಲು ನಾನೇನೂ ಹಿಂದೆ ಬೀಳುವವರಲ್ಲ. ಯಾರಿಗೂ ಹಾನಿಯಾಗದಂತೆ, ಘಾಸಿಯಾಗದಂತೆ ನಮ್ಮೊಳಗೆ ನಗು ಜಿನುಗಿ ಸಂತಸ ತುಂಬಬೇಕಷ್ಟೆ.
ಮುಖ ಗಂಟಿಕ್ಕಿ ಸಿಡುಕಿ, ಸಂಕಟ ಪಟ್ಟು ಪ್ರಯೋಜನವಾದರೂ ಏನು? ಆಗಬೇಕೆಂದಿರುವದನ್ನು ತಡೆಯಲು ನಮ್ಮಿಂದ ಸಾಧ್ಯವೇ? ಸಾಂದರ್ಭಿಕ ದುಃಖಗಳಿಗೆ ಎದೆಯೊಡ್ಡಿ ಕಾಲದ ಬದಲಾವಣೆಗೆ ನಾವು ಬದಲಾಗಿ ವರ್ತಮಾನಕ್ಕೆ ಸಿದ್ಧರಾಗಬೇಕಿದೆ. ಅತೃಪ್ತಿ ಕೂಡಾ ಸಂತಸದ ದಾರಿಗೆ ಅಡ್ಡಗಾಲಿಡುತ್ತದೆ.
ಕೆಲವರಿಗೆ ಎಷ್ಟು ದಕ್ಕಿದರೂ ತೃಪ್ತಿ ಇರಲಾರದು. ಈ ಬದುಕು ಸಾಕಷ್ಟು ಹೊರೆ, ಆತಂಕಗಳೆಡೆ ಹೊರಳಿಸುತ್ತದೆ. ಈ ಲೋಕ ನಮಗೆ ಸಾಕಷ್ಟು ಅನುಭವಗಳನ್ನು ಕೂಡಾ ಮೊಗ ಮೊಗೆದು ಕೊಡುತ್ತಿದೆ. ಇವೆಲ್ಲಕ್ಕೂ ಕಣ್ಣು ಕಿವಿಯಾಗುತ್ತಲೇ ಸಕಾರಾತ್ಮದೆಡೆಗೆ ತಿರುಗಿ ಸಂತಸ ನೀಡುವ ಕ್ಷಣಗಳ ಹುಡುಕಾಟದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಗಟ್ಟಿತನ ಮೈಗೂಡಿಸಬೇಕಿದೆ.
ಒಬ್ಬೊಬ್ಬರ ಸಂತಸ ಒಂದೊಂದರಲ್ಲಿ. ಹಾಡು, ನೃತ್ಯ, ಚಿತ್ರಕಲೆ, ಹರಟೆ, ಚರ್ಚೆ, ಓದು, ಬರಹ ಹೀಗೆ ಇವೆಲ್ಲವುಗಳಲ್ಲಿ ನಮ್ಮ ಅಭಿರುಚಿಯ ಆಯ್ಕೆಯಲ್ಲಿ ಸಂತಸವಿರುತ್ತದೆ. ಒಬ್ಬಂಟಿಯಾದರೂ ಸಂತಸವನ್ನು ಕಂಡುಕೊಳ್ಳುವ ಮಾರ್ಗ ಇವುಗಳೊಳಗಿದೆ.
ಕಂಪ್ಯೂಟರ್, ಟಿ.ವಿ, ಮೊಬೈಲ್‍ಗಳಲ್ಲಿ ಮುಳುಗಿ ಸಿಗುವ ಸಂತಸ ಆ ಕ್ಷಣಕ್ಕಷ್ಟೆ. ಅದನ್ನು ಮೀರಿ ನಮ್ಮ ಪ್ರೀತಿ ಪಾತ್ರರೊಡನೆ ಬೆರೆಯುತ್ತಾ, ಸಂತಸದ ಕ್ಷಣಗಳನ್ನು ಹಂಚಿಕೊಂಡಾಗ ಅದು ವರ್ತಮಾನವನ್ನು ಬೆಳಗಿ ಸಂತೋಷವಾಗಿರಿಸುತ್ತದೆ. ಎಲ್ಲರಿಗೂ ಹೊಸ ಹೊಸ ಹಾದಿಗಳು ತೆರೆದುಕೊಳ್ಳುವಂತಾಗಲಿ. ಆ ಹಾದಿಯಲ್ಲಿ ಖುಷಿಯ ಕ್ಷಣಗಳು ಸಿಗುವಂತಾಗಲಿ. ವಿಶ್ವ ಸಂತಸ ದಿನದ ಶುಭಾಷಯಗಳು. - ಸುನಿತಾ ಲೋಕೇಶ್, ಕುಶಾಲನಗರ