ಮಾರ್ಚ್ - ಏಪ್ರಿಲ್ ತಿಂಗಳು ಶುರುವಾದಂತೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನೆಲೆಯೂರುವ ಭಾವನೆ ಒಂದೇ. ಅದು ಪರೀಕ್ಷೆ ಅದರಲ್ಲೂ ಮುಖ್ಯವಾಗಿ ಒಂದು ಘಟ್ಟವನ್ನು ತಲಪುವ ಹದಿಹರಿಯದ ವಿದ್ಯಾರ್ಥಿ - ವಿದ್ಯಾರ್ಥಿನಿಯರ ಶಾಲಾ ಹಂತದ ಕೊನೆಯಘಟ್ಟ. ಬೇಸಿಗೆ ಉರಿಬಿಸಿಲು, ಚಂಚಲ ಮನಸ್ಸು, ಸ್ನೇಹಿತರನ್ನು ಅಗಲುವ ನೋವು, ಶಿಕ್ಷಕರ ವಿಶೇಷ ತರಗತಿಗಳು, ಮನೆ ಪರಿಸ್ಥಿತಿ, ಸಭೆ, ಸಮಾರಂಭಗಳು, ಮಾನಸಿಕ ಒತ್ತಡ, ಆಲಸ್ಯತನ, ನಿದ್ದೆ, ಜೊತೆಗೆ ಪೋಷಕರ ಒತ್ತಡ, ಮಾಧ್ಯಮಗಳು ಇತ್ಯಾದಿ. ಇದೆಲ್ಲದರ ನಡುವೆ ಮನಸ್ಸಿನಲ್ಲಿರುವ ಒಂದೇ ಯೋಚನೆ ‘ಪಬ್ಲಿಕ್ ಪರೀಕ್ಷೆ’ - ಶೇಕಡ ಫಲಿತಾಂಶದ ಗೊಂದಲ. ಈ ಎಲ್ಲ ಗೊಂದಲದ ನಿವಾರಣೆ ಹೇಗೆಂದು ತಿಳಿಯೋಣ.
ಎಲ್ಲಾ ನೋವು - ನಲಿವುಗಳ ಮಧ್ಯೆ ಪರೀಕ್ಷಾ ಸಮಯ ಬಂದೇ ಬಿಟ್ಟಿತು. 21ನೇ ಮಾರ್ಚ್‍ನಿಂದ ಪ್ರಾರಂಭ. ಮೊದಲು ಪರೀಕ್ಷೆ ಎಂಬ ಭಯವನ್ನು ಮನಸ್ಸಿನಿಂದ ದೂರ ಮಾಡಿ. ಯಾವದೇ ಕಾರಣಕ್ಕೂ ಭಯಪಡದಿರಿ. ಆತ್ಮವಿಶ್ವಾಸ ವಿರಲಿ. ಪರೀಕ್ಷೆ ಎದುರಿಸುವ ಸದೃಢ ಮನೋಭಾವನೆ ಇರಲಿ. ಆತ್ಮವಿಶ್ವಾಸವಿದ್ದರೆ ಎಂತಹ ಭಯ, ಗೊಂದಲ ನಿವಾರಣೆಯಾಗಬಲ್ಲದು.
ಧನಾತ್ಮಕ ಚಿಂತನೆ ಇರಲಿ: ಅಂಕಗಳಿಕೆಯೊಂದೇ ಜೀವನದ ಪ್ರಮುಖ ಸಾಧನೆಯಲ್ಲ. ಆದರೂ ಎಸ್.ಎಸ್.ಎಲ್.ಸಿ. ಪರೀಕ್ಷೆ ಸಾಧನೆ ನಿಮ್ಮ ಜೀವನದ ಪ್ರಮುಖ ಭಾಗಗಳಲ್ಲಿ ಒಂದು. ನಿಮ್ಮ ಭವಿಷ್ಯವನ್ನು ನಿರ್ಧರಿಸುವ ಘಟ್ಟ. ಆದ್ದರಿಂದ ಛಲ, ಆತ್ಮವಿಶ್ವಾಸ, ನಂಬಿಕೆಯಿಂದ ಮುನ್ನಡೆಯಿರಿ, ಸಾಧನೆಗೆ ತಕ್ಕ ಪ್ರತಿಫಲ ಇದ್ದೇ ಇದೆ. ಯಾವದೇ ಕಾರಣಕ್ಕೂ ಬೇರೆಯವರ ಉತ್ತರ ನೋಡಿ ಬರೆದು ಅಂಕಗಳಿಸುವ ನಿರ್ಧಾರವಿದ್ದರೆ, ಅದನ್ನು ದೂರ ಮಾಡಿ. ಕನಿಷ್ಟ 60 ಅಂಕಗಳಿಗೆ ಬರೆಯುವ ಗರಿಷ್ಠ 100 ಅಂಕಗಳನ್ನು ಪಡೆಯುವ ಮನೋಬಲವಿರಲಿ. ಸ್ವ ಕಲಿಕೆಗೆ ಅವಕಾಶವಿರಲಿ. ಕಲಿತ ವಿಷಯಗಳನ್ನು ಮನನ ಮಾಡಿಕೊಳ್ಳಿ. ಆರೋಗ್ಯದ ಬಗ್ಗೆ ಗಮನವಿರಲಿ. ಪೋಷಕರ ಪಾತ್ರ ಪ್ರಮುಖವಾಗಿರುತ್ತದೆ. ಮಿತವಾದ ವ್ಯಾಯಾಮ, ವಿಶ್ರಾಂತಿ, ನಿದ್ದೆ ಕೂಡ ಅತೀ ಅವಶ್ಯಕ. ಸಾಮಾನ್ಯರಂತೆ ಇತರರೊಡನೆ ಬೆರೆಯಿರಿ. ಕುಟುಂಬ, ಸ್ನೇಹಿತರ ಜೊತೆ ಆಟದ ಜೊತೆಗೆ ಪಾಠ ಎಂಬಂಗೆ ಕಲಿಕೆಯಿರಲಿ. ಅನ್ಯ ವಿಚಾರಗಳಿಂದ ದೂರವಿರಿ. ಅನಾವಶ್ಯಕ ಚಿಂತನೆ ಬಿಡಿ. ಎಲ್ಲಾ ತಿಳಿದಿರುತ್ತೇನೆಂಬ ಅತಿಯಾದ ಆತ್ಮವಿಶ್ವಾಸ ಬೇಡ. ಗುಂಪು ಕಲಿಕೆ, ಗುಂಪು ಚರ್ಚೆ, ಸಂಗಡಿಗರೊಂದಿಗೆ ಹಂಚಿಕೊಂಡು ಕಲಿಯುವ ಅಭ್ಯಾಸವಿರಲಿ. ಮನೆ - ಶಾಲೆ ವಾತಾವರಣ ಉತ್ತಮವಾಗಿರಲಿ. ಮಾಧ್ಯಮಗಳಾದ ಟಿ.ವಿ., ಫೋನ್, ವಾಟ್ಸಾಪ್ ಮುಂತಾದವುಗಳಿಂದ ಪರೀಕ್ಷೆ ಮುಗಿಯುವ ತನಕ ದೂರವಿರಿ. ಈ ಸಮಯದಲ್ಲಿ ನಿದ್ದೆ, ಆಯಾಸ, ಜಡತ್ವ ಜಾಸ್ತಿಯಾಗುವ ಸಂಭವ ಹೆಚ್ಚು. ಆದಷ್ಟು ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಿ. ಸ್ವಮೌಲ್ಯಮಾಪನ ಮಾಡಿ. ಪುನರಾವರ್ತನೆ ಮಾಡಿ. ಕಳೆದ 5-6 ವರ್ಷಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಯಿರಿ.
ಬರವಣಿಗೆ: ಬರವಣಿಗೆ ಪ್ರಮುಖ ಪಾತ್ರವಹಿಸುತ್ತದೆ. ಸ್ಪುಟವಾಗಿರಲಿ, ಅಂದವಾಗಿ ಬರೆಯಿರಿ, ಅಕ್ಷರ ದೋಷವಿರದಂತೆ ನೋಡಿಕೊಳ್ಳಿ. ತಪ್ಪುಗಳನ್ನು ಮಾಡದಿರಿ. ಯಾವದೇ ಪ್ರಶ್ನೆಗಳಿಗೆ ಉತ್ತರಿಸದೆ ಇರಬೇಡಿ. ಸಮಯಪಾಲನೆ ಪ್ರಮುಖ ಅಂಶ. 1 ಅಂಕ, 2 ಅಂಕ, 3 ಅಂಕ, 4 ಅಂಕಗಳ ಪ್ರಶ್ನೆಗಳಿಗೆ ಸಮಯವನ್ನು ಸರಿದೂಗಿಸಿಕೊಳ್ಳಿ. ಗೊತ್ತಿರುವ ಉತ್ತರಗಳನ್ನು ಮೊದಲು ಬರೆಯಿರಿ. ಕಾಗುಣಿತ ತಪ್ಪಿಲ್ಲದಂತೆ ಉತ್ತರಿಸಿ. ಪೆನ್ಸಿಲ್ ಬಳಸಿ ಆಯ್ಕೆ ಮಾಡಿಕೊಳ್ಳಿ. ಚಿತ್ರಗಳನ್ನು ಬಿಡಿಸಿ ಭಾಗಗಳನ್ನು ಸರಿಯಾಗಿ ಗುರುತಿಸಿ. ಅತಿಯಾದ ಸಮಯದ ವ್ಯಯ ಮಾಡಬೇಡಿ. ಪ್ರತಿನಿತ್ಯ ಜೀವನದಲ್ಲಿ ಬರುವ ಪ್ರಶ್ನೆಗಳಾದ (ಉeಟಿeಡಿಚಿಟ ಕಿuesಣioಟಿs)ಗಳಿಗೆ ಉದಾ: ಕಾಡು, ರಕ್ಷಣೆ, ಪ್ರಯೋಜನ, ಮಣ್ಣಿನ ಸವಕಳಿ, ಕಾರಣ, ದುಷ್ಪರಿಣಾಮಗಳು, ನೈಸರ್ಗಿಕ ವಿಕೋಪಗಳು, ಕಾರಣ, ಹಾನಿ, ಪರಿಹಾರ, ಬ್ಯಾಂಕ್, ಪ್ರಯೋಜನ, ಉಪಯೋಗ. ಸ್ವಉದ್ಯೋಗ, ವಿಚಾರ, ಉದ್ದಿಮೆ, ರಾಷ್ಟ್ರ ನಾಯಕರು ಇತ್ಯಾದಿ ವಿಚಾರಗಳಿಗೆ ಸ್ವಂತ ವಾಕ್ಯಗಳನ್ನು ಬಳಸಿ. ಗಣಿತ, ವಿಜ್ಞಾನ ವಿಷಯಗಳಲ್ಲಿ ಸ್ವಂತ ವಾಕ್ಯ ಬಳಕೆಯನ್ನು ನಿಷೇಧಿಸಿ ಸರಿಯಾದ ಉತ್ತರ ಬರೆಯಿರಿ. ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಉತ್ತರ ಬರೆಯುವ ಗೊಂದಲದಲ್ಲಿ ಪ್ರಶ್ನೆ - ಉತ್ತರ ಬೇರೆ ಬೇರೆಯಾಗುವ ಸಾಧ್ಯತೆ ಹೆಚ್ಚು, ಆದ್ದರಿಂದ ಸರಿಯಾಗಿ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳಬೇಕು.
- ಕೇಳಪಂಡ ಎಸ್. ಮಂಜುನಾಥ್, ಆಂಗ್ಲ ಭಾಷಾ ಶಿಕ್ಷಕರು, ಸರಕಾರಿ ಪದವಿಪೂರ್ವ ಕಾಲೇಜು, ಪೊನ್ನಂಪೇಟೆ.