ಮಡಿಕೇರಿ, ಮಾ. 19: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಪಾಜೆಯ ಪಯಸ್ವಿನಿ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಲಚಂದ್ರ ಕಳಗಿ (47) ಅವರು ಈ ಸಂಜೆ ಮೇಕೇರಿ ಬಳಿ ರಸ್ತೆ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ. ಮೇಕೇರಿ ಗೌರಿಶಂಕರ ದೇವಾಲಯ ಪಕ್ಕದ ರಸ್ತೆಗಾಗಿ ತಾಳತ್‍ಮನೆ ಸಂಪರ್ಕ ಮಾರ್ಗದಲ್ಲಿ ಅವರು ತೆರಳುತ್ತಿದ್ದ ವೇಳೆ ತಮ್ಮ ಕಾರಿಗೆ (ಕೆಎ12 4082) ಎದುರಿನಿಂದ ಬಂದ ಲಾರಿ (ಕೆಎ12 ಎ6253) ಡಿಕ್ಕಿ ಹೊಡೆದ ಪರಿಣಾಮ ಬಾಲಚಂದ್ರ ಕಳಗಿ ಮಾರಣಾಂತಿಕ ಘಾಸಿಗೊಂಡು ಕೊನೆಯುಸಿ ರೆಳೆದಿದ್ದಾರೆ.ನಗರದ ಲಾರಿ ಚಾಲಕ ಜಯ ಎಂಬಾತ ಅತಿವೇಗ ಹಾಗೂ ಅಜಾಗರೂಕತೆಯಿಂದ ಲಾರಿಯನ್ನು ಚಾಲಿಸುತ್ತಾ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ದುರ್ಘಟನೆ ಸಂಭವಿಸಿ ದ್ದಾಗಿ ಪೊಲೀಸರು ಖಚಿತಪಡಿಸಿ ದ್ದಾರೆ. ಲಾರಿ ಡಿಕ್ಕಿಯಾದ ವೇಳೆ ಕಳಗಿ ಕುಳಿತಲ್ಲೇ ಸ್ಟೇರಿಂಗ್ ಹಾಗೂ ಸೀಟಿನ ಮಧ್ಯೆ, ತಲೆಯ ಹಿಂಭಾಗಕ್ಕೆ ಮಾರಣಾಂತಿಕ ಪೆಟ್ಟಾಗಿ ತೀವ್ರ ರಕ್ತಸ್ರಾವದೊಂದಿಗೆ ಸಿಲುಕಿದ್ದಾರೆ. ಈ ವೇಳೆ ಅದೇ ಮಾರ್ಗವಾಗಿ ಕೆಲಸ ಮುಗಿಸಿ ಬರುತ್ತಿದ್ದ ಹೊದ್ದೂರು ಗ್ರಾಮದ ಚೇತನ್ ಹಾಗೂ ಇತರರು ಈ ದುರ್ಘಟನೆ ಕಂಡು ಕೂಡಲೇ ತಮ್ಮ ವಾಹನದಲ್ಲಿ ಗಾಯಾಳುವನ್ನು ಹರಸಾಹಸದಿಂದ ಹೊರಗೆಳೆದು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಷ್ಟರಲ್ಲಿ ಅವರು ಮೃತಪಟ್ಟಿರುವದು ಖಾತರಿಯಾಗಿದೆ.ಆ ಮೇರೆಗೆ ದೊರೆತ ಮಾಹಿತಿ ಯೊಂದಿಗೆ (ಮೊದಲ ಪುಟದಿಂದ) ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸುವದರೊಂದಿಗೆ ಲಾರಿ ಚಾಲಕ ಜಯ ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತ ಬಾಲಚಂದ್ರ ಕಳಗಿ ತಂದೆ ವೆಂಕಪ್ಪ ಕಳಗಿ, ಪತ್ನಿ ರಮಾದೇವಿ ಸಹಿತ ಈರ್ವರು ಸಹೋದರಿಯರನ್ನು ಅಗಲಿದ್ದಾರೆ.

ಶಾಸಕರಿಂದ ಸಂತಾಪ : ಈ ದುರ್ಘಟನೆ ಬೆನ್ನಲ್ಲೇ ಅಪಾರ ಸಂಖ್ಯೆಯಲ್ಲಿ ಬಿಜಿಪಿ ಹಾಗೂ ಸಂಘ ಪರಿವಾರ ಪ್ರಮುಖರು ಸೇರಿದಂತೆ ನಾಗರಿಕರು, ಬಂಧುವರ್ಗದವರು ಜಿಲ್ಲಾ ಆಸ್ಪತ್ರೆಯತ್ತ ದೌಡಾಯಿಸಿ ಆಘಾತ ತೋಡಿಕೊಂಡರು. ಶಾಸಕತ್ರಯರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಮತ್ತಿತರರು ಬಾಲಚಂದ್ರ ಕಳಗಿ ಭವಿಷ್ಯದ ಓರ್ವ ನಾಯಕರಾಗುವಂಥ ವ್ಯಕ್ತಿತ್ವದೊಂದಿಗೆ ಅಪಾರ ಜನಾನುರಾಗಿಯಾಗಿದ್ದರೆಂದು ಸಂತಾಪದ ನುಡಿಯಾಡಿದರು.

ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡು ದಶಕಗಳಿಂದ ಸದಸ್ಯರಾಗಿ, ಅಧ್ಯಕ್ಷರಾಗಿ, ಬಿಜೆಪಿಯ ಓರ್ವ ಕಟ್ಟಾಳುವಾಗಿ ಸೇವೆ ಸಲ್ಲಿಸಿರುವ ಬಾಲಚಂದ್ರ ಕಳಗಿ, ಪ್ರಸಕ್ತ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆಯಷ್ಟೇ ಬಿಜೆಪಿ ನಾಯಕರೊಂದಿಗೆ ಪೆರಾಜೆ, ಸಂಪಾಜೆ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡುತ್ತಾ, ಇನ್ನೊಂದು ತಿಂಗಳು ಪಕ್ಷದ ಕಾರ್ಯಕರ್ತರು ವಿರಮಿಸದೆ ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವ ದಿಸೆಯಲ್ಲಿ ಪ್ರತಾಪ್ ಸಿಂಹ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಹೊಣೆಗಾರಿಕೆ ಕಾರ್ಯಕರ್ತರಾದ ತಮ್ಮೆಲ್ಲರ ಮೇಲಿರುವದಾಗಿ ಕರೆ ನೀಡಿದ್ದರು. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಹೊರಟಿರುವ ಕಳಗಿ ಸಂಪಾಜೆ ಪಯಸ್ವಿನಿ ಬ್ಯಾಂಕ್‍ಗೆ ಭೇಟಿ ನೀಡಿದ್ದಲ್ಲದೆ, ಮಡಿಕೇರಿಯತ್ತ ಧಾವಿಸಿ ಪಕ್ಷದ ಕಚೇರಿಯಲ್ಲಿ ಇದ್ದುದ್ದಾಗಿ ಮಾಹಿತಿ ಲಭಿಸಿದೆ. ಅಲ್ಲದೆ ಸಂಜೆ 4.51ರ ಸುಮಾರಿಗೆ ಪತ್ನಿಗೆ ಕರೆ ಮಾಡಿ ಅದಷ್ಟು ಬೇಗ ಮನೆಗೆ ಬರುತ್ತಿರುವದಾಗಿ ಹೇಳಿಕೊಂಡಿದ್ದಾಗಿ ಕುಟುಂಬ ಮೂಲಗಳು ‘ಶಕ್ತಿ’ಗೆ ತಿಳಿಸಿವೆ.

ಮರಣೋತ್ತರ ಪರೀಕ್ಷೆ : ಈ ರಾತ್ರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತರ ಪಾರ್ಥಿವ ಶರೀರವನ್ನು ಸ್ವಗ್ರಾಮ ಸಂಪಾಜೆಗೆ ಕೊಂಡೊಯ್ಯಲಾಯಿತು. ತಾ. 20ರಂದು (ಇಂದು) ಅಂತ್ಯಕ್ರಿಯೆ ನಡೆಯಲಿರುವದಾಗಿ ಮೃತರ ಕುಟುಂಬ ವರ್ಗ ತಿಳಿಸಿದೆ.