ಮಡಿಕೇರಿ, ಮಾ. 19: ಗೊಂದಲದ ಗೂಡಾಗಿರುವ ಜೆಡಿಎಸ್ ಪಕ್ಷದಲ್ಲೀಗ ಅಧ್ಯಕ್ಷರ ಬದಲಾವಣೆ ಬಗ್ಗೆ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಪಕ್ಷದ ವರಿಷ್ಠರು ನೇಮಕ ಮಾಡಿರುವ ನೂತನ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಪಕ್ಷದ ಮುಖಂಡರು ಪ್ರತ್ಯೇಕ ತಂಡಗಳಾಗಿ ವರಿಷ್ಠರಿಗೆ ಮನವಿ, ಒತ್ತಡ ಹೇರುತ್ತಿರುವ ಬೆಳವಣಿಗೆ ನಡುವೆ ಅಧ್ಯಕ್ಷರ ಬದಲಾವಣೆ ಗಡುವು ಕೂಡ ನೀಡಲಾಗಿತ್ತು. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಗಡುವು ವಿಸ್ತರಣೆಗೊಂಡಿದೆ.!ಕಳೆದ ವಿಧಾನಸಭಾ ಚುನಾವಣೆ ಬಳಿಕ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಸಂಕೇತ್ ಪೂವಯ್ಯ ಅವರು ರಾಜೀನಾಮೆ ನೀಡಿದ್ದರಿಂದ ನಾಯಕನಿಲ್ಲದೆ ಪಕ್ಷ ಚಟುವಟಿಕೆಯಿಲ್ಲದೆ ಮೌನವಾಗಿತ್ತು. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಅಧ್ಯಕ್ಷಗಾದಿಗೆ ಆಕಾಂಕ್ಷಿಗಳಲ್ಲಿ ಆಸೆ ಗರಿಗೆದರಿತು. ಒಳಗೊಳಗೆ ಸಿದ್ಧತೆ ಮಾಡಿಕೊಂಡು ವರಿಷ್ಠರಿಗೆ ಶಿಫಾರಸ್ಸುಗಳು ಹೋದವು. ಪ್ರತ್ಯೇಕ ತಂಡಗಳಾಗಿ ನಿಯೋಗ ಕೂಡ ತೆರಳಿ ಮನವಿಗಳು ಸಲ್ಲಿಕೆಯಾದವು. ಅಂತಿಮವಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ ಅವರ ಆದೇಶದಂತೆ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್ ಅವರು, ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಕೆ.ಎಂ. ಗಣೇಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದರು.(ಮೊದಲ ಪುಟದಿಂದ) ಆಕ್ಷೇಪ: ಗಣೇಶ್ ಅವರು ಅಧ್ಯಕ್ಷರಾಗಿ ನೇಮಕಗೊಂಡ ಮರು ಕ್ಷಣದಿಂದಲೇ ಆಕ್ಷೇಪ, ವಿರೋಧಗಳು ಹುಟ್ಟುಕೊಂಡವು. ಮುಖಂಡ ಜೀವಿಜಯ ಅವರ ತಂಡ ಒಂದು ಕಡೆಯಾದರೆ, ಮತ್ತೊಂದು ಕಡೆ ಶ್ರೀನಿವಾಸ ಚಂಗಪ್ಪ ಅವರ ತಂಡದವರು ಆಕ್ಷೇಪಿಸಿದಲ್ಲದೆ, ಗಣೇಶ್ ಅವರನ್ನು ಬದಲಾಯಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವದಾಗಿ ಎಚ್ಚರಿಕೆ ಸಂದೇಶ ನೀಡಿದರು.ಈ ನಡುವೆ ಜೀವಿಜಯ ಅವರ ಬಣದ ಡಾ. ಯಾಲದಾಳು ಮನೋಜ್ ಬೋಪಯ್ಯ, ಎಸ್.ಎನ್. ರಾಜಾರಾವ್, ಹೆಚ್.ಬಿ. ಜಯಮ್ಮ ಮುಂತಾದವರು ಕಳೆದ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಗಣೇಶ್ ಅವರನ್ನು ಮುಂದಿನ 48 ಗಂಟೆಯೊಳಗಡೆ ಬದಲಾವಣೆ ಮಾಡದಿದ್ದಲ್ಲಿ ಜೀವಿಜಯ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ಗಡುವು ನೀಡಿದ್ದರು. ಇದೀಗ 48 ಗಂಟೆಗಳು ಕಳೆದಿದ್ದು, ಈ ಮುಖಂಡರುಗಳು ನೀಡಿದ್ದ ಗಡುವು ವಿಸ್ತರಣೆಯಾಗಿದೆ.
ಬದಲಾದರೆ ಕೆಲಸ: ಈ ಬಗ್ಗೆ ಜೀವಿಜಯ ಅವರು ದೇವೇಗೌಡರೊಂದಿಗೆ ಮಾತುಕತೆ ನಡೆಸಿದ್ದು, ಚುನಾವಣೆ ಸಂಬಂಧ ದೇವೇಗೌಡರ ಕ್ಷೇತ್ರ ಆಯ್ಕೆ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆ ನಡೆಯುತ್ತಿರುವದರಿಂದ ಕೆಲ ಸಮಯ ಸಮಾಧಾನದಿಂದ ಇರುವಂತೆ ಗೌಡರು ಹೇಳಿರುವದಾಗಿ ತಿಳಿದು ಬಂದಿದೆ. ಈ ನಡುವೆ ಜಿಲ್ಲೆಯ ಮುಖಂಡರುಗಳು ಕೂಡ ಮುಂದಿನ ನಡೆಯ ಬಗ್ಗೆ ಮಾತುಕತೆ ನಡೆಸಿದ್ದು, ಚುನಾವಣೆಯಲ್ಲಿ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಪರ ಜೀವಿಜಯ ಅವರ ನೇತೃತ್ವದಲ್ಲೇ ಕೆಲಸ ಮಾಡುವಂತೆ, ನೂತನ ಅಧ್ಯಕ್ಷ ಗಣೇಶ್ ಅವರ ಕೈ ಕೆಳಗೆ ಕೆಲಸ ಮಾಡುವದಿಲ್ಲವೆಂಬ ನಿರ್ಧಾರ ತಳೆದಿರುವದಾಗಿ ತಿಳಿದು ಬಂದಿದೆ. ಅಧ್ಯಕ್ಷರ ಬದಲಾವಣೆ ಮಾಡದಿದ್ದಲ್ಲಿ ಮುಂದಿನ ನಡೆಯ ಬಗ್ಗೆಯೂ ಚರ್ಚಿಸಿರುವದಾಗಿ ಹೇಳಲಾಗಿದೆ.
ಈ ನಡುವೆ ಗಣೇಶ್ ಅವರೂ ಕೂಡ ಜೀವಿಜಯ ಸೇರಿದಂತೆ ಮುಖಂಡರ ಸಹಕಾರ ಪಡೆದು ಪಕ್ಷವನ್ನು ಮುನ್ನಡೆಸುವದಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಗೊಂದಲದ ಗೂಡಾಗಿರುವ ಪಕ್ಷದಲ್ಲಿನ ಬಂಡಾಯ ಶಮನವಾಗುವದೋ ಅಥವಾ ಮತ್ತೆ ಹಿಂದಿನಂತೆ ‘ನಾವಿಕನಿಲ್ಲದ ದೋಣಿ’ಯಂತೆ ಪಕ್ಷ ತೇಲುತ್ತಲಿರುತ್ತದೆಯೋ ಎಂಬದೇ ನಿಗೂಢ..!