ಮಡಿಕೇರಿ, ಮಾ. 19: ಕೊಡವ ಜನಾಂಗದ ಮದುವೆಯ ಪದ್ಧತಿಗಳಲ್ಲಿ ಒಂದಾಗಿದ್ದು ವಿಶೇಷತೆಯನ್ನು ಹೊಂದಿರುವ ಗಂಗಾಪೂಜೆ (ನೀರ್ ಎಡ್ಪೊ) ಸಂದರ್ಭದಲ್ಲಿ ಮದ್ಯ ಬಳಕೆಯನ್ನು ನಿಷೇಧ ಮಾಡುವ ಮಹತ್ವವಾದ ತೀರ್ಮಾನವನ್ನು ಕೊಡಗಿನಲ್ಲಿ ಪ್ರತಿಷ್ಠಿತವಾದ ಕೊಡವ ಸಮಾಜಗಳಲ್ಲಿ ಒಂದಾಗಿರುವ ಅಮ್ಮತ್ತಿ ಕೊಡವ ಸಮಾಜ ಕೈಗೊಂಡಿದೆ.ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಒಂದು ರೀತಿಯಲ್ಲಿ ಐತಿಹಾಸಿಕವಾದಂತಹ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಗಂಗಾ ಪೂಜೆಯ ಸಂದರ್ಭದಲ್ಲಿ ಮದುಮಗಳನ್ನು ತಡೆದು ಕುಣಿಯುವ ಪದ್ಧತಿಗೆ ಅದರದ್ದೇ ಆದ ಮಹತ್ವವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಶಾಸ್ತ್ರದ ಸಂದರ್ಭದಲ್ಲಿ ತಾಸುಗಟ್ಟಲೆ ಕುಣಿಯುವದು ಸೇರಿದಂತೆ ಇನ್ನಿತರ ಹಲವು ಸನ್ನಿವೇಶಗಳ ಕುರಿತು ಅಲ್ಲಲ್ಲಿ ಚರ್ಚೆಗಳು ನಡೆಯುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಇದೀಗ ಅಮ್ಮತ್ತಿ ಸಮಾಜದ ವಾರ್ಷಿಕ ಮಹಾಸಭೆ ನಡೆದ ಸಂದರ್ಭ ಇದೇ ವಿಚಾರದಲ್ಲಿ ವಕೀಲರಾದ ಮಾಚಿಮಂಡ ಅಯ್ಯಪ್ಪ ಹಾಗೂ ಕಾವಾಡಿ ಗ್ರಾಮಸ್ಥರು ಠರಾವು ಮಂಡಿಸಿದ್ದರು. ಇದರಂತೆ ಸುದೀರ್ಘ ಚರ್ಚೆ ನಡೆದಿದ್ದು, ಬಳಿಕ ಮದುವೆ ಸಂದರ್ಭದಲ್ಲಿ ಗಂಗಾಪೂಜೆಯ ಅವಧಿಯಲ್ಲಿ ಸಮಾಜದ ಆವರಣದಲ್ಲಾಗಲಿ, ಅತಿಥಿಗೃಹ ದಲ್ಲಾಗಲಿ, ಅಲ್ಲಿನ ಬಾರ್ ಕೌಂಟರ್ನಲ್ಲಾಗಲಿ ಮದ್ಯ ಬಳಕೆಯನ್ನು ನಿಷೇಧಿಸಲಾಗಿದೆ. ಮದುಮಗಳು, ಗಂಗಾಪೂಜೆಯನ್ನು ನೆರವೇರಿಸಿ ನೆಲ್ಲಕ್ಕಿ ಬಾಡೆಯಲ್ಲಿ ಅಕ್ಕಿ ಇಡುವ ತನಕ ಇದಕ್ಕೆ ಅವಕಾಶವಿಲ್ಲ. ಇದನ್ನು ಉಲ್ಲಂಘನೆ ಮಾಡಿದವರಿಗೆ ರೂ. 25 ಸಾವಿರ ದಂಡ ವಿಧಿಸಲು ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ಈ ಹಿಂದೆಯೂ ಇಷ್ಟೇ ತಾಸು ಕುಣಿಯುವ ಅವಕಾಶ ಎಂದು ನಿಗದಿಪಡಿಸಿ ಇದನ್ನು ಮೀರಿದಲ್ಲಿ ರೂ. 5 ಸಾವಿರ ದಂಡ ವಿಧಿಸಲಾಗುತ್ತಿತ್ತು. ಆದರೆ ಕೆಲವರು ದಂಡದ ಹಣವನ್ನು ಪಾವತಿಸಿ ಇದನ್ನು ಮುಂದುವರಿಸಿ ಕೊಂಡೇ ಬಂದಿದ್ದರು. ಇದೀಗ ಮಹತ್ವದ ಶಾಸ್ತ್ರಕ್ಕೆ ಚ್ಯುತಿ ಬರಬಾರದು, ಜನಾಂಗದ ಉತ್ತಮ ಸಂಪ್ರದಾಯದ ಬಗ್ಗೆ ಉದಾಸೀನವಾಗಲಿ ಇದನ್ನು ಮನಬಂದಂತೆ ಬಳಸಿಕೊಳ್ಳಲಾಗಲಿ ಅವಕಾಶ ನೀಡದಂತೆ ಈ ತೀರ್ಮಾನಕ್ಕೆ ಬಂದಿರುವದಾಗಿ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.(ಮೊದಲ ಪುಟದಿಂದ)
ವ್ಯಕ್ತಗೊಂಡ ವ್ಯಾಪಕ ಸ್ವಾಗತ-ಬೆಂಬಲ
ಸಮಾಜ ಕೈಗೊಂಡ ಈ ತೀರ್ಮಾನವನ್ನು ತಿಳಿಸಲು ಇಂದು ವ್ಯಾಟ್ಸ್ಯಾಪ್ನಂತಹ ಸಾಮಾಜಿಕ ಜಾಲತಾಣದ ಮೂಲಕ ಇದನ್ನು ಪ್ರಕಟಿಸಲಾಗಿತ್ತು. ಇದು ಬಹಿರಂಗ ಗೊಳ್ಳುತ್ತಲೇ ವಿವಿಧ ವ್ಯಾಟ್ಸ್ಯಾಪ್ ಗುಂಪುಗಳಲ್ಲಿ, ಫೇಸ್ ಬುಕ್ಗಳಲ್ಲಿ ಇದು ಮತ್ತಷ್ಟು ಹರಿದಾಡಿದ್ದು ಇದರ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿರುವದು ಹಾಗೂ ಸಮಾಜದ ನಿರ್ಧಾರವನ್ನು ಸ್ವಾಗತಿಸಿ, ಬೆಂಬಲ ವ್ಯಕ್ತಪಡಿಸಿರುವದು ವಿಶೇಷವಾಗಿದೆ.
ಬೋಸ್ ಪ್ರತಿಕ್ರಿಯೆ: ಈ ಶಾಸ್ತ್ರದ ಸಂದರ್ಭದ ಹಲವು ಸನ್ನಿವೇಶಗಳಿಗೆ ಲಂಗುಲಗಾಮು ಇಲ್ಲದಂತಾಗಿತ್ತು. ಪದ್ಧತಿಯನ್ನು ಮೀರಿದ ವರ್ತನೆ ಅಸಹ್ಯ ಹುಟ್ಟಿಸುವಂತಹ ವಿಚಾರಗಳು, ಈಗಿನ ಆಧುನಿಕ ಯುಗದಲ್ಲಿ ಕಂಡು ಬರುತ್ತಿತ್ತಲ್ಲದೆ, ಸಂಬಂಧಿಸಿದವರೂ ಇದರಲ್ಲಿ ಭಾಗಿಗಳಾಗುವದರಿಂದ ಸಂಪ್ರದಾಯದ ಬಗ್ಗೆ ಹೊರ ಜಗತ್ತಿಗೆ ತಪ್ಪು ಅಭಿಪ್ರಾಯಗಳು ಬಿಂಬಿತವಾಗುತ್ತಿತ್ತು. ಯುವ ಜನಾಂಗಕ್ಕೆ ಇದೇ ಸಂಪ್ರದಾಯವೇನೋ ಎಂಬಂತೆ ಪ್ರೇರಣೆ ಮಾರ್ಗದರ್ಶನ ನೀಡಿದಂತಾಗುತ್ತಿತ್ತು. ಮಾತ್ರವಲ್ಲದೆ ಪೋಷಕರಿಗೆ ಅತಿಯಾದ ಹೊರೆಯೂ ಆಗುತ್ತಿತ್ತು ಎಂದರು.
ಮದುವೆ ಶಾಸ್ತ್ರಕ್ಕೆ ಸಮಾಜ ಪಡೆದುಕೊಳ್ಳುವವರು ಹಾಗೂ ಆಯಾ ಕೊಡವ ಕುಟುಂಬಗಳಿಗೆ ಈ ಬಗ್ಗೆ ಸೂಕ್ತ ಮಾಹಿತಿಯನ್ನೂ ನೀಡಲು ಉದ್ದೇಶಿಸಲಾಗಿದೆ. ಹಣಕ್ಕಿಂತ ಸಮಾಜ ಜನಾಂಗದ ಹಿತ ಬಯಸುತ್ತದೆ ಎಂದು ಬೋಸ್ ದೇವಯ್ಯ ಹೇಳಿದರು.
ಅಭಿವೃದ್ಧಿ-ಚಟುವಟಿಕೆಯ ಚರ್ಚೆ
ಪ್ರಸ್ತುತ ಸಮಾಜದಲ್ಲಿ ಜಿಲ್ಲೆಯಲ್ಲೇ ಉತ್ತಮವೆನ್ನುವ ವ್ಯವಸ್ಥೆಗಳಿವೆ. ಈ ಬಾರಿ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಕೈಲು ಮುಹೂರ್ತ ಹಾಗೂ ಹುತ್ತರಿ ಹಬ್ಬದ ಸಂಭ್ರಮಾಚರಣೆ ಮಾಡದೆ ಇದರ ಖರ್ಚಿನ ಹಣ ಹಾಗೂ ಇತರರಿಂದ ಸಂಗ್ರಹಿಸಿದ ರೂ. 5.76 ಲಕ್ಷ ಹಣವನ್ನು ಸಂತ್ರಸ್ತರಿಗೆ ನೀಡಲಾಗಿದ್ದು, ಇದಕ್ಕೆ ಮಹಾಸಭೆಯಲ್ಲಿ ಶ್ಲಾಘನೆ ವ್ಯಕ್ತಗೊಂಡಿತು. ವಿದ್ಯಾನಿಧಿಯ ಮೂಲಕ 35 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಸಭೆಯಲ್ಲಿ ಸಮಾಜದ ಉಪಾಧ್ಯಕ್ಷ ಮೊಳ್ಳೆರ ಸದಾ ಅಪ್ಪಚ್ಚು, ಕಾರ್ಯದರ್ಶಿ ನೆಲ್ಲಮಕ್ಕಡ ಬಿ. ದೇವಯ್ಯ, ಖಜಾಂಚಿ ಕುಟ್ಟಂಡ ಬೋಜಿ ಅಯ್ಯಪ್ಪ, ವ್ಯವಸ್ಥಾಪಕ ಕುಂಞಂಡ ದೇವಯ್ಯ, ಆಡಳಿತ ಮಂಡಳಿ ನಿರ್ದೇಶಕರು ಸೇರಿದಂತೆ ಸುಮಾರು 600 ಮಂದಿ ಪಾಲ್ಗೊಂಡಿದ್ದರು.