ಮಡಿಕೇರಿ, ಮಾ. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸುಂಟಿಕೊಪ್ಪ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಸಲಾಯಿತು.
ಅರ್ಚಕ ಗಣೇಶ್ ಭಟ್ ನೇತೃತ್ವದಲ್ಲಿ ಕಾನ್‍ಬೈಲು ಶ್ರೀ ರಾಮ ಮಂದಿರದಲ್ಲಿ ಜರುಗಿದ ಪೂಜಾ ಕೈಂಕರ್ಯ ಬಳಿಕ ಧಾರ್ಮಿಕ ಸಭೆ ನಡೆಯಿತು. ಕಾನ್‍ಬೈಲು ತೋಟ ವ್ಯವಸ್ಥಾಪಕ ಪಿ.ಜಿ. ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಧಾರ್ಮಿಕ ಉಪನ್ಯಾಸ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಡಾ. ಯೋಗೇಸ್ ಮಾತನಾಡಿ, ಶ್ರೀ ಕ್ಷೇತ್ರದ ಪ್ರಗತಿ ಕಾರ್ಯಕ್ರಮಗಳನ್ನು ವಿವರಿಸಿದರು. ಕಾನ್‍ಬೈಲುವಿನ ಕೃಷ್ಣಭಟ್ ಮಾತನಾಡಿ, ಧರ್ಮಸ್ಥಳ ಸ್ವಸಹಾಯ ಸಂಘದ ಚಟುವಟಿಕೆಗಳನ್ನು ಶ್ಲಾಘಿಸಿದರು. ಪ್ರಗತಿಪರ ಕೃಷಿಕ ಕೆ.ಎಂ. ನಂಜಪ್ಪ ಮಾತನಾಡಿ, ಧರ್ಮಸ್ಥಳ ಸಂಘದಿಂದ ಅನೇಕರು ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಾಗಿ ಶ್ಲಾಘಿಸಿದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪಿ.ಜಿ. ಹೆಗಡೆ ಇಂತಹ ಕಾರ್ಯಕ್ರಮಗಳಿಂದ ಸಮಾಜಕ್ಕೆ ಒಳಿತಾಗಲಿದೆ ಎಂದು ನೆನಪಿಸಿದರು.
ಕ್ಷೇತ್ರ ಯೋಜನಾಧಿಕಾರಿ ಪ್ರಕಾಶ್ ಸೇರಿದಂತೆ ಗ್ರಾಮದ ಹಿರಿಯರು, ಮಹಿಳಾ ಪ್ರಮುಖರು ಸದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಪ್ರಸಾದ, ಅನ್ನಸಂತರ್ಪಣೆಯಲ್ಲಿ ತೊಡಗಿಸಿಕೊಂಡಿದ್ದರು. ಪೂರ್ಣಿಮಾ ಪ್ರಾರ್ಥಿಸಿದರೆ, ಸುನಿತಾ ನಿರೂಪಿಸಿ, ಸ್ವಾಗತಿಸಿದರು. ಯಶೋಧ ವಂದಿಸಿದರು.