ಕುಶಾಲನಗರ, ಮಾ. 19: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೈಸೂರು ವಿಭಾಗದ ಉಸ್ತುವಾರಿ ಅಧಿಕಾರಿ ಹಾಲಪ್ಪ ಅವರು ಕುಶಾಲನಗರಕ್ಕೆ ಭೇಟಿ ನೀಡಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.

ರಸ್ತೆ ಬದಿ ಚರಂಡಿಯಲ್ಲಿ ಕೇವಲ ಮಳೆ ನೀರು ಮಾತ್ರ ಹರಿಸಬಹುದು. ವಾಣಿಜ್ಯ ಮಳಿಗೆಗಳಿಂದ ಹೊರ ಸೂಸುವ ತ್ಯಾಜ್ಯಗಳನ್ನು ಪ್ರತ್ಯೇಕ ಶುದ್ಧೀಕರಣ ಘಟಕದ ಮೂಲಕ ಸಂಸ್ಕರಿಸಿ ನಂತರ ವಿಲೇವಾರಿ ಮಾಡುವ ಯೋಜನೆ ರೂಪಿಸಬೇಕು. ಈ ಸಂಬಂಧ ಪಟ್ಟಣ ಪಂಚಾಯ್ತಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. ಇದೇ ಸಂದರ್ಭ ಮಾತನಾಡಿದ ಹಾಲಪ್ಪ ಅವರು, ಕುಶಾಲನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಚರಂಡಿಗಳನ್ನು ಕೆಲವೆಡೆ ಒತ್ತುವರಿ ಮಾಡಲಾಗಿದ್ದು ತೆರವು ಕಾರ್ಯಾಚರಣೆ ಸಧ್ಯದಲ್ಲಿಯೇ ನಡೆಯಲಿದೆ ಎಂದಿದ್ದಾರೆ.

ಮೈಸೂರು ರಸ್ತೆಯಲ್ಲಿ ಹೆದ್ದಾರಿ ಬದಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚರಂಡಿ ಕಾಮಗಾರಿ ಮುಕ್ತಾಯ ಗೊಳ್ಳುವ ಮುನ್ನ ಸಂಸ್ಕರಣಾ ಘಟಕ ನಿರ್ಮಿಸುವಂತೆ ಅವರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.

ಸಧ್ಯದಲ್ಲಿಯೇ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗುವದು. ವಾಣಿಜ್ಯ ಮಳಿಗೆಗಳು, ವಸತಿ ಗೃಹಗಳ ಮಾಲೀಕರು ತಮ್ಮ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಮತ್ತು ಕಲುಷಿತ ನೀರಿನ ವಿಲೇವಾರಿಗೆ ತಕ್ಷಣ ಕ್ರಮಕೈಗೊಳ್ಳದಿದ್ದಲ್ಲಿ ಪರವಾನಗಿ ಪತ್ರ ರದ್ದುಗೊಳಿಸಲಾಗುವದು ಎಂದು ತಿಳಿಸಿದ್ದಾರೆ.

ಈಗಾಗಲೆ ಕುಶಾಲನಗರದ ಕೆಲವು ಹೊಟೇಲ್, ಲಾಡ್ಜ್‍ಗಳ ಮತ್ತು ವಾಣಿಜ್ಯ ಘಟಕಗಳ ಮಾಲೀಕರಿಗೆ ನೊಟೀಸ್ ನೀಡಲಾಗಿದೆ ಎಂದು ಮಾಹಿತಿ ಒದಗಿಸಿದರು.

ಈ ಸಂದರ್ಭ ಪಪಂ ಇಂಜಿನಿಯರ್ ಶ್ರೀದೇವಿ, ಆರೋಗ್ಯಾಧಿಕಾರಿ ಉದಯ್, ಪಪಂ ಸದಸ್ಯರಾದ ಅಮೃತ್‍ರಾಜ್, ಶೇಖ್ ಖಲೀಮುಲ್ಲಾ, ಮಾಜಿ ಅಧ್ಯಕ್ಷರಾದ ಹೆಚ್.ಜೆ.ಕರಿಯಪ್ಪ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರ ಮೋಹನ್, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ತಾಲೂಕು ಯುವ ಮೋರ್ಚಾ ಕಾರ್ಯಾಧ್ಯಕ್ಷ ಎಂ.ಡಿ.ಕೃಷ್ಣಪ್ಪ ಮತ್ತಿತರರು ಇದ್ದರು.