ಮಡಿಕೇರಿ ಮಾ. 18 : ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಶೆಡ್ಯೂಲ್‍ಪಟ್ಟಿಗೆ ಸೇರ್ಪಡೆ ಗೊಳಿಸುವ ಸಂಬಂಧ ಅಂತರರಾಷ್ಟ್ರೀಯ ಜನಾಂಗೀಯ ತಾರತಮ್ಯ ದಿನಾಚರಣೆಯ ಅಂಗವಾಗಿ ತಾ. 21ರಂದು ಅಂತರರಾಷ್ಟ್ರೀಯ ಖ್ಯಾತಿಯ ರಾಜಕೀಯ ವಿಜ್ಞಾನಿ ಪ್ರೊ. ಡಾ|| ಬಲವೀರ್ ಆರೋರ ಅವರಿಂದ ವಿಚಾರಗೋಷ್ಠಿ ಆಯೋಜಿಸಲಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಪೂರ್ವಾಹ್ನ 10.30 ಗಂಟೆಗೆ ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್‍ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಕೊಡಗಿನ ಆದಿಮಸಂಜಾತ ಯೋಧ ಬುಡಕಟ್ಟು ಸಮುದಾಯವಾದ ಕೊಡವರನ್ನು ಸಂವಿಧಾನದ 340-342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಗೆ ಸೇರ್ಪಡೆಗೊಳಿಸಿ ರಾಜ್ಯಾಂಗ ಖಾತ್ರಿ ನೀಡಬೇಕೆನ್ನುವ ಹಕ್ಕೊತ್ತಾಯವನ್ನು ಮುಂದಿರಿಸಿ ಹಾಗೂ ಕೊಡವ ಲ್ಯಾಂಡ್ ಸ್ವಾಯತ್ತತೆಯ ಆಂದೋಲನ ದೊಂದಿಗೆ ಸಂಘಟನೆಯು ಹಲವು ವರ್ಷಗಳಿಂದ ನಿರಂತರ ಜ್ಞಾಪನಾ ಪತ್ರಗಳನ್ನು ಸಲ್ಲಿಸುತ್ತಾ ಬಂದಿದೆ. ಸಂಘಟನೆಯ ದೀರ್ಘಕಾಲಿನ ಆಶೋತ್ತರ ಗಳನ್ನು ಪರಿಗಣಿಸಿದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದೀಗ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನವನ್ನು ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆಯ ವಿದ್ವಾಂಸರಿಂದ ನಡೆಸುತ್ತಿದೆ ಎಂದು ಹೇಳಿದರು. ಕುಲಶಾಸ್ತ್ರ ಅಧ್ಯಯನ ಕಾರ್ಯ ಸಮಾರೋಪಾದಿಯಲ್ಲಿ ಹತ್ತಾರು ಗ್ರಾಮಗಳು ಮತ್ತು ನಾಡುಗಳನ್ನು ಕ್ರಮಿಸಿ, ನೂರಾರು ಕೊಡವ ಒಕ್ಕಗಳಿಗೆ ಭೇಟಿಯಿತ್ತು, ಸಾವಿರಾರು ಕೊಡವರೊಂದಿಗೆ ಸಂವಹನ ನಡೆಸಿ, ಕೊಡವರ ಪ್ರಾಚೀನತೆ ಮತ್ತು ಅವರ ಬುಡಕಟ್ಟು ಸಂಸ್ಕøತಿ, ಸಂಸ್ಕಾರಗಳ ಹಿನ್ನೆಲೆಗಳನ್ನು ಕಲೆ ಹಾಕುತ್ತಿದ್ದು, ಪ್ರಗತಿಯಿಂದ ಈ ಅಧ್ಯಯನ ಕಾರ್ಯ ಮುಂದುವರೆದಿದೆ ಎಂದು ನಾಚಪ್ಪ ವಿವರಿಸಿದರು.

ಈ ನಡುವೆ ಈ ಹಕ್ಕೊತ್ತಾಯಕ್ಕೆ ಸ್ಪೂರ್ತಿದಾಯಕವಾದ ಸಾಂವಿಧಾನಿಕ ಅಂಶಗಳತ್ತ ಬೆಳಕು ಚೆಲ್ಲುವ ಉದ್ದೇಶದಿಂದ ಸಿ.ಎನ್.ಸಿ. ಆಶ್ರಯದಲ್ಲಿ ವಿಶ್ವ ಜನಾಂಗೀಯ ತಾರತಮ್ಯ ನಿವಾರಣಾ ದಿನವಾದ ತಾ. 21ರಂದು ಪೂರ್ವಾಹ್ನ 10.30 ಗಂಟೆಗೆ ಮಡಿಕೇರಿ ಸನಿಹದ ಕ್ಯಾಪಿಟಲ್ ವಿಲೇಜಿನಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿದೆ. ಅನೇಕ ಜನಾಂಗೀಯ ಬುಡಕಟ್ಟುಗಳ ಹಕ್ಕೊತ್ತಾಯಕ್ಕೆ ಪೂರಕವಾಗಿ ಬರಹಗಳನ್ನು, ಸಾಹಿತ್ಯಿಕ ಅಂಶಗಳನ್ನೊಳಗೊಂಡ ಲೇಖನಗಳನ್ನು ಒದಗಿಸಿ, ಸರಕಾರಗಳಿಗೆ ಕಾನೂನು ರೂಪಿಸಲು ಸಹಾಯ ಒದಗಿಸಿರುವ ವಿದ್ವಾಂಸ, ದೆಹಲಿಯ ಜವಹರ್‍ಲಾಲ್ ನೆಹರು ವಿಶ್ವ ವಿದ್ಯಾನಿಲಯದ ರೆಕ್ಟರ್ ಹಾಗೂ ಪ್ಯಾರಿಸ್ (ಫ್ರಾನ್ಸ್) ವಿಶ್ವ ವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಮತ್ತು ಟ್ಯುನಿಷಿಯಾ ದೇಶಕ್ಕೆ ನೂತನ ಸಂವಿಧಾನ ರೂಪಿಸಲು ರಚಿಸಿದ್ದ ಸಂವಿಧಾನ ಕರಡು ಸಮಿತಿಯ ಸದಸ್ಯರೂ ಆಗಿರುವ ರಾಜಕೀಯ ವಿಜ್ಞಾನಿ ಪ್ರೊ. ಡಾ. ಬಲವೀರ್ ಅರೋರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.