ವೀರಾಜಪೇಟೆ, ಮಾ. 18. ಕಳೆದ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದೆ ವಿದೇಶ ಸುತ್ತುವದರಲ್ಲೇ ಕಾಲಹರಣ ಮಾಡಿದ ಪ್ರಧಾನಿ ಮೋದಿ ದೇಶದ ಚೌಕಿದಾರ್ ಅಲ್ಲ, ಶೋಕಿದಾರ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕೆಪಿಸಿಸಿ ಚುನಾವಣಾ ವೀಕ್ಷಕರಾದ ವೆಂಕಪ್ಪ ಗೌಡ ಅವರು ವಾಗ್ದಾಳಿ ನಡೆಸಿದರು.ವೀರಾಜಪೇಟೆಯ ಮಹಿಳಾ ಸಮಾಜದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ತಾಲೂಕು ಕಾರ್ಯಕರ್ತರಿಗೆ ಏರ್ಪಡಿಸಿದ್ದ ಚುನಾವಣಾ ಸಿದ್ಧತಾ ಶಿಬಿರದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಪ್ರಧಾನಿ ಮೋದಿಯನ್ನು ಟೀಕಿಸಿದರು. 2013 ರಲ್ಲಿ ಕಾಂಗ್ರೆಸ್ ಸರ್ಕಾರ ಲೋಕಪಾಲ ನೀತಿಯನ್ನು ಜಾರಿಗೆ ತಂದಿದ್ದರೂ ನಂತರ ಬಂದ ಬಿಜೆಪಿ ಸರ್ಕಾರ ಅದಕ್ಕೆ ಮುಖ್ಯಸ್ಥರನ್ನು ನೇಮಕ ಮಾಡಲು 4 ವರ್ಷ 11 ತಿಂಗಳು ತೆಗೆದು ಕೊಂಡಿತ್ತು. ಮೊದಲೇ ನೇಮಕ ಮಾಡಿದ್ದರೆ ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಆಗಿರುವ ಅಕ್ರಮಗಳು ಬಯಲಾಗುತ್ತದೆ ಎಂದು ಮುಖ್ಯಸ್ಥರ ನೇಮಕ ವಿಳಂಬ ಮಾಡಿದರು ಎಂದು ಅರೋಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಕೆ. ಮಂಜುನಾಥ್ ಮಾತನಾಡಿ, ಕಾರ್ಯಕರ್ತರು ಪರಸ್ಪರ ವೈಮನಸ್ಸನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಪಕ್ಷಕ್ಕೆ ಜಯ ಖಂಡಿತ ಎಂದರು.
ವೇದಿಕೆಯಲ್ಲಿ ಪಕ್ಷದ ಹಿರಿಯರಾದ ಟಿ.ಪಿ. ರಮೇಶ್, ವಕ್ಪ್ ಬೋರ್ಡನ ಅಧ್ಯಕ್ಷ ಯಾಕೂಬ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ಕೆಪಿಸಿಸಿ ಸದಸ್ಯೆ ತಾರಾ ಅಯ್ಯಮ್ಮ, ಜಿ.ಜಿ. ಮೋಹನ್, ಪರಿಶಿಷ್ಟ ಜಾತಿ ಪಂಗಡ ಘಟಕದ ಅಧ್ಯಕ್ಷ ವಿ.ಕೆ. ಸತೀಸ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ, ಸಂಭವನೀಯ ಅಭ್ಯರ್ಥಿ ವಿಜಯಶಂಕರ್ ಹಾಗೂ ಇತರರು ಉಪಸ್ಥಿತರಿದ್ದರು.