ಮಡಿಕೇರಿ, ಮಾ. 18: ಕರ್ನಾಟಕ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಉಮೇಶ್ ಕುಮಾರ್ ಅವರು, ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಚುನಾವಣೆ ಸಂಬಂಧ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅವರು ಇಲ್ಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲದೆ ಜಿಲ್ಲೆಯ ಗಡಿಗಳಲ್ಲಿ ಮತ್ತು ಪ್ರಮುಖ ಚೆಕ್‍ಪೋಸ್ಟ್‍ಗಳಲ್ಲಿ ತೀವ್ರ ನಿಗಾ ವಹಿಸುವ ಮೂಲಕ ಸಮಾಜದಲ್ಲಿ ಯಾವದೇ ಕಾನೂನು ಬಾಹಿರ ಕೃತ್ಯಗಳಿಗೆ ಎಡೆಯಾಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಗೋಣಿಕೊಪ್ಪಲು, ವೀರಾಜಪೇಟೆ ಹಾಗೂ ಮಡಿಕೇರಿ ವ್ಯಾಪ್ತಿಯ ಠಾಣಾಧಿಕಾರಿಗಳು ಮತ್ತು ವೃತ್ತ ನಿರೀಕ್ಷಕರೊಂದಿಗೆ ಐ.ಜಿ. ಖುದ್ದು ಚರ್ಚಿಸಿ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಪಡೆದುಕೊಂಡಿದ್ದಾಗಿ ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.