ಸೋಮವಾರಪೇಟೆ, ಮಾ. 19: ಅರಣ್ಯ ಒಣಗಿ ನಿಂತಿದೆ. ಸಣ್ಣ ಕಡ್ಡಿ ಗೀರಿದರೂ ಸಾವಿರಾರು ಎಕರೆ ಅರಣ್ಯ ಪ್ರದೇಶ ಕೆಲವೇ ಗಂಟೆಗಳಲ್ಲಿ ಭಸ್ಮವಾಗುವ ಹಂತದಲ್ಲಿದೆ. ಕೇವಲ ಮರಗಿಡಗಳಷ್ಟೇ ಅಲ್ಲ;ಅಸಂಖ್ಯಾತ ವನ್ಯಜೀವಿ, ಜೀವವೈವಿಧ್ಯಗಳು ಕ್ಷಣಮಾತ್ರದಲ್ಲಿ ಹೇಳಹೆಸರಿಲ್ಲದಂತೆ ಭಸ್ಮವಾಗುವ ಸನ್ನಿವೇಶ ಗೋಚರಿಸುತ್ತಿದೆ. ಅರಣ್ಯದಲ್ಲಿ ಹನಿನೀರೂ ಇಲ್ಲದಂತಾಗಿದ್ದು, ವನ್ಯಪ್ರಾಣಿಗಳು ಬಾಯಾರಿಕೆಯೊಂದಿಗೆ ಜೀವ ಉಳಿಸಿಕೊಳ್ಳಲೂ ಸಹ ಹೋರಾಟ ನಡೆಸುತ್ತಿವೆ.

ಈ ಮಧ್ಯೆ..!?

ಅರಣ್ಯ ಉತ್ಪನ್ನಗಳ ಕಳ್ಳರೇ ಹಲವು ಕಡೆಗಳಲ್ಲಿ ಬೆಂಕಿ ಹಾಕುತ್ತಿರುವ ಬಗ್ಗೆ ಇಲಾಖಾಧಿಕಾರಿಗಳಲ್ಲಿ ಸಂಶಯ ಮೂಡುತ್ತಿದೆ. ಅರಣ್ಯದ ಉತ್ಪನ್ನಗಳು, ಬೆಲೆಬಾಳುವ ಮರಗಳನ್ನು ಕಳವು ಮಾಡಲು ಅವಕಾಶ ನೀಡದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ವಾಮಮಾರ್ಗದಲ್ಲಿ ಸೇಡು ತೀರಿಸಿಕೊಳ್ಳಲು ಇಂತಹ ನೀಚ ಕೃತ್ಯಕ್ಕೆ ಕೆಲವು ಮರಗಳ್ಳರು ಇಳಿದಿದ್ದಾರೆ ಎಂಬ ಮಾತುಗಳನ್ನು ಅರಣ್ಯವಾಸಿಗಳು ಮತ್ತು ಅರಣ್ಯ ಇಲಾಖಾ ಸಿಬ್ಬಂದಿಗಳೇ ಹೇಳಿಕೊಂಡಿದ್ದಾರೆ.

ಅರಣ್ಯಕ್ಕೆ ತಾವೇ ಬೆಂಕಿ ಹಚ್ಚಿ ಆಕಸ್ಮಿಕ ಕಾಡ್ಗಿಚ್ಚು ಎಂದು ಇಲಾಖೆಯ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ. ಸಾರ್ವಜನಿಕ ವಲಯದಲ್ಲಿ ಅರಣ್ಯ ಇಲಾಖೆಯ ಮೇಲೆ ಸಂಶಯದ ಭಾವನೆ ಮೂಡುವಂತೆ ಮಾಡಲಾಗುತ್ತಿದೆ. ಇದರೊಂದಿಗೆ ಅರಣ್ಯ ಇಲಾಖೆಯ ಮೇಲಧಿಕಾರಿಗಳಿಂದ ಕೆಳಹಂತದ ಅಧಿಕಾರಿಗಳಿಗೆ ‘ಬಿಸಿ’ ಮುಟ್ಟಿಸುವ ಕುತಂತ್ರವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಸಿಬ್ಬಂದಿಗಳು ಅಳಲುತೋಡಿಕೊಂಡಿದ್ದಾರೆ.

ಅರಣ್ಯೋತ್ಪನ್ನ ಮತ್ತು ಅಕ್ರಮ ಮರಗಳ್ಳರನ್ನು ಬಲಿಹಾಕುತ್ತಿರುವ ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಅರಣ್ಯಕ್ಕೆ ಬೆಂಕಿ ಹಾಕಲಾಗುತ್ತಿದೆ. ಆ ಮೂಲಕ ಸ್ಥಳೀಯ ಅಧಿಕಾರಿಗಳ ಕರ್ತವ್ಯದಲ್ಲಿ ‘ಕಪ್ಪುಚುಕ್ಕೆ’ ಉಂಟು ಮಾಡಿ ಇಲ್ಲಿಂದ ವರ್ಗಾಯಿಸಲು ಕುತಂತ್ರ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖಾ ಸಿಬ್ಬಂದಿಗಳು ಎಚ್ಚೆತ್ತುಕೊಂಡಿದ್ದು, ಅಂತಹವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಸೂಕ್ತ ಸಾಕ್ಷಿ ಲಭಿಸಿದರೆ ಹೆಡೆಮುರಿಕಟ್ಟಲು ಅಧಿಕಾರಿಗಳು ಸಿದ್ಧತೆ ಕೈಗೊಂಡಿದ್ದಾರೆ. ಇದರ ಜತೆಜತೆಯಲ್ಲೇ ಒಣಗಿ ನಿಂತಿರುವ ಅರಣ್ಯ-ಇಳೆಯನ್ನು ತಂಪಾಗಿಸಿ, ಕೃತಕ ಮತ್ತು ಕಿಡಿಗೇಡಿಗಳಿಂದ ಉಂಟಾಗುವ ಕಾಡ್ಗಿಚ್ಚಿನಿಂದ ಅರಣ್ಯವನ್ನು ರಕ್ಷಿಸುವಂತೆ ಮಳೆಗಾಗಿ ಮನದಲ್ಲೇ ಪ್ರಾರ್ಥಿಸುತ್ತಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳ ಕಟ್ಟುನಿಟ್ಟಿನ ಕರ್ತವ್ಯ ನಿರ್ವಹಣೆಯಿಂದ ಕಂಗೆಟ್ಟಿರುವ ಮರಗಳ್ಳರು, ಅರಣ್ಯಕ್ಕೆ ಬೆಂಕಿ ಹಾಕಿ ಅಸಂಖ್ಯಾತ ವನ್ಯಜೀವಿ ಪ್ರಬೇಧ, ನೂರಾರು ಎಕರೆ ವನಸಂಪತ್ತನ್ನು ಭಸ್ಮ ಮಾಡುವ ಮೂಲಕ ನೀಚಕೃತ್ಯಕ್ಕೆ ಇಳಿದಿರುವದು ಮಾತ್ರ ಖಂಡನಾರ್ಹ ಎಂದು ಅರಣ್ಯ ಪ್ರೇಮಿಗಳು ಅಭಿಪ್ರಾಯಿಸಿದ್ದಾರೆ.