ಮಡಿಕೇರಿ, ಮಾ. 17: ಕಳೆದ ಆಗಸ್ಟ್‍ನಲ್ಲಿ ಜಿಲ್ಲೆಯ ಅನೇಕ ಕಡೆ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಕಾಲೂರು ಗ್ರಾಮವು ಕೂಡ ತೀವ್ರವಾಗಿ ಹಾನಿಗೊಳಗಾದ ಪ್ರದೇಶ ಎನಿಸಿತ್ತು. ಆ ಸಂದರ್ಭ ಅಲ್ಲಿ ತಮ್ಮ ಕೃಷಿ ಭೂಮಿಯನ್ನು ಹೊಂದಿದ್ದ ಕಾರೇರ ಕುಟುಂಬದ ದಂಪತಿಗಳಾದ ಹರೀಶ್ ಮತ್ತು ರತು ಎಂಬವರುಗಳು ತಮ್ಮ ಕೃಷಿ ಭೂಮಿಯನ್ನು ಕೂಡ ವಿಕೋಪದಲ್ಲಿ ಕಳೆದುಕೊಂಡಿದ್ದರು. ಅನೇಕ ವರ್ಷಗಳಿಂದ ಶ್ರಮಪಟ್ಟು ಬೆಳೆಸಿದ್ದ ತೋಟ ನಾಶವಾಗಿತ್ತು. ಆದರೂ ಕೂಡ ಕಾಲೂರಿನ ತಮ್ಮ ಇತರ ನಿಕಟವರ್ತಿ ಗ್ರಾಮಸ್ಥರಿಗೋಸ್ಕರ ಭಾರತೀಯ ವಿದ್ಯಾಭವನ ಕೈಗೊಂಡಿದ್ದ ಸಂತ್ರಸ್ತರ ಪುನಶ್ಚೇತನ ಯೋಜನೆಗಳಲ್ಲಿ ಕೈ ಜೋಡಿಸಿದ್ದರು.
ಈ ದಂಪತಿಯ ಸೇವೆ ಇಷ್ಟಕ್ಕೆ ಮುಕ್ತಾಯಗೊಳ್ಳದೆ ನಿನ್ನೆ ದಿನ ಭಾರತೀಯ ವಿದ್ಯಾಭವನ ಸಂತ್ರಸ್ತರ ನೆರವಿಗಾಗಿ ಕೈಗೊಂಡಿರುವ ಪ್ರಾಜೆಕ್ಟ್ ಕೂರ್ಗ್‍ನ ‘ಯಶಸ್ವಿ’ ಕಾರ್ಯಕ್ರಮಕ್ಕಾಗಿ 25 ಸೆಂಟ್ ಜಾಗವನ್ನು ಕೂಡ ಉದಾರವಾಗಿ ದಾನ ನೀಡಿದ್ದಾರೆ. ಕಾರೇರ ದಂಪತಿಗಳ ಈ ವಿಶಾಲ ಮನೋಭಾವ ಪರೋಪಕಾರ ಔದಾರ್ಯವನ್ನು ವಿದ್ಯಾಭವನ ಕೊಡಗು ಘಟಕದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಅವರು ಸ್ವಾಗತಿಸಿದ್ದು, ಕಾರ್ಯಯೋಜನೆ ಜಾರಿಗೆ ಸ್ಥೈರ್ಯ ಬಲ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.