ಶನಿವಾರಸಂತೆ, ಮಾ. 16: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಹಸಿರು ಮೆಣಸಿನಕಾಯಿ ಸಂತೆ ಆರಂಭವಾಗಿದೆ. ಶನಿವಾರ ಬೆಳಗ್ಗಿನ ಜಾವ 5 ಗಂಟೆಗೆ ರೈತರು ತಾವು ಬೆಳೆದ ಮೆಣಸಿನಕಾಯಿ ತುಂಬಿದ 50 ಚೀಲಗಳನ್ನು ಮಾರಾಟಕ್ಕೆ ತಂದಿದ್ದರು. 16 ಕೆ.ಜಿ. ಮೆಣಸಿನಕಾಯಿ ತುಂಬಿದ 1 ಚೀಲಕ್ಕೆ ರೂ. 600-650 ದರ ದೊರೆತು ರೈತರು ಹರ್ಷಚಿತ್ತರಾದರು.ಮಾರುಕಟ್ಟೆಯಲ್ಲಿ 9 ಗಂಟೆಗೆಲ್ಲ ವ್ಯಾಪಾರ ಮುಗಿದಿತ್ತು. ಅರಕಲಗೂಡಿನಿಂದ ಬಂದ ವ್ಯಾಪಾರಿಗಳು ಖರೀದಿಸಿದ ಮೆಣಸಿನಕಾಯಿ ತುಂಬಿದ ಚೀಲಗಳನ್ನು ಮಂಗಳೂರಿಗೆ ರವಾನಿಸಿದರು. ಮೈಸೂರು, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಇತರ ಕಡೆಗಳಿಂದ ಬಂದಿದ್ದ ವ್ಯಾಪಾರಿಗಳು ಬರಿಗೈಯಲ್ಲಿ ಹಿಂದಿರುಗಿದರು. ಬೇಡಿಕೆ ಇದ್ದರೂ ಮಾರುಕಟ್ಟೆಗೆ ಮಾಲು ಹೆಚ್ಚಾಗಿ ಬಂದಿರಲಿಲ್ಲ. ಚೈತ್ರ ಮಾಸ ಆರಂಭವಾಗುತ್ತಿ ದ್ದಂತೆ ಗಾಳಿಯಲ್ಲಿ ಹಸಿರು ಮೆಣಸಿನಕಾಯಿ ಘಾಟು ಬೆರೆತು ತನ್ನ ಇರುವಿಕೆಯನ್ನು ಸಾರುತ್ತದೆ. ಶನಿವಾರಸಂತೆ ಹೋಬಳಿಯ ಹಲವು ಗ್ರಾಮಗಳಲ್ಲಿ ಇದೀಗ ಹಸಿರು ಮೆಣಸಿನಕಾಯಿ ಬೇಸಾಯ ಆರಂಭವಾಗಿದೆ. ಮಳೆಯ ಸುಳಿವಿಲ್ಲ. ಬಿರು ಬಿಸಿಲಿನ ವಾತಾವರಣ ಬೆಳಗ್ಗಿನ ಜಾವ ಸುರಿಯುತ್ತಿರುವ ಮಂಜು ಗಿಡಗಳಿಗೆ ರೋಗ ಉಂಟು ಮಾಡಿದೆ. ಎಲ್ಲೆಡೆ ನೀರಿಗೆ ತಾತ್ವಾರ ಕುಡಿಯುವ ನೀರಿಗೆ ಬರ ಬಂದಿರುವಾಗ ಕೃಷಿಗೆ ನೀರೊದಗಿಸಲು ಕಷ್ಟ ಸಾಧ್ಯ. ಕೊಳವೆ ಬಾವಿ ಇತ್ಯಾದಿ ನೀರಿನ ಅನುಕೂಲ ಇರುವವರಷ್ಟೆ ಮೆಣಸಿನಕಾಯಿ ಬೆಳೆದಿದ್ದಾರೆ. ಹಾಗಾಗಿ ಈ ವರ್ಷ ಬೆಳೆ ಕಡಿಮೆಯಾಗಿದ್ದು,
(ಮೊದಲ ಪುಟದಿಂದ) ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಉತ್ತಮ ದರ ದೊರೆಯುತ್ತಿದ್ದರೂ, ಇಳುವರಿ ಕಡಿಮೆ. ಸಂತೆ ಮಾರುಕಟ್ಟೆಗೆ ಹಸಿರು ಮೆಣಸಿನಕಾಯಿ ಮಾತ್ರವಲ್ಲ ತರಕಾರಿಯೂ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ದರ ದುಬಾರಿಯಾಗಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ವಾಹನ ಸೌಲಭ್ಯ ಇರುವ ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ ತರಕಾರಿ ಖರೀದಿಸುತ್ತಿದ್ದಾರೆ. ಬಿಸಿಲಿನ ವಾತಾವರಣ ಹಾಗೂ ಮಂಜು ಬೀಳುತ್ತಿರುವದರಿಂದ ತರಕಾರಿ ಬೆಳೆಯುವದು ಕಡಿಮೆಯಾಗಿದೆ ಎಂದು ಮಾರುಕಟ್ಟೆ ಸುಂಕ ವಸೂಲಿದಾರ ಮೋಹನ್ ಅಭಿಪ್ರಾಯಪಡುತ್ತಾರೆ.