ಗೋಣಿಕೊಪ್ಪ ವರದಿ, ಮಾ. 17: ಕೀರೆ ಹೊಳೆ, ಕೈತೋಡು ಒತ್ತುವರಿ ತೆರವು ಹಾಗೂ ನಿವೇಶನವಿದ್ದರೂ ನಿರಾಶ್ರಿತರಿಗೆ ನಿವೇಶನ ಕಲ್ಪಿಸದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ನಡೆ ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಸ್ಥಳೀಯ ಮಾಹಿತಿ ಹಕ್ಕು ಕಾರ್ಯಕರ್ತ ಹೆಚ್.ಎಲ್. ಕುಮಾರಪ್ಪ ಆರೋಪಿಸಿದ್ದಾರೆ.
ಪಟ್ಟಣದ ಮೂಲಕ ಹರಿಯುತ್ತಿರುವ ಕೀರೆ ಹೊಳೆ ದಂಡೆ ಒತ್ತುವರಿ ತೆರವು ವಿಚಾರದಲ್ಲಿ ಹಾಗೂ ನಿವೇಶನ ರಹಿತರಿಗೆ ಜಾಗ ನೀಡುವಲ್ಲಿ ಹಿಂದೇಟು ಹಾಕುತ್ತಿರುವ ಪಂಚಾಯಿತಿ ಕಾರ್ಯದ ಬಗ್ಗೆ ಸಂಶಯ ಮೂಡುತ್ತಿದ್ದು, ಶೀಘ್ರವಾಗಿ ಒತ್ತುವರಿ ತೆರವು ಮಾಡುವ ಮೂಲಕ ಹೊಳೆ ದಂಡೆ ರಕ್ಷಣೆಗೆ ಸ್ಥಳೀಯ ಪಂಚಾಯಿತಿ ಮುಂದಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಕೀರೆ ಹೊಳೆ ದಂಡೆ ಒತ್ತುವರಿ ತೆರವು ಮಾಡಲು ಸಾಕಷ್ಟು ಬಾರಿ ಸ್ಥಳೀಯ ಪಂಚಾಯಿತಿ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಾ ಒತ್ತಾಯಿಸಲಾಗುತ್ತಿದೆ. ಆದರೆ, ಸೂಕ್ತ ಸ್ಪಂದನ ಸಿಗುತ್ತಿಲ್ಲ. ಪಂಚಾಯಿತಿ ಅಧಿಕಾರಿಗಳು ಒತ್ತುವರಿ ನಡೆದಿಲ್ಲ ಎಂದು ಒತ್ತುವರಿದಾರರ ಪರವಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.
ಒತ್ತುವರಿ ಮಾಡಿರುವ ಬಗ್ಗೆ ಭೂಮಾಪನ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿದೆ. ಸುಮಾರು 20 ಕ್ಕೂ ಹೆಚ್ಚು ಸ್ಥಳೀಯರು ಕೀರೆ ಹೊಳೆ ಹರಿಯುವ ಅತ್ತೂರು, ಅರ್ವತೊಕ್ಲು, ಹೆಬ್ಬಾಲೆ, ಗೋಣಿಕೊಪ್ಪ ಗ್ರಾಮದಲ್ಲಿನ ಮಾಹಿತಿ ನೀಡಿದ್ದರೂ ತೆರವಿಗೆ ಮುಂದಾಗದ ಬಗ್ಗೆ ಸಂಶಯ ಮೂಡಿಸಿದೆ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿ ಪರಿಹಾರಕ್ಕೆ ಮುಂದಾಗದಿರುವದನ್ನು ಗಮನಿಸಿದಾಗ ಸ್ಥಳೀಯ ಪಂಚಾಯಿತಿ ಒತ್ತುವರಿಗೆ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿದರು.
ಪೈಪ್‍ಲೈನ್ ಅಳವಡಿಕೆಯಲ್ಲಿ ಲಕ್ಷಾಂತರ ಹಣವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಅವ್ಯವಹಾರ ನಡೆಸುತ್ತಿದೆ. ಪೈಪ್‍ಲೈನ್ ಅಳವಡಿಕೆ ವಿಸ್ತರಣೆ ಬಗ್ಗೆ 1,2,3,4,8, ವಿಭಾಗ ಹಾಗೂ ನೇತಾಜಿ ಬಡಾವಣೆಗೆ ನಿರ್ಮಿಸಿರುವ ಪೈಪ್ ಖರೀದಿ ಬಗ್ಗೆ ಬಿಲ್ಲು ನೀಡುವಂತೆ ಮಾಹಿತಿ ಹಕ್ಕಿನ ಮೂಲಕ ಅರ್ಜಿ ಸಲ್ಲಿಸಿದ್ದರೂ ಮಾಹಿತಿ ನೀಡುತ್ತಿಲ್ಲ. ಪೈಪ್‍ಲೈನ್ ನಿರ್ಮಾಣದ ಹೆಸರಿನಲ್ಲಿ ಹಣ ಪೋಲಾಗುತ್ತಿದೆ ಎಂದು ಆರೋಪಿಸಿದರು.
ಎಸ್ಸಿ ಮೀಸಲಾತಿಯಲ್ಲಿ ಮಹಾದೇವ ಎಂಬುವವರ ಹೆಸರಿನಲ್ಲಿ ಶೌಚಗೃಹ ನಿರ್ಮಾಣಕ್ಕೆ 50 ಸಾವಿರ ಎಂದು ಲೆಕ್ಕ ನೀಡಲಾಗಿದೆ. ಮಹಾದೇವ ಅವರ ಜಾತಿ ಬಗ್ಗೆ ಪ್ರಮಾಣಪತ್ರ ನೀಡಲು ಹಿಂದೇಟು ಹಾಕುತ್ತಿರುವದು ಸಂಶಯ ಮೂಡಿಸಿದೆ ಎಂದು ಆರೋಪಿಸಿದರು.
ನಿವೇಶನ ರಹಿತರಿಗೆ ಜಾಗ ನೀಡಲು ತಾಲೂಕು ಕಾರ್ಯನಿರ್ವಹಣಾಧಿಕಾರಿ ಅವರ ಹೆಸರಿನಲ್ಲಿ ಅರ್ವತೊಕ್ಲು ಗ್ರಾಮದಲ್ಲಿ ಜಾಗ ಇದ್ದರೂ ಕೂಡ ನಿರಾಶ್ರಿತರಿಗೆ ಜಾಗ ನೀಡದೆ ಸತಾಯಿಸಲಾಗುತ್ತಿದೆ. ಸುಮಾರು 15 ಮಂದಿ ನಿರಾಶ್ರಿತರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಪಟ್ಟಿ ತಿದ್ದುಪಡಿಯಾಗಿ ಬಂದಿದ್ದರೂ ಸ್ಪಂದನ ನೀಡುತ್ತಿಲ್ಲ ಎಂದರು. ಈ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು, ಸಾಮಾನ್ಯ ಜನರಿಗೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.