ಕುಶಾಲನಗರ, ಮಾ. 17: ಕುಶಾಲನಗರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಮಿತಿಮೀರಿದ್ದು, ಪಟ್ಟಣದ ಜನತೆ ಹಣ ನೀಡಿ ತಮ್ಮ ಕೆಲಸ ಕಾರ್ಯ ಗಳನ್ನು ಮಾಡುವ ಪರಿಸ್ಥಿತಿ ಉಂಟಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಪ.ಪಂ. ಮಾಜಿ ಸದಸ್ಯ ನಂಜುಂಡಸ್ವಾಮಿ ಈ ಬಗ್ಗೆ ಪಂಚಾಯಿತಿ ಆಡಳಿತಾಧಿಕಾರಿ ಗೋವಿಂದರಾಜ್ ಅವರಿಗೆ ಲಿಖಿತ ದೂರು ನೀಡಿದ್ದು ದಲ್ಲಾಳಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ನಾಗರಿಕರು ನೇರವಾಗಿ ಕಚೇರಿಗೆ ಬಂದು ತಮ್ಮ ಕೆಲಸ ಮಾಡಿಸಿಕೊಳ್ಳಲು ಕಚೇರಿ ಸಿಬ್ಬಂದಿಗಳು ಸಹಕರಿಸುತ್ತಿಲ್ಲ. ನಾಲ್ವರು ದಲ್ಲಾಳಿಗಳು ಬೆಳಗಿನಿಂದ ಸಂಜೆ ತನಕ ಕಚೇರಿಯಲ್ಲೇ ಠಿಕಾಣಿ ಹೂಡುತ್ತಿದ್ದು ತಮ್ಮ ಮೂಲಕ ಕಚೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ದಲ್ಲಾಳಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಗೋವಿಂದರಾಜು, ಈ ಬಗ್ಗೆ ಪರಿಶೀಲನೆ ನಡೆಸಿ ದಲ್ಲಾಳಿಗಳ ಮೇಲೆ ಪೊಲೀಸ್ ದೂರು ನೀಡಲು ಮುಖ್ಯಾಧಿ ಕಾರಿಗಳಿಗೆ ಸೂಚಿಸಲಾಗುವದು. ನಾಗರಿಕರಿಗೆ ಸಮರ್ಪಕ ಸೇವೆ ಒದಗಿಸುವ ನಿಟ್ಟಿನಲ್ಲಿ ಪಂಚಾಯಿತಿ ಸಿಬ್ಬಂದಿಗಳು ಕೆಲಸ ನಿರ್ವಹಿಸುವಂತೆ ಎಚ್ಚರವಹಿಸಬೇಕೆಂದು ಸ್ಥಳದಲ್ಲಿದ್ದ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಅವರಿಗೆ ನಿರ್ದೇಶನ ನೀಡಿದರು.