ಮಡಿಕೇರಿ, ಮಾ. 17: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕ, ಕೊಡಗು ದಂತ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ, ಕೊಡಗು ಜಿಲ್ಲಾ ಸ್ವೀಪ್ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯಿಂದ ಕುಟ್ಟದವರೆಗೆ ಬೃಹತ್ ಮತದಾನ ಜಾಗೃತಿ ಅಭಿಯಾನ ನಡೆಯಿತು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ, ಮತದಾನದ ಮಹತ್ವ ದೇಶದ ಆಡಳಿತಕ್ಕೆ ಯಾವ ರೀತಿ ಕೊಡುಗೆ ನೀಡಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅನ್ನುವದು ಬಹುಮುಖ್ಯವಾದ ಅಂಶ ಎಂದು ನೆನಪಿಸಿದರು. ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಶಾಲಾ-ಕಾಲೇಜು, ಸಂಘ-ಸಂಸ್ಥೆಗಳ ಮೂಲಕ ಪರಿಣಾಮಕಾರಿಯಾದ ರೀತಿಯಲ್ಲಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಅಭಿಯಾನದಲ್ಲಿ ಕಾವೇರಿ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಅಕ್ರಮ್, ದಂತ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಅಧಿಕಾರಿ ಡಾ. ಆನಂದ್, ಎನ್.ಸಿ.ಸಿ. ಘಟಕದ 25 ಕೆಡೆಟ್‍ಗಳು ಮತ್ತು ದಂತ ಮಹಾವಿದ್ಯಾಲಯದ 25 ಎನ್.ಎಸ್.ಎಸ್. ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಸ್ವೀಪ್ ಸಮಿತಿಯ ಸಹಾಯಕ ಅಧಿಕಾರಿ ನವೀನ್ ಹಾಜರಿದ್ದರು.