*ಸಿದ್ದಾಪುರ, ಮಾ. 15: ವಿಶೇಷಚೇತನರಿಗೆ ಸರಕಾರದಿಂದ ಲಭ್ಯವಾಗುವ ಎಲ್ಲಾ ಸೌಲಭ್ಯಗಳನ್ನು ಹಾಗೂ ಸ್ವಸಹಾಯ ಸಂಘಕ್ಕೆ ಸಾಲ ಸೌಲಭ್ಯವನ್ನು ಒದಗಿಸಿಕೊಡುವದಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟಿನ ಸಹಾಯಕ ನಿರ್ದೇಶಕ ಬೋರಪ್ಪ ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಹಾಗೂ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ವಾಲ್ನೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷಚೇತನರಿಗೆ ಗುರುತಿನ ಚೀಟಿ ವಿತರಿಸಿ ವಿಶೇಷಚೇತನರ ಸ್ವಸಹಾಯ ಸಂಘವನ್ನು ಸ್ವಂತಃ ವಿಕಲಚೇತನರಾದ ತುಂಗಾಮಣಿ, ಅಜೀಜ್, ಬಾಲಕೃಷ್ಣ ಹಾಗೂ ಶೋಭನ್ ಅವರು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಪಿಡಿಓ ಅನಿಲ್ ಮಾತನಾಡಿ, ಈಗಾಗಲೇ ಗ್ರಾ.ಪಂ.ನಿಂದ ವಿಶೇಷಚೇತನರಿಗೆ ಶೇ. 5ರಷ್ಟು ಅನುದಾನ ಮೀಸಲಿರಿಸಿದೆ. ವೀಲ್‍ಚೇರ್ ಜೌಷಧಿಗಳನ್ನು ವಿಶೇಷಚೇತನರಿಗೆ ನೀಡಿದ್ದು ಮನೆ ಆದ್ಯತೆ ಮೇರೆ ನಿರ್ಮಿಸಿಕೊಡಲಿದ್ದೇವೆ ಎಂದೂ ಹೇಳಿದರು.

ಗ್ರಾ.ಪಂ. ಅಧ್ಯಕ್ಷೆ ಸರಕಾರದ ಸೌಲಭ್ಯ ಪಡೆದ ವಿಶೇಷಚೇತನರು ಅರ್ಥಿಕವಾಗಿ ಮಂದೆ ಬರಬೇಕೆಂದರು. ಗ್ರಾ.ಪಂ. ಸದಸ್ಯ ಭುವನೇಂದ್ರ ಯಾರ ಮನೆಯಲ್ಲಿ ವಿಶೇಷಚೇತನರು ಇದ್ದಾರೆ ಅವರಿಗೆ ಭಾರ ಎನ್ನುವ ಭಾವನೆ ಇರಬಾರದು. ಸರಕಾರ ಅವರಿಗೆ ಎಲ್ಲಾ ಸೌಲಭ್ಯ ಒದಗಿಸುತ್ತಿದ್ದು ಮುಖ್ಯ ವಾಹಿನಿಗೆ ಸೇರುತ್ತಿರುವದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ, ಕಮಲಮ್ಮ ಉಪಸ್ಥಿತರಿದ್ದರು. ವಿವೇಕಾನಂದ ಯೂತ್ ಮೂವ್‍ಮೆಂಟಿನ ಮೇಲ್ವಿಚಾರಕಿ ಸುನಿತಾ ಸ್ವಾಗತಿಸಿ, ವಂದಿಸಿದರು.