ಶನಿವಾರಸಂತೆ, ಮಾ. 15: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ವಿವಿಧ ಮಳಿಗೆಗಳ ಹರಾಜು ಪ್ರಕ್ರಿಯೆ ಬಿಡ್ಡುದಾರರ ಸಮ್ಮುಖದಲ್ಲಿ ಅಧ್ಯಕ್ಷೆ ಕೆ.ಎಸ್. ರೋಹಿಣಿ ಸುಬ್ರಮಣ್ಯಚಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಳೆದ ಸಾಲಿನಲ್ಲಿ 2 ಹಸಿಮೀನು ಮಾರುಕಟ್ಟೆ ಬಹಿರಂಗ ಹರಾಜಿನಲ್ಲಿ ರೂ. 5,67,000 ಲಕ್ಷಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. 2,01,800 ಲಕ್ಷಕ್ಕೆ ಹರಾಜಾಗಿದ್ದು, ಪಂಚಾಯಿತಿಗೆ ರೂ. 3,65,200 ಲಕ್ಷ ಅಧಿಕ ನಷ್ಟ ಉಂಟಾಗಿದೆ.
ಕಳೆದ ಸಾಲಿನಲ್ಲಿ ಬಸ್ ನಿಲ್ದಾಣ ಶುಲ್ಕ ಬಹಿರಂಗ ಹರಾಜಿನಲ್ಲಿ ರೂ. 20,200ಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. 28,000 ಸಾವಿರಕ್ಕೆ ಹರಾಜಾಗಿದ್ದು, ಪಂಚಾಯಿತಿಗೆ ರೂ. 7,800 ಸಾವಿರ ಅಧಿಕ ಲಾಭ ಬಂದಿದೆ.
ಸಂತೆ ಮಾರುಕಟ್ಟೆ ಸುಂಕ, ಹಂದಿ ಮಾಂಸ ಮಳಿಗೆ, ಕುರಿ ಮಾಂಸ ಮಳಿಗೆಗಳ ಹರಾಜನ್ನು ಕಾರಣಾಂತರದಿಂದ ಮುಂದೂಡಲಾಗಿದೆ. ಸದಸ್ಯ ಕೆ.ಆರ್. ಚಂದ್ರಶೇಖರ್ ಮಾತನಾಡಿ, ಬಿಡ್ಡುದಾರರು ಪಂಚಾಯಿತಿ ನಿಗದಿಪಡಿಸಿದ ಮೊತ್ತಕ್ಕಿಂತ ಕಡಿಮೆ ಬಿಡ್ಡಿಗೆ ಕೂಗಿದ್ದರಿಂದ ಹಾಗೂ ಸಭೆಯಲ್ಲಿ ಕಡಿಮೆ ಬಿಡ್ಡುದಾರರು ಭಾಗವಹಿಸಿದುದ್ದರಿಂದ ಬಾಕಿ ಉಳಿದ ಹರಾಜು ಪ್ರಕ್ರಿಯೆಗಳನ್ನು ಮರು ಹರಾಜು ನಡೆಸಲು ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ತೀರ್ಮಾನಿಸಿರುವದಾಗಿ ಹೇಳಿದರು.
ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಡಿ.ಬಿ. ವಿಜಯ್, ಸದಸ್ಯರುಗಳಾದ ಅನುಸೂಯ, ವೀಣಾ, ಹೇಮಲತಾ, ಲಕ್ಷ್ಮಿ, ಹೆಚ್.ಕೆ. ಗೀತಾ, ಡಿ.ಸಿ. ಹೊನ್ನಮ್ಮ, ಡಿ.ಕೆ. ಗೌರಮ್ಮ, ಎಸ್.ಎಸ್. ಮಹೇಶ್, ದೌಲತ್ ಹುಸೇನ್, ಕೆ.ಆರ್. ಚಂದ್ರಶೇಖರ್, ಎಂ.ಎಸ್. ರಿಯಾಜ್ ಪಾಷ, ಕೆ.ಬಿ. ದಿವಾಕರ, ಕೆ.ಎನ್. ಚನ್ನಕೇಶವ, ಲೆಕ್ಕ ಸಹಾಯಕ ದೀಪು ಉಪಸ್ಥಿತರಿದ್ದರು. ಸಹಾಯಕ ಠಾಣಾಧಿಕಾರಿ ಚೆಲುವರಾಜ್ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಕೆ. ಮುರುಳಿಕೃಷ್ಣ ಸ್ವಾಗತಿಸಿ, ಚಂದ್ರಶೇಖರ್ ವಂದಿಸಿದರು.