ಶನಿವಾರಸಂತೆ, ಮಾ. 15: ವರ್ಷಗಳ ಹಿಂದೆ ವಿಶ್ವ ಬ್ಯಾಂಕ್ ನೆರವಿನಿಂದ ರೂ. 1.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರ ನಿರ್ಮಾಣ ಗೊಂಡಿದ್ದರೂ ಇಲ್ಲಿ ಸಮಸ್ಯೆಗಳು ಮಾತ್ರ ಇನ್ನೂ ಬಗೆಹರಿದಿಲ್ಲ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಸಮಸ್ಯೆ ಗಂಭೀರವಾಗಿ ಪರಿಣಮಿಸಿದೆ. ಹಲವಾರು ವರ್ಷಗಳಿಂದ ಸಮಸ್ಯೆ ಪರಿಹಾರಕ್ಕೆ ಭಗೀರಥ ಪ್ರಯತ್ನ ನಡೆದಿದ್ದು, ಗ್ರಾಮ ಪಂಚಾಯಿತಿ, ಗ್ರಾಮಸಭೆ, ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ್ದರೂ ಏನೇನೂ ಪ್ರಯೋಜನವಾಗಿಲ್ಲ.
ತಜ್ಞ ವೈದ್ಯರು ಕರ್ತವ್ಯ ನಿರ್ವಹಿಸಬೇಕಾಗಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ಏಕೈಕ ವೈದ್ಯರು (ಕೆಲವು ದಿನಗಳ ಹಿಂದೆ ಇನ್ನೊರ್ವ ವೈದ್ಯರ ಆಗಮನವಾಗಿದೆ) ಒಬ್ಬ ದಂತ ವೈದ್ಯ ಹಾಗೂ ಕೆಲ ಆರೋಗ್ಯ ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶನಿವಾರಸಂತೆ ಪಟ್ಟಣ ಹೋಬಳಿ ಕೇಂದ್ರವಾಗಿದ್ದು, ಸುಮಾರು 15 ಸಾವಿರ ಜನಸಂಖ್ಯೆಯಿದೆ. ಸುತ್ತಮುತ್ತ ಕಾಫಿ ತೋಟಗಳೇ ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರುಗಳೇ ಇರುವರು. ಹೋಬಳಿ ಸೇರಿದಂತೆ ನೆರೆಯ ಹಾಸನ ಗಡಿಭಾಗದಿಂದಲೂ ಪ್ರತಿದಿನ 125ಕ್ಕೂ ಅಧಿಕ ಹೊರ ರೋಗಿಗಳು ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ವಿವಿಧ ಕಾಯಿಲೆಗಳಿಂದ ಬರುವ ರೋಗಿಗಳ ಸಂಖ್ಯೆಗೆ ತಕ್ಕಂತೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ದಾದಿಯರ ಸಂಖ್ಯೆ ಕಡಿಮೆಯಿದೆ. ಒಬ್ಬ ಸರ್ಜನ್, ಒಬ್ಬ ಅನಸ್ತೇಷಿಯ ವೈದ್ಯರು, ಮಹಿಳಾ ವೈದ್ಯರೂ ಸೇರಿದಂತೆ ಐದು ಮಂದಿ ವೈದ್ಯರು ಹಾಗೂ ಏಳು ಮಂದಿ ಆರೋಗ್ಯ ಸಹಾಯಕಿಯರ ಅವಶ್ಯಕತೆ ಈ ಆಸ್ಪತ್ರೆಗಿದೆ. ಪ್ರಸ್ತುತ ಡಾ. ಗಿರೀಶ್ ಏಕೈಕ ವೈದ್ಯಾಧಿಕಾರಿಯಾಗಿ ಎಲ್ಲಾ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಇತ್ತೀಚೆಗೆ ಗುತ್ತಿಗೆ ಆಧಾರದಲ್ಲಿ ಎಂಬಿಬಿಎಸ್ ವೈದ್ಯರೊಬ್ಬರನ್ನು ನೇಮಿಸಲಾಗಿದೆ. ಮತ್ತಿಬ್ಬರು ಡಿ ಗ್ರೂಪ್ ನೌಕರರು, ಔಷಧಿ ವಿತರಕರ ಅಗತ್ಯವಿದೆ. ಆಪರೇಷನ್ ಥಿಯೇಟರ್‍ಗೆ ಸಾಮಗ್ರಿಗಳು ಬೇಕಾಗಿವೆ. ಮುಖ್ಯವಾಗಿ ವೈದ್ಯರ ವಸತಿ ಗೃಹವೂ ದುರಸ್ತಿಯಾಗಬೇಕಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ಮಾಡಲು ತಜ್ಞ ವೈದ್ಯರು ಸಿದ್ಧರಿಲ್ಲದ ಕಾರಣ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಎಂಬಂತಾಗಿದೆ. ಆರೋಗ್ಯ ಕೇಂದ್ರದ ಸುರಕ್ಷಾ ಸಮಿತಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸ್ಪಂದಿಸ ಬೇಕಿದೆ. ಇನ್ನೊಂದು ವಿಶೇಷತೆ ಏನೆಂದರೆ 21 ವರ್ಷಗಳ ಹಿಂದೆ ವಿಶ್ವ ಬ್ಯಾಂಕ್ ನೆರವಿನಿಂದ ರೂ. 1.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸುಸಜ್ಜಿತ ಆರೋಗ್ಯ ಕೇಂದ್ರದ ಕಟ್ಟಡದ ಉದ್ಘಾಟನೆಯ ಕಾರ್ಯಕ್ರಮವೇ ನಡೆದೇ ಇಲ್ಲ ಎಂದು ನಾಗರಿಕರು ಹೇಳುತ್ತಾರೆ.