ಗುಡ್ಡೆಹೊಸೂರು, ಮಾ. 15: ಗುಡ್ಡೆಹೊಸುರು ಸುತ್ತಮುತ್ತ ಮತ್ತು ಜಿಲ್ಲೆಯ ಎಲ್ಲಾ ಭಾಗದ ಸಾವಿರಾರು ಏಕರೆ ಪ್ರದೇಶದಲ್ಲಿ ಭತ್ತ ಬೆಳೆ ಬೆಳೆದ ರೈತರು ಬೆಂಬಲ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ರೈತರ ಬೆಳೆ ಕೈಸೇರುವ ಸಮಯ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಬೆಂಬಲ ಬೆಲೆ ಘೋಷಣೆಯಾಯಿತು. ಆದರೆ ಹಲವು ರೈತರು ಮುಕ್ತ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದ್ದ ಬೆಲೆಗೆ ಸ್ಥಳೀಯ ಅಕ್ಕಿ ಗಿರಣಿಗಳಿಗೆ ತಾವು ಬೆಳೆದ ಭತ್ತವನ್ನು ಮಾರಾಟ ಮಾಡಿದರು. ಆ ಸಮಯದಲ್ಲಿ ಬೆಂಬಲ ಬೆಲೆ ಕ್ವಿಂಟಾಲ್ಗೆ 1850-1900 ಘೋಷಣೆಯಾಗಿತ್ತು. ಆದರೆ ಕೃಷಿ ಮಾರುಕಟ್ಟೆ ಸಂಸ್ಥೆಯವರು (ಆರ್.ಎಂ.ಸಿ) ಭತ್ತ ಖರೀದಿಸಲು ವಿಳಂಬ ಧೋರಣೆ ಮಾಡಿದ್ದು, ರೈತರು ಕಚೇರಿ ಮುಂದೆ ಪ್ರತಿನಿತ್ಯ ಕಾದು ಬರುವಂತಾಯಿತು
ಆದರೆ ಹಲವು ರೈತರು ಸ್ಥಳೀಯ ಅಕ್ಕಿ ಗಿರಣಿಗೆ ಕ್ವಿಂಟಾಲ್ಗೆ 1200 ರಿಂದ 1300ಕ್ಕೆ ವ್ಯಾಪಾರ ಮಾಡಿದರೆ ಅದೆಷ್ಟೋ ರೈತರು ತಾವು ಬೆಳೆದ ಭತ್ತವನ್ನು ಅಂಗಳದಲ್ಲಿಯೇ ದಾಸ್ತಾನು ಮಾಡಿ ಇಂದೋ-ನಾಳೆಯೋ ಖರೀದಿ ಮಾಡುವ ಸಂದೇಶ ಬರಬಹುದು ಎಂದು ಕಾದಿದ್ದರು. ಇಂದಿಗೂ ಅನೇಕ ಮಂದಿಯ ಭತ್ತ ತಮ್ಮ ಮನೆಯಲ್ಲಿಯೆ ಇದೇ.
2018 ರ ಡಿಸೆಂಬರ್ 26 ರಿಂದ ರೈತರಲ್ಲಿರುವ ಭತ್ತವನ್ನು ಖರೀದಿಸುವದಾಗಿ ಆರ್.ಎಂ.ಸಿ.ಯವರು ನೋಂದಣಿ ಮಾಡಿಕೊಂಡಿದ್ದಾರೆ. ಭತ್ತ ಬೆಳೆದ ರೈತರ ಆರ್.ಟಿ.ಸಿ. ಆದಾರ್ ಪತ್ರ, ಬ್ಯಾಂಕಿನ ಖಾತೆ ಸಂಖ್ಯೆ ಎಲ್ಲಾವನ್ನು ಪಡೆದು ಭತ್ತವನ್ನು ಪಡೆಯಲ್ಲಿಲ್ಲ. ಬದಲಿಗೆ ನೋಂದಣಿ ಪತ್ರವನ್ನು ಮಾತ್ರ ನೀಡಿರುತ್ತಾರೆ.
ರೈತರು ವಾರಕ್ಕೆ ನಾಲ್ಕು ಬಾರಿ ಖರೀದಿ ಕೇಂದ್ರಗಳಿಗೆ ತೆರಳಿ ವಿಚಾರಿಸುವದು ಮಾತ್ರ ನಿಲ್ಲಲಿಲ್ಲ. ಮಳೆಗಾಲದ ಬೆಳೆ ಮುಗಿದು ಬೇಸಿಗೆ ಕಾಲದ ಬೆಳೆ ಕೈಸೇರುವ ಸಮಯ ಬಂದಿದೆ. ಕೇವಲ ವೇದಿಕೆಗಳಲ್ಲಿ ಮಾತ್ರ ರೈತರ ಪರ ಎಂಬ ಘೋಷಣೆ ಮಾಡುವದು ಯಾವ ಕಾಟಾಚಾರಕ್ಕೆ ಎಂಬದು ಇದೀಗ ರೈತರ ಪ್ರಶ್ನೆಯಾಗಿದೆ. ಇಲ್ಲಿನ ನಿವಾಸಿ ಮಂಡೇಪಂಡ ಸೋಮಯ್ಯ (ರಘು) ಅವರು 31.12.2018 ರಲ್ಲಿ ತಮ್ಮ ಭತ್ತವನ್ನು ಖರೀದಿಸಲು ಆರ್.ಎಂ.ಸಿ.ಯಲ್ಲಿ ನೋಂದಾಯಿಸಿಕೊಂಡಿದ್ದರು. ಆದರೆ ಮಾರ್ಚ್ 15 ಆದರೂ ಸರಕಾರದವರು ಭತ್ತ ಪಡೆಯಲಿಲ್ಲ.
ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ಕೊಡಗಿನ ಸಾವಿರಾರು ಏಕರೆ ಪ್ರದೇಶದ ಗದ್ದೆಗಳು ಪಾಳು ಬಿದ್ದಿವೆ, ಅದಕ್ಕೆ ಮುಖ್ಯ ಕಾರಣ ನೀರು, ಕೆಲಸಗಾರರ ಸಮಸ್ಯೆ, ಆನೆ ಮತ್ತು ಕಾಡು ಪ್ರಾಣಿಗಳ ಹಾವಳಿ ಅಲ್ಲದೆ ಗದ್ದೆ ಕೆಲಸವೆಂದರೆ ಅಧಿಕ ಕೂಲಿ ಮುಂತಾದ ಕಾರಣಗಳಿಂದ ಹಲವು ಕಾರಣಗಳಿಂದ ಪರ್ಯಾಯ ಬೆಳೆ ಬೆಳೆಯುವದು ಮತ್ತು ತಮ್ಮ ಗದ್ದೆಗಳನ್ನು ಪಾಳುಬಿಡುವ ಪರಿಸ್ಥಿತಿ ಬಂದಿದೆ. ಇದಕ್ಕೆ ನೇರ ಹೊಣೆ ಸರಕಾರಗಳು. ಅಕ್ಕಿ ಗಿರಣಿ ಮಾಲೀಕರು ಲಾಭದ ಉದ್ದೇಶದಿಂದ ರೈತರಿಂದ ಭತ್ತ ಪಡೆದು ಇದೀಗ ಕೈ ಸುಟ್ಟುಕೊಂಡಿದ್ದಾರೆ. ಇತ್ತ ಹಲವು ರೈತರು ಭತ್ತವನ್ನು ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ. ಈ ವಿಭಾಗದ ರೈತರಾದ ಎಂ.ಆರ್. ಸೋಮಯ್ಯ, ಮನು, ಗಣೇಶ್, ಕುಶಾಲಪ್ಪ, ಪಟ್ಟಡ ಪ್ರಭಾಕರ್, ಬಿ.ಎಸ್. ಧನಪಾಲ್ ಮುಂತಾದವರು ದೂರಿದ್ದಾರೆ. ಭತ್ತ ಖರೀದಿ ಕೇಂದ್ರಗಳಿಗೆ ಸರಕಾರದ ಆದೇಶ ಬರದೆ ಖರೀದಿಸುವಂತಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ. ತಕ್ಷಣದಿಂದಲೇ ರೈತರ ಭತ್ತವನ್ನು ಸರಕಾರದವರು ಖರೀದಿಸುವಂತೆ ಈ ವಿಭಾಗದ ರೈತರು ಒತ್ತಾಯಿಸಿದ್ದಾರೆ.
- ಕುಡೆಕಲ್ಲು ಗಣೇಶ್.