ಮಡಿಕೇರಿ, ಮಾ. 16: 17ನೇಯ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮೂಲಕ ಈಗಾಗಲೇ ವೇಳಾಪಟ್ಟಿ ಸಹಿತ ಅಧಿಸೂಚನೆ ಪ್ರಕಟಗೊಂಡಿದೆ. ಇನ್ನೇನಿದ್ದರೂ ರಾಜಕೀಯ ಪಕ್ಷಗಳ ಕುತೂಹಲವಷ್ಟೇ ಬಾಕಿ ಇದೆ. ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ, ಯಾರು ಸಮರ್ಥರು, ಯಾವ ಪಕ್ಷದತ್ತ ಜನತೆಯ ಒಲವು ಇದೆ. ಮತದಾರರೆಷ್ಟು ಕಳೆದ ಚುನಾವಣೆಯಲ್ಲಿ ಸ್ಪರ್ಧಾಳುಗಳು ಪಡೆದಿದ್ದ ಮತಗಳ ಲೆಕ್ಕಾಚಾರಗಳೊಂದಿಗೆ ಕ್ಷೇತ್ರದ ಜನತೆ ತುಲನೆ ಮಾಡುತ್ತಿರುವ ಬೆಳವಣಿಗೆ ಒಂದೆಡೆಯಾದರೆ ರಾಜಕೀಯ ಪಕ್ಷಗಳು ತಮ್ಮದೇ ಆದ ರಾಜಕೀಯ ನಡೆಯತ್ತ ಹೆಜ್ಜೆಯಿರಿಸುತ್ತಿದೆ.
ಕೊಡಗು ಜಿಲ್ಲೆ ಸೇರಿದಂತಿರುವ ಕೊಡಗು - ಮೈಸೂರು ಲೋಕಸಭಾ ಕ್ಷೇತ್ರವು ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜಾತಿವಾರು ಮತಗಳು, ಇನ್ನಿತರ ರೀತಿಯಲ್ಲಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸಿಗಬಹುದಾದ ಮತಗಳ ಸಾಮ್ಯತೆಯನ್ನು ತುಲನೆ ಮಾಡುತ್ತಿರುವದರೊಂದಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಯತ್ನ ನಡೆಯುತ್ತಿದೆ.
ಹಾಲಿ ಸಂಸದರಾಗಿ ಬಿಜೆಪಿಯ ಪ್ರತಾಪ್ ಸಿಂಹ ಅವರಿದ್ದು, ಹಾಲಿ ಸಂಸದರಿಗೇ ಪಕ್ಷದ ಟಿಕೆಟ್ ಸಿಗುವದು ಖಚಿತವಾಗಿದೆ. ಆದರೆ ಈ ಕ್ಷೇತ್ರದಲ್ಲಿ ಈ ಬಾರಿ ಹೆಚ್ಚು ಕುತೂಹಲವಿರುವದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರಾಗಬಹು ದೆಂಬದಾಗಿದೆ. ಪಕ್ಷದ ಮೂಲಗಳ ಪ್ರಕಾರ ಸಿ.ಎಚ್. ವಿಜಯಶಂಕರ್ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಎಂದು ಹೇಳಲಾಗಿದ್ದರೂ ಇದುವೇ ಅಂತಿಮ ಎಂಬದು ಖಚಿತಪಟ್ಟಿಲ್ಲ. ಈ ಹಿಂದೆ ಸಿ.ಎಚ್. ವಿಜಯಶಂಕರ್ ಅವರು ಬಿಜೆಪಿಯಲ್ಲಿದ್ದು, ರಾಜ್ಯದಲ್ಲಿ ಸಚಿವರೂ ಆಗಿದ್ದರು. ಪ್ರಸ್ತುತ ಇವರು ಬಿಜೆಪಿ ತೊರೆದು ಕಾಂಗ್ರೆಸ್‍ನಲ್ಲಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದವರು ಇಂದು ಆ ಪಕ್ಷದಲ್ಲಿಲ್ಲ. ಬದಲಿಗೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಕೊಡಗು - ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್‍ನ ಹೆಚ್.ಡಿ. ದೇವೇಗೌಡ ಅವರೇ ಸ್ಪರ್ಧಿಸಲಿದ್ದಾರೆ ಎಂದು ಕೆಲ ದಿನಗಳ ಹಿಂದೆ ಮಾತು ಕೇಳಿಬಂದಿತ್ತಾದರೂ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕ್ಷೇತ್ರ ಹೊಂದಾಣಿಕೆಯಲ್ಲಿ ಈ ಕ್ಷೇತ್ರ ಕಾಂಗ್ರೆಸ್ ಪಕ್ಷದ ಪಾಲಾಗಿದೆ. ಇದನ್ನು ಉಳಿಸಿಕೊಳ್ಳುವಲ್ಲಿ ಪಕ್ಷದ ಪ್ರಮುಖರಾಗಿ ಗುರುತಿಸಲ್ಪ ಟ್ಟಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಕಾರಣರು ಎಂಬದರಲ್ಲಿ ಎರಡು ಮಾತಿಲ್ಲ.
ರಾಗಾ ಬರುವರೇ..?
ಈ ನಡುವೆ ಇದೇ ಸಿದ್ದರಾಮಯ್ಯ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರುಗಳು ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕರ್ನಾಟಕದಿಂದ ಸ್ಪರ್ಧಿಸುವಂತೆ ಆಹ್ವಾನಿಸಿರುವ ಬೆಳವಣಿಗೆ ನಡೆದಿದೆ. ಈ ಆಹ್ವಾನದ ಬಳಿಕ ಒಂದು ವೇಳೆ ರಾಹುಲ್ ಗಾಂಧಿ ಅವರನ್ನು ಕೊಡಗು - ಮೈಸೂರು ಕ್ಷೇತ್ರದಿಂದ ಸ್ಪರ್ಧೆಗಿಳಿಸುವ ಉದ್ದೇಶವಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದರಿಂದಾಗಿ ರಾಜಕೀಯ ಕೌತುಕದ ಮಾತುಗಳು ಅಲ್ಲಲ್ಲಿ ಕೇಳಿ ಬರಲಾರಂಭಿಸಿದೆ.
ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕೊಡಗು ಜಿಲ್ಲೆಯವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಬಹುತೇಕ ಇಲ್ಲ. ಇಲ್ಲಿ ಪ್ರಸ್ತುತ ಕೇಳಿ ಬರುತ್ತಿರುವ ಕೊಡಗು ಮೂಲದ ಸ್ಪರ್ಧಾಸಕ್ತಿಯ ಹೆಸರೆಂದರೆ ಬ್ರಿಜೇಶ್ ಕಾಳಪ್ಪ ಅವರದ್ದು ಮಾತ್ರ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಮಡಿಕೇರಿ ಕ್ಷೇತ್ರದಿಂದ ಇವರ ಹೆಸರು ಕೇಳಿಬಂದಿತ್ತಾದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ. ಆದರೂ ಬ್ರಿಜೇಶ್ ಕಾಳಪ್ಪ ಅವರು ತಮಗೆ ಟಿಕೆಟ್ ಬೇಕೆಂಬ ಒತ್ತಾಯಪೂರ್ವಕ ಬೇಡಿಕೆಯನ್ನು ಪಕ್ಷದ ಮುಂದಿರಿಸಿದ್ದಾರೆ. ಈ ಹಿಂದೆ ಸಿಎಂ, ಪೂಣಚ್ಚ ಅವರನ್ನು ಹೊರತುಪಡಿಸಿದರೆ ಕೊಡಗು - ಮಂಗಳೂರು ಕ್ಷೇತ್ರವಾಗಿದ್ದ ಅವಧಿ ಸೇರಿದಂತೆ ಇದೀಗ ಕೊಡಗು - ಮೈಸೂರು ಕ್ಷೇತ್ರವಾದ ಬಳಿಕವೂ ಯಾವದೇ ರಾಷ್ಟ್ರೀಯ ಪಕ್ಷಗಳು ಕೊಡಗು ಜಿಲ್ಲೆಯ ಅಭ್ಯರ್ಥಿಗೆ ಅವಕಾಶ ನೀಡಿಲ್ಲ ಎಂಬದು ಬ್ರಿಜೇಶ್ ಅವರ ಬೇಡಿಕೆಯಾಗಿದೆ. ಕಾಂಗ್ರೆಸ್ - ಬಿಜೆಪಿ ಹೊರತುಪಡಿಸಿದರೆ, ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದೆ. ರಾಷ್ಟ್ರೀಯ ಪಕ್ಷಗಳು ಈ ತನಕ ಅವಕಾಶ ಸಿಗದಿರುವ ಕೊಡಗಿನ ವ್ಯಕ್ತಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇವರದ್ದಾಗಿದೆ.
ಸಿದ್ದು ನಿಲುವೇ ಅಂತಿಮ
ಏನೇ ಆದರೂ ಈ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಿಲುವೇ ಅಂತಿಮ ಎಂಬದು ಪ್ರಸ್ತುತ ನಿರ್ವಿವಾದ. ಇದೀಗ ಸಿದ್ದರಾಮಯ್ಯ, ರಾಹುಲ್‍ಗಾಂಧಿ ಅವರನ್ನು ಕರ್ನಾಟಕದಿಂದ ಸ್ಪರ್ಧಿಸುವಂತೆ ಆಹ್ವಾನಿಸಿರುವದರ ಹಿಂದೆ ಈ ಕ್ಷೇತ್ರವನ್ನು ಅವರಿಗೆ ಒಲಿಯುವಂತೆ ಮಾಡುವ ರಾಜಕೀಯ ಲೆಕ್ಕಾಚಾರಗಳು ಇವೆಯೇ ಎಂಬದು ಕುತೂಹಲ ಮೂಡಿಸಿದೆ. ಇನ್ನು ಕೆಲವು ಮೂಲಗಳ ಪ್ರಕಾರ ರಾಹುಲ್ ಕರ್ನಾಟಕದಿಂದ ಸ್ಪರ್ಧಿಸಿದರೂ ದಕ್ಷಿಣ ಕರ್ನಾಟಕದತ್ತ ಆಸಕ್ತಿ ತೋರುವದಿಲ್ಲ. ಅವರು ಉತ್ತರ ಕರ್ನಾಟಕವನ್ನೇ ಆಯ್ಕೆ ಮಾಡುತ್ತಾರೆ ಎಂದೂ ಹೇಳಲಾಗುತ್ತಿದೆ. ತಾ. 19 ರಂದು ಕಾಂಗ್ರೆಸ್‍ನ ಅಭ್ಯರ್ಥಿಯ ಕುರಿತು ಪಕ್ಷದ ಉನ್ನತ ಮಟ್ಟದಿಂದ ಅಂತಿಮ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ. ಬಿಜೆಪಿಯಲ್ಲಿ ಆಂತರಿಕವಾಗಿ ಕೆಲವರ ಬೇಡಿಕೆಗಳಿದ್ದರೂ ಈ ಪಕ್ಷದ ಟಿಕೆಟ್ ಹಾಲಿ ಸಂಸದರಿಗೇ ಸಿಗುವದು ಬಹುತೇಕ ಖಚಿತ. -ಶಶಿ ಸೋಮಯ್ಯ