*ಗೋಣಿಕೊಪ್ಪಲು, ಮಾ. 16 : ಸೈನಿಕರ ಜಿಲ್ಲೆ ಕೊಡಗಿಗೆ ಮತ್ತೊಂದು ಹಿರಿಮೆ ದೊರೆತಿದೆ. ಜಿಲ್ಲೆಯ ಸೈನಿಕನ ವೀರತೆಗೆ ನಿರ್ಭೀತಿ ಹಾಗೂ ಅದಮ್ಯ ಇಚ್ಚಾಶಕ್ತಿಯುಳ್ಳ ಸಿಪಾಯಿ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸೇನೆಯಿಂದ ನೀಡುವ ಪ್ರತಿಷ್ಠಿತ ಶೌರ್ಯ ಚಕ್ರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.
ಪೊನ್ನಂಪೇಟೆಯ ಮಹಾತ್ಮಗಾಂಧಿ ನಗರದ ನಿವಾಸಿಗಳಾದ ನಾಗರಾಜ್ ಮತ್ತು ಲಕ್ಷ್ಮಿ ದಂಪತಿ ಪುತ್ರನಾಗಿರುವ ಎಚ್.ಎನ್.ಮಹೇಶ್ ಈ ಬಿರುದಿಗೆ ಭಾಜನರಾಗಿದ್ದಾರೆ. ಕಳೆದ 7 ವರ್ಷ ಗಳಿಂದ ಭಾರತೀಯ ಸೇನೆಯಲ್ಲಿ ಸಿಪಾಯಿ ಯಾಗಿ ಸೇವೆ ಸಲ್ಲಿಸುತ್ತಿರುವ ಮಹೇಶ್ ರಾಷ್ಟ್ರಪತಿ ರಮನಾಥ್ ಕೊವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರÀ ಸಮ್ಮುಖದಲ್ಲಿ ಈ ಬಿರುದನ್ನು ಪಡೆದುಕೊಳ್ಳುವ ಮೂಲಕ ಕೊಡಗಿನ ಹಿರಿಮೆ ಯನ್ನು ಎತ್ತಿ ಹಿಡಿದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಿಢೀರ್ ಧಾಳಿ ಸಂದರ್ಭ ಆ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಮಹೇಶ್ ಕೂಡಲೇ ಉಗ್ರರನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಿಳಿದರು. ತಾವೇ ಮುನ್ನುಗ್ಗಿ ಭಯೋತ್ಪಾದಕರ ಗುಂಡಿನ ಧಾಳಿ ಯನ್ನೂ ಲೆಕ್ಕಿಸದೇ ಭಯೋತ್ಪಾದಕರ ಮೇಲೆ ಸತತ ಗುಂಡಿನ ಮಳೆಗೆರೆಯುತ್ತಾ ಉಗ್ರರನ್ನು ಅಟ್ಟಾಡಿಸಿದ ಮಹೇಶ್ ಈ ಸಂದರ್ಭ ಓರ್ವ ಭಯೋತ್ಪಾದಕನನ್ನು ಬಲಿ ಪಡೆದರು. ಮತ್ತೋರ್ವ ಭಯೋತ್ಪಾದಕ ಗಂಭೀರ ಗಾಯಗೊಂಡು ಧಾಳಿಯಿಂದ ಹಿಮ್ಮೆಟ್ಟಿದ್ದ.ಮಹೇಶ್ ಮತ್ತು ಅವರ ನೇತೃತ್ವÀದ ತಂಡ ಯಾವ ಪರಿಯಾಗಿ ಭಯೋತ್ಪಾದಕರ ಮೇಲೆ ಗುಂಡಿನಮಳೆಗೆರೆಯಿತೆಂದರೆ, ಭಯೋತ್ಪಾದಕರು ಅಡಗು ತಾಣವೊಂದರಲ್ಲಿ ಆಶ್ರಯ ಪಡೆದು, ಅಲ್ಲಿಂದ ಹೊರಬರಲೇ ಪರದಾಡತೊಡಗಿದರು. ಮರುದಿನವೂ ಮಹೇಶ್ ಅಡಗುತಾಣದ ಮೇಲೆ ಧಾಳಿ ನಡೆಸಿ ಉಗ್ರರನ್ನು ಹಿಮ್ಮೆಟ್ಟಿಸಿದರಲ್ಲದೇ ಭಯೋತ್ಪಾದಕರಿಗೆ ಭಾರತದ ಸೈನ್ಯದ ಮೇಲೆ ಭಯ ಹುಟ್ಟುವಂತೆ ಮಾಡಿದರು.
ಭಯೋತ್ಪಾದಕರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಕೊಡಗಿನ ವೀರಯೋಧ ಒಂದಿಷ್ಟೂ ಅಂಜದೇ ಭಯೋತ್ಪಾದಕರ ಅಡಗುತಾಣದ ಮೇಲೆ ಧಾಳಿ ನಡೆಸಿ ಭಯೋತ್ಪಾದಕ ಕೃತ್ಯಕ್ಕೆ ಅವಕಾಶ ನೀಡಲಿಲ್ಲ.
ಮಹೇಶ್ ಅವರ ಈ ಶೌರ್ಯವನ್ನು ಶ್ಲಾಘಿಸಿ, ನಿರ್ಭೀತಿ ಹಾಗೂ ಅದಮ್ಯ ಇಚ್ಚಾಶಕ್ತಿಯುಳ್ಳ ಸಿಪಾಯಿ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಭಾರತೀಯ ಸೇನಾ ಪಡೆಯಿಂದ ನೀಡಲಾಗುವ ಪ್ರತಿಷ್ಠಿತ ಶೌರ್ಯ ಪ್ರಶಸ್ತಿಯನ್ನು ನವದೆಹಲಿಯಲ್ಲಿನ ರಾಷ್ಟ್ರ್ಪಪತಿ ಭವನದಲ್ಲಿ ಮಹೇಶ್ ಅವರಿಗೆ ಪ್ರದಾನ ಮಾಡಲಾಯಿತು. ಇದು ಕೊಡಗಿನ ಪಾಲಿಗೆ ಸೇನೆಯಿಂದ ದೊರಕಿದ ಹಿರಿಮೆಯಾಗಿದೆ. - ವರದಿ:ಎನ್.ಎನ್. ದಿನೇಶ್