ಕುಶಾಲನಗರ, ಮಾ. 14: ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆಗೊಂಡ ಕೆಎಂಬಿ ಗಣೇಶ್ ಅವರನ್ನು ಕುಶಾಲನಗರ ಸಮೀಪ ಕೊಪ್ಪ ಗೇಟ್ ಬಳಿ ಪಕ್ಷದ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು. ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ನಿಯೋಜನೆಗೊಂಡ ಬಳಿಕ ಜಿಲ್ಲೆಗೆ ಆಗಮಿಸಿದ ಅವರಿಗೆ ಕುಶಾಲನಗರ ಗಡಿಭಾಗದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಲ್ಲೆಯ ಎಲ್ಲೆಡೆಗಳಿಂದ ಆಗಮಿಸಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷದ ಪರ ಜಯಘೋಷದೊಂದಿಗೆ ಬರಮಾಡಿಕೊಂಡರು.
ಈ ಸಂದರ್ಭ ಮಾತನಾಡಿದ ಕೆಎಂಬಿ ಗಣೇಶ್, ಜಾತ್ಯತೀತ ಜನತಾದಳ ಯಾವದೇ ಸೀಮಿತ ಜಾತಿಗೆ ಮಾತ್ರ ಮೀಸಲಾಗಿಲ್ಲ. ಎಲ್ಲಾ ಜಾತಿ, ವರ್ಗದವರು ಒಂದೇ ಕುಟುಂಬದಂತೆ ಒಗ್ಗೂಡಿ ಪಕ್ಷದ ಹಿರಿಯ ನಾಯಕರ ಸಲಹೆಯೊಂದಿಗೆ ಸಂಘಟನೆಗಾಗಿ ದುಡಿಯಲಿದ್ದೇವೆ ಎಂದು ತಿಳಿಸಿದರು. ಜಿಲ್ಲೆಯ ಎಲ್ಲಾ ಸ್ತರದ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಮೂಲಕ ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವದಾಗಿ ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಸಂಕೇತ್ಪೂವಯ್ಯ ಮಾತನಾಡಿ, ಪಕ್ಷದಲ್ಲಿ ಯಾವದೇ ರೀತಿಯ ಗೊಂದಲ, ಭಿನ್ನಾಭಿಪ್ರಾಯ ಇಲ್ಲ. ಸಹಜವಾಗಿ ಜಿಲ್ಲಾಧ್ಯಕ್ಷರ ನೇಮಕಾತಿ ಸಂದರ್ಭ ಗೊಂದಲ ಉಂಟಾಗುವದು ಸಾಮಾನ್ಯವಾಗಿದ್ದು, ಅದು ಚರ್ಚೆ ಮೂಲಕ ನಿವಾರಣೆಯಾಗಲಿದೆ ಎಂದರಲ್ಲದೆ ಎಲ್ಲರೂ ಒಗ್ಗೂಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯ ಗೆಲವಿಗೆ ಶ್ರಮಿಸಲಿದ್ದೇವೆ ಎಂದರು.
(ಮೊದಲ ಪುಟದಿಂದ) ಈ ಸಂದರ್ಭ ಪಕ್ಷದ ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷ ಎಂ.ಎಂ. ಶರೀಫ್, ಜಂಟಿ ಸಂಘಟನಾ ಕಾರ್ಯದರ್ಶಿ ಸಿ.ವಿ. ನಾಗೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡೆನ್ನಿ ಭರೋಸ್, ಯುವ ಜನತಾದಳ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ, ವೀರಾಜಪೇಟೆ ಘಟಕದ ಅಧ್ಯಕ್ಷ ಮತಿನ್, ಮಡಿಕೇರಿ ಘಟಕದ ಇಬ್ರಾಹಿಂ, ವಿ.ಎ. ಅಬ್ದುಲಾ, ನಗರಸಭಾ ಸದಸ್ಯೆ ಲೀಲಾ ಶೇಷಮ್ಮ, ಜಿ,ಪಂ, ಮಾಜಿ ಸದಸ್ಯರಾದ ಆರ್.ಕೆ. ಚಂದ್ರು, ಭಾನುಮತಿ, ಪುಷ್ಪ ನಾಗರಾಜ್, ಪಕ್ಷದ ಜಿಲ್ಲಾ ವಕ್ತಾರ ಆದಿಲ್ ಪಾಷ, ವಿವಿಧ ಘಟಕಗಳ ಪ್ರಮುಖರಾದ ಎಂ.ಸಿ. ಬೆಳ್ಯಪ್ಪ, ಮಂಜುನಾಥ್, ರಫೀಕ್, ಕರೀಂ, ಕುಸುಮ್ ಕಾರ್ಯಪ್ಪ, ಜೆಸಿಂತ, ಭೋಜಪ್ಪ, ಎಂ.ಟಿ. ಕಾರ್ಯಪ್ಪ, ಸುಲೇಮಾನ್, ಲೋಕನಾಥ್ ಸೇರಿದಂತೆ ಕಾರ್ಯಕರ್ತರು, ಪ್ರಮುಖರು ಇದ್ದರು.