ಮಡಿಕೇರಿ, ಮಾ. 12: ಜಿಲ್ಲೆಯಲ್ಲಿ ಹಲವು ವಿಭಿನ್ನ ಹೋರಾಟಗಳು, ಜನಪರ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಚೆಟ್ಟಳ್ಳಿಯ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಸೋಮವಾರಪೇಟೆ ತಾ.ಪಂ. ಸದಸ್ಯರಾಗಿರುವ ಬಲ್ಲಾರಂಡ ಮಣಿ ಉತ್ತಪ್ಪ ಅವರು ನರೇಂದ್ರ ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾಗುವಂತೆ ಪ್ರಾರ್ಥಿಸಿ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ತಾ. 10ರ ಭಾನುವಾರ ಬೆಳಿಗ್ಗೆ ಉರುಳು ಸೇವೆ ನಡೆಸಿದರು.
ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯೊಂದಿಗೆ ದೇಗುಲದ ಸುತ್ತಲೂ ಅವರು ಉರುಳು ಸೇವೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಭಾರತದ ಸುಭದ್ರತೆ ಹಾಗೂ ಅಭಿವೃದ್ಧಿಯ ದೃಷ್ಟಿಯಲ್ಲಿ ಮೋದಿ ಅವರು ಮುಂದಿನ ಚುನಾವಣೆಯಲ್ಲೂ ಬಹುಮತದೊಂದಿಗೆ ಆರಿಸಿ ಬಂದು ದೇಶದ ಪ್ರಧಾನಮಂತ್ರಿಯಾಗಿ ನೇಮಕವಾಗಬೇಕಿದೆ ಎಂದು ಆಶಿಸಿದರು. ಇದಲ್ಲದೆ ಈ ಹಿಂದೆ ಜಿಲ್ಲೆಯ ಪತ್ರಕರ್ತರುಗಳಾದ ಶಶಿ ಸೋಮಯ್ಯ ಹಾಗೂ ಅಂಚೆಮನೆ ಸುಧಿ ಅವರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಇವರುಗಳ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿ ತಾವು ಹರಕೆ ಮಾಡಿಕೊಂಡಿದ್ದು, ಇಂದು ಇದನ್ನು ನೆರವೇರಿಸಿರುವದಾಗಿ ತಿಳಿಸಿದರು. ಇದೇ ವೇಳೆ ಇವರುಗಳ ಹೆಸರಲ್ಲಿ ವಿಶೇಷ ಪೂಜೆಯನ್ನೂ ಅವರು ಮಾಡಿದರು. ಈ ಸಂದರ್ಭ ಮಣಿ ಉತ್ತಪ್ಪ ಅವರೊಂದಿಗೆ ಅವರ ಹಿತೈಷಿಗಳು ಪಾಲ್ಗೊಂಡಿದ್ದರು.