ಮಡಿಕೆÉೀರಿ, ಮಾ. 12: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ಶಾಸಕರು, ಭಾಗಮಂಡಲ ವ್ಯಾಪ್ತಿಯಲ್ಲಿ ಟೆಂಡರ್ ಪ್ರಕ್ರಿಯೆಯೇ ನಡೆಯದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚುನಾವಣಾ ಪ್ರಚಾರದ ರಾಜಕಾರಣ ಮಾಡುತ್ತಿದ್ದಾರೆ ಎಂದು ಭಾಗಮಂಡಲ ವಲಯ ಕಾಂಗ್ರೆಸ್ ಸಮಿತಿ ಟೀಕಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸುನಿಲ್ ಪತ್ರಾವೋ, ಶಾಸಕ ಕೆ.ಜಿ. ಬೋಪಯ್ಯ ಅವರು ಚುನಾವಣೆ ಸಮೀಪಿಸುವಾಗ ಈ ಹಿಂದಿನ ಸರ್ಕಾರದ ಅವಧಿಯ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ತಾವೇ ಅಭಿವೃದ್ಧಿಯ ರೂವಾರಿ ಎಂದು ಪ್ರತಿಬಿಂಬಿಸಿ ಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾ ರೆಂದು ಆರೋಪಿಸಿದರು. ತಾ. 3 ರಂದು ಶಾಸಕರು ಭಾಗಮಂಡಲ ವಿಭಾಗದ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ಭೂಮಿ ಪೂಜೆ ಮಾಡಿದ್ದಾರೆ. ಈ ವಿಚಾರವನ್ನು ಗ್ರಾ.ಪಂ.ಗೆ ಕೂಡ ತಿಳಿಸದೆ ರಾಜಕೀಯ ಪ್ರದರ್ಶಿಸಿದ್ದಾರೆ. ಈ ಕಾಮಗಾರಿಗಳು ಹಿಂದಿನ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಕೊಡಗಿಗೆ ನೀಡಿದ್ದ ರೂ. 50 ಕೋಟಿಗಳ ವಿಶೇಷ ಪ್ಯಾಕೇಜ್‍ನಡಿ ನಡೆಯುತ್ತಿರುವ ಕಾಮಗಾರಿಗಳೆಂದು ತಿಳಿಸಿದರು.

ಭಾಗಮಂಡಲ ವ್ಯಾಪ್ತಿಯಲ್ಲಿ ನಡೆಯಬೇಕಾಗಿರುವ ರೂ. 10 ಲಕ್ಷ ವೆಚ್ಚದ ಅಚ್ಚೊಳಿ-ಬಾರಿಕೆ ರಸ್ತೆ, ರೂ. 10 ಲಕ್ಷ ವೆಚ್ಚದ ಚೇರಂಗಾಲ - ಕೋಡಿ ಮನೆ ರಸ್ತೆ, ರೂ. 10 ಲಕ್ಷ ವೆಚ್ಚದ ಕೋರಂಗಾಲ ಸುಬ್ರಹ್ಮಣ್ಯ ದೇವಸ್ಥಾನ ರಸ್ತೆ ಮತ್ತು ರೂ. 5 ಲಕ್ಷ ವೆಚ್ಚದ ಕೋರಂಗಾಲ-ಕೋಟಿ ಗದ್ದೆ ರಸ್ತೆಗಳಿಗೆ ಪ್ರಸ್ತುತ ಶಾಸಕರು ಭೂಮಿ ಪೂಜೆ ನಡೆಸಿದ್ದಾರೆ. ಆದರೆ, ಈ ಕಾಮಗಾರಿಗಳು ವಿಶೇಷ ಪ್ಯಾಕೇಜ್ ಕಾಮಗಾರಿಗಳಾಗಿದ್ದು, ಇದರಲ್ಲಿ ಕೆಲವಕ್ಕೆ ಇನ್ನೂ ಟೆಂಡರ್ ನಡೆಯಬೇಕಾಗಿದೆ. ಭಾಗಮಂಡಲದ ಮೇಲುಸೇತುವೆ ಯೋಜನೆ ಜಾರಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ಕೊಡುಗೆ ಏನು ಎಂದು ಸುನಿಲ್ ಪ್ರಶ್ನಿಸಿದರು. ಕಾಂಗ್ರೆಸ್ ಪ್ರಮುಖ ರವೀಂದ್ರ ಹೆಬ್ಬಾರ್ ಮಾತನಾಡಿ, ಮೇಲುಸೇತುವೆ ಯೋಜನೆ ಕಾಂಗ್ರೆಸ್‍ನ ಹಿರಿಯ ನಾಯಕರಾಗಿದ್ದ ದಿ. ಎಂ.ಎಂ. ನಾಣಯ್ಯ ಮತ್ತು ದಿ. ಬಿ.ಟಿ. ಪ್ರದೀಪ್, ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಮಿಟ್ಟು ಚಂಗಪ್ಪ ಅವರ ಕನಸಿನ ಯೋಜನೆ. ಅಂದು ಕೊಡಗಿನ ಉಸ್ತುವಾರಿ ಗಳಾಗಿದ್ದ ಕೆ.ಜೆ. ಜಾರ್ಜ್ ಅವರು ಮತ್ತು ನೀರಾವರಿ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಅವರು ಮಳೆÉಗಾಲದಲ್ಲಿ ನೆರೆ ಬಂದ ಸಂದರ್ಭ ಇಲ್ಲಿಯ ಅಗತ್ಯವನ್ನು ಮನಗಂಡು ಕಾವೇರಿ ನೀರಾವರಿ ನಿಗಮದಿಂದ ಈ ಯೋಜನೆಯನ್ನು ಮಂಜೂರು ಮಾಡಿಸಿದ್ದು, ಇದೀಗ ಕಾರ್ಯಗತವಾಗುತ್ತಿದೆ ಎಂದರು. ಗೋಷ್ಠಿಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್, ಪ್ರಧಾನ ಕಾರ್ಯದರ್ಶಿ ಹ್ಯಾರಿಸ್, ಭಾಗಮಂಡಲ ಕಾಂಗ್ರೆಸ್ ಪ್ರಮುಖರಾದ ಕುದುಪಜೆ ಪ್ರಕಾಶ್ ಹಾಗೂ ಹರ್ಷ ದೇವಂಗೋಡಿ ಉಪಸ್ಥಿತರಿದ್ದರು.