ಹೇಳಿದಂತೆ ಕೇಳದಿದ್ದರೆ ಜೀವನ ನರಕ...!
ನವದೆಹಲಿ, ಮಾ. 12: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಸಿಬಿಐ ಹೇಳಿದಂತೆ ಕೇಳದಿದ್ದರೆ ಜೈಲಿನೊಳಗೆ ಜೀವನ ನರಕ ಮಾಡುವದಾಗಿ ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ತಮಗೆ ಬೆದರಿಕೆ ಹಾಕಿದ್ದರು ಎಂದು ಈ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ದುಬೈನಲ್ಲಿ ತಮ್ಮನ್ನು ಭೇಟಿ ಮಾಡಿದ ರಾಕೇಶ್ ಅಸ್ತಾನ, ಏನು ನಡೆಯುತ್ತಿದೆಯೂ ಅದಕ್ಕೆ ಸಂಬಂಧಿಸಿದಂತೆ ಹೇಳಿದಂತೆ ಕೇಳದಿದ್ದರೆ ಜೀವನ ನರಕ ಮಾಡುವದಾಗಿ ಬೆದರಿಸಿದ್ದರು. ನನ್ನ ಮುಂದಿನ ಬಾಗಿಲು ಚೋಟಾ ರಾಜನ್, ಅನೇಕ ಜನರನ್ನು ಕೊಂದಿರುವ ಚೋಟಾ ರಾಜನ್ ಜೊತೆಗೆ ನಾನು ಯಾವ ಅಪರಾಧ ಮಾಡುತ್ತೇನೋ ಎಂಬದು ಗೊತ್ತಿಲ್ಲ ಎಂದಿದ್ದರು ಎಂದು ಮೈಕೆಲ್ ತಿಳಿಸಿದ್ದಾನೆ. 16 ರಿಂದ 17 ಕಾಶ್ಮೀರಿ ಪ್ರತ್ಯೇಕತವಾದಿ ಮುಖಂಡರೊಂದಿಗೆ ತಮ್ಮನ್ನು ಜೈಲಿನಲ್ಲಿಡಲಾಗಿತ್ತು ಎಂದು ಆತ ನ್ಯಾಯಾಲಯದಲ್ಲಿ ಹೇಳಿದ್ದಾನೆ. ತಿಹಾರ್ ಜೈಲಿನಲ್ಲಿ ಇಡಿ ವಿಚಾರಣೆಗಾಗಿ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವಕಾಶ ಕಲ್ಪಿಸಿದ ನಂತರ ಮೈಕೆಲ್ ಈ ರೀತಿಯ ಹೇಳಿಕೆ ನೀಡಿದ್ದಾನೆ.
ಮೋದಿ ತವರಲ್ಲಿ ಪ್ರಿಯಾಂಕ ರ್ಯಾಲಿ
ಗಾಂಧಿನಗರ, ಮಾ. 12: ಪ್ರಧಾನಿ ನರೇಂದ್ರ ಮೋದಿ ಅವರ ತವರಿನಲ್ಲೇ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ನಿಮ್ಮ ಮತವೇ ನಿಮ್ಮ ಅಸ್ತ್ರವಾಗಿದ್ದು, ಅದನ್ನು ಎಚ್ಚರಿಕೆಯಿಂದ ಬಳಸಿ ಎಂದು ಹೇಳಿದ್ದಾರೆ. ಇಂದು ಗಾಂಧಿನಗರದಲ್ಲಿ ಕಾಂಗ್ರೆಸ್ ಜನ ಸಂಕಲ್ಪ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ನಿಮ್ಮ ಮತವೇ ನಿಮ್ಮ ಅಸ್ತ್ರ. ಆಲೋಚನೆ ಮಾಡಿ, ನಿರ್ಧರಿಸಿ ಮತ ಚಲಾಯಿಸಿ ಎಂದು ಕರೆ ನೀಡಿದರು. ಈ ದೇಶ ಪ್ರೀತಿ, ಸಾಮರಸ್ಯ ಮತ್ತು ಸಹೋದರತ್ವದ ಅಡಿಪಾಯಗಳ ಮೇಲೆ ನಿರ್ಮಾಣವಾಗಿದೆ. ಆದರೆ ಪ್ರಸ್ತುತ ದೇಶದಲ್ಲಿ ಏನಾಗುತ್ತಿದೆ ಎಂಬದು ದುಃಖದ ಸಂಗತಿ. ನಿಮ್ಮ ಮುಂದೆ ದೊಡ್ಡ ಮಾತುಗಳನ್ನು ಆಡುತ್ತಾರೆ. ಭರವಸೆ ನೀಡಿದಂತೆ ಉದ್ಯೋಗ ಎಲ್ಲಿ? ಮಾತು ಕೊಟ್ಟಂತೆ 15 ಲಕ್ಷ ರೂಪಾಯಿ ಎಲ್ಲಿ? ಮಹಿಳೆಯರ ಸುರಕ್ಷತೆ ಎಲ್ಲಿ? ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರು.
ಕಾಂಗ್ರೆಸ್-ಬಿಎಸ್ಪಿ ಮೈತ್ರಿ ಇಲ್ಲ
ನವದೆಹಲಿ, ಮಾ. 12: ಮೋದಿ ವಿರುದ್ಧ ಮಹಾಘಟಬಂಧನ್ನ್ನು ರಚಿಸಲು ಹರಸಾಹಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಭಾರೀ ಹಿನ್ನಡೆಯುಂಟಾಗಿದೆ. ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್ಗೆ ಬಿಎಸ್ಪಿ ನಾಯಕಿ ಮಾಯಾವತಿ ಮತ್ತೊಂದು ಶಾಕ್ ನೀಡಿದ್ದಾರೆ. ಏ. 11 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಯಾವದೇ ರಾಜ್ಯಗಳಲ್ಲೂ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವದಿಲ್ಲ ಎಂದು ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವದರ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಮಾಯಾವತಿ, ಯಾವದೇ ರಾಜ್ಯಗಳಲ್ಲೂ ಕಾಂಗ್ರೆಸ್ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವದಿಲ್ಲ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಪರಸ್ಪರ ಗೌರವದಿಂದ, ಪ್ರಮಾಣಿಕ ಉದ್ದೇಶದಿಂದ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕೆ ಎಸ್ಪಿ-ಬಿಎಸ್ಪಿ ಮೈತ್ರಿಯೇ ಸಾಕು ಎಂದು ಮಾಯಾವತಿ ಹೇಳಿದ್ದಾರೆ.
ಕಾಶ್ಮೀರಿ ಉದ್ಯಮಿಗಳ ಆಸ್ತಿ ವಶ
ನವದೆಹಲಿ, ಮಾ. 12: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವವರ ವಿರುದ್ಧ ಪ್ರಮುಖ ಕಾರ್ಯಾಚರಣೆ ನಡೆಸಿರುವ ಜಾರಿ ನಿರ್ದೇಶನಾಲಯ ಕಾಶ್ಮೀರಿ ಉದ್ಯಮಿಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಾರಂಭಿಸಿದೆ. ಶ್ರೀನಗರ ಮೂಲದ ಉದ್ಯಮಿ ಜಹೂರ್ ಅಹ್ಮದ್ ಶಾ ವಟಾಲಿಗೆ ಸೇರಿದ ಬಂಗಲೆ, ಫಾರ್ಮ್ ಹೌಸ್ ಸೇರಿದಂತೆ 25 ಆಸ್ತಿಗಳನ್ನು ಜಮ್ಮು-ಕಾಶ್ಮೀರ ಹಾಗೂ ದೇಶದ ಇತರ ಭಾಗಗಳಲ್ಲಿ ವಶಪಡಿಸಿಕೊಳ್ಳುವದಕ್ಕೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಈ ಆಸ್ತಿಗಳನ್ನು ಖರೀದಿಸುವದಕ್ಕೆ ಬಹುಪಾಲು ಹಣದ ಮೂಲ ಪಾಕಿಸ್ತಾನದ ಉಗ್ರ ಹಫೀಸ್ ಸಯೀದ್, ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಶಂಕೆ ವ್ಯಕ್ತಪಡಿಸಿದೆ. ಉಗ್ರ ಹಫೀಜ್ ಸಯೀದ್ನ ಆರ್ಥಿಕತೆಯನ್ನು ಭಾರತದಲ್ಲಿ ನಿರ್ವಹಣೆ ಮಾಡುತ್ತಿರುವ ಆರೋಪದಡಿ ಉದ್ಯಮಿ ಜಹೂರ್ನ ವಿಚಾರಣೆ ನಡೆಸಲಾಗುತ್ತಿದೆ.
ಪಿಯುಸಿ ಪರೀಕ್ಷಾ ಮೌಲ್ಯಮಾಪನಕ್ಕೆ ವಿಘ್ನ
ಬೆಂಗಳೂರು, ಮಾ. 12: ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಈ ಬಾರಿಯೂ ವಿಘ್ನ ಎದುರಾಗಲಿದೆ. ತಾ. 23 ರಿಂದ ಆರಂಭಗೊಳ್ಳಲಿರುವ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಲು ಪದವಿಪೂರ್ವ ಉಪನ್ಯಾಸಕರು ನಿರ್ಧರಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರು ಸಾಮೂಹಿಕವಾಗಿ ಮೌಲ್ಯಮಾಪನ ಬಹಿಷ್ಕರಿಸಿ, ತಾ. 21 ರಿಂದ ನಗರದ ಸ್ವತಂತ್ರ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಈ ಸಂಬಂಧ ಇಂದು ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 1971ರ ಮಾದರಿಯಲ್ಲಿ ಉಪನ್ಯಾಸಕರಿಗೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಜೆ ನೀಡಬೇಕು. ಪಿಯುಸಿ ಕಾಲೇಜುಗಳನ್ನು ಮೇ 2 ರ ಬದಲಿಗೆ ಮೇ 28 ರಂದು ಪ್ರಾರಂಭಿಸಬೇಕು. ಪ್ರತಿ ವರ್ಷ ಉಪನ್ಯಾಸಕರಿಗೆ 30 ಗಳಿಕೆ ರಜೆ, 20 ಅರ್ಧ ವೇತನ ರಜೆ ಹಾಗೂ ತಿಂಗಳ ಎರಡನೇ ಶನಿವಾರಗಳಂದು ರಜೆ ನೀಡಬೇಕು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಡ್ಡಾಯಗೊಳಿಸದೆ, ಐಚ್ಛಿಕವಾಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸಂಘ ಮುಂದಿಟ್ಟಿದೆ.
ಮಾಜಿ ಸಚಿವ ಎ. ಮಂಜು ಬಿಜೆಪಿಗೆ...?
ಬೆಂಗಳೂರು, ಮಾ. 12: ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸುಳಿವು ನೀಡಿದ್ದು, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೋಕಸಭೆಗೆ ಚುನಾವಣೆ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಮಾತಾನಾಡಿರುವದು ನಿಜ. ರಾಜಕೀಯ ನಿಂತ ನೀರಲ್ಲ ಕ್ಷೇತ್ರದ ಜನರ ರಕ್ಷಣೆಗೋಸ್ಕರ ಮತದಾರರ ಅಭಿಪ್ರಾಯದಂತೆ ತಾವು ತೀರ್ಮಾನ ಕೈಗೊಳ್ಳುವದಾಗಿ ಎ. ಮಂಜು ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿರುವದು ಸತ್ಯ. ಅಂತೆಯೇ ಮೈಸೂರಿನಲ್ಲಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಗುರುವಾರ ಅರಕಲಗೂಡಿನಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದಿದ್ದೇನೆ. ಕಾರ್ಯಕರ್ತರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿದ್ದು, ಒಂದೆರಡು ದಿನಗಳಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸುವದಾಗಿ ಹೇಳಿದ್ದಾರೆ.
ಶಸ್ತ್ರಾಸ್ತ್ರ ಖರೀದಿ : ಭಾರತಕ್ಕೆ 2ನೇ ಸ್ಥಾನ
ನವದೆಹಲಿ, ಮಾ. 12: ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಮುಂಚೂಣಿ ರಾಷ್ಟ್ರವಾಗಿದ್ದ ಭಾರತ ಇದೀಗ 2ನೇ ಸ್ಥಾನಕ್ಕೆ ಕುಸಿದಿದ್ದು, ಸೌದಿ ಅರೇಬಿಯಾ ಇದೀಗ ಅಗ್ರ ಸ್ಥಾನಕ್ಕೇರಿದೆ. ಸ್ಟಾಕ್ ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ ಸ್ಟಿಟ್ಯೂಟ್ (ಎಸ್ಐಪಿಆರ್ಐ) ವರದಿಯಲ್ಲಿ ಈ ಅಂಶ ತಿಳಿದು ಬಂದಿದ್ದು, 2014 ರಿಂದ 18ರಲ್ಲಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಜಾಗತಿಕ ಒಟ್ಟು ಶಸ್ತ್ರಾಸ್ತ್ರ ಖರೀದಿಯಲ್ಲಿ ಭಾರತ ಶೇ. 9.5 ರಷ್ಟು ಪಾಲು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು 2009 ರಿಂದ 2013 ಮತ್ತು 2014 ರಿಂದ 18ರ ನಡುವೆ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ. 24 ರಷ್ಟು ಇಳಿಕೆಯಾಗಿದೆ. ಈ ವರದಿಯ ಅನ್ವಯ ರಷ್ಯಾದಿಂದ 2001ರಲ್ಲಿ ಯುದ್ಧ ವಿಮಾನಗಳಿಗೆ ಹಾಗೂ 2008ರಲ್ಲಿ ಫ್ರಾನ್ಸ್ನಿಂದ ಸಬ್ ಮರೀನ್ಗಳ ಖರೀದಿಗೆ ಇಡಲಾದ ಬೇಡಿಕೆ ಪೂರೈಕೆಯಾಗುವಲ್ಲಿ ನಿಧಾನವಾಗಿರುವ ಕಾರಣದಿಂದಲೂ ಆಮದು ಪ್ರಮಾಣ ಕಡಿತಗೊಂಡಿದೆ. ಅಂತೆಯೇ ಮೇಕ್ ಇನ್ ಇಂಡಿಯಾ ಎಫೆಕ್ಟ್ ಮತ್ತು ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಬಳಕೆಗೆ ಮುಂದಾಗಿರುವ ಭಾರತ ಸರ್ಕಾರದ ನಡೆ ಕೂಡ ಈ ಪ್ರಮಾಣದಲ್ಲಿ ಅಲ್ಪ ಪ್ರಮಾಣದ ಪ್ರಭಾವ ಬೀರಿದೆ.