ಮಡಿಕೇರಿ, ಮಾ. 13: ಪೆರಾಜೆ ವಜ್ರಪುರ ಪರಿಸರದಲ್ಲಿ ವ್ಯಾಪಕ ಅಕ್ರಮ ವಜ್ರಗಣಿಗಾರಿಕೆ ನಡೆಯುತ್ತಿದ್ದು, ಕಂದಾಯ, ಅರಣ್ಯ ಇಲಾಖೆಯ ನೇರ ಭಾಗಿಯಾದ ಆರೋಪಗಳು ಕೇಳಿಬರುತ್ತಿವೆ. ಮುಂದೆ ಕೊಡಗಿನಲ್ಲಿ ಪ್ರಕೃತಿ ದುರಂತ ಸಂಭವಿಸಿದಂತೆ ಇಲ್ಲಿಯೂ ಅನಾಹುತ ಸಂಭವಿಸ ಬಹುದೆಂಬ ಆತಂಕದಲ್ಲಿ ಸ್ಥಳೀಯರಿದ್ದಾರೆ.ದ.ಕ. ಮತ್ತು ಕೊಡಗು ಗಡಿಪ್ರದೇಶ, ಕೊಡಗು ವ್ಯಾಪ್ತಿಯ ಪೆರಾಜೆ ಗ್ರಾಮದ ಕುಂಡಾಡು ಮತ್ತು ಬಂಗಾರಕೋಡಿ ಮಧ್ಯ ಪ್ರದೇಶ ವಜ್ರಪುರದಲ್ಲಿ ಸುಮಾರು 3ವರ್ಷಗಳಿಂದ ಅಕ್ರಮ ವಜ್ರ ಗಣಿಗಾರಿಕೆ ನಡೆಯುತ್ತಿದೆ.ವಜ್ರಪುರ ಎನ್ನುವ ಪ್ರದೇಶ ಸ್ಥಳೀಯ ಜನರ ಸ್ವಾಧೀನ ದಲ್ಲಿದ್ದರೂ, ಸರಕಾರಿ ಜಾಗವಾಗಿದ್ದು, ಕೊಳಿಕಿಮಲೆ ಬೆಟ್ಟದ ಕೆಳಗಿನ ಪ್ರದೇಶ. ಈ ಭಾಗದಲ್ಲಿ ಸಾಕಷ್ಟು ಜನವಸತಿ ಗಳಿವೆ. ಜನವಸತಿ ಪ್ರದೇಶದ ಮಧ್ಯದಲ್ಲಿ ಸುಮಾರು 10 ಸೆಂಟ್ ಜಾಗ ಸಮತಟ್ಟು ಮಾಡಲಾಗಿದೆ. ಸುಮಾರು 200 ಅಡಿಯಷ್ಟು ಆಳ ಗುಂಡಿ ತೆಗೆಯಲಾಗಿದ್ದು, ಗುಂಡಿಯೊಳಗೆ ನಾಲ್ಕು ಕಡೆಯಿಂದ ಸುರಂಗ ತೋಡಲಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದು, ಕಳೆದ ವಾರವಷ್ಟೇ ಜೆಸಿಬಿ ಯಂತ್ರದ ಮೂಲಕ ಮುಚ್ಚಲಾಗಿದೆ.ಮೂರು ವರ್ಷಗಳಿಂದ ಅಕ್ರಮ ವಜ್ರಗಣಿಗಾರಿಕೆ ಮಾಡಲಾಗುತ್ತಿದ್ದು, ಸ್ಥಳೀಯ ಮತ್ತು ಕಲ್ಲುಗುಂಡಿಯ ವ್ಯಕ್ತಿಗಳಿಬ್ಬರ ಮೂಲಕ ಮೈಸೂರಿನ ಮೂಲಕ ಹೊರರಾಜ್ಯಕ್ಕೆ ಸಾಗಾಟ ವಾಗುತ್ತಿದೆ. ಅಪ್ಪಟ ವಜ್ರವಾಗಿದ್ದು, 1 ಕೆಜಿಗೆ 1ಲಕ್ಷ ರೂ.ಗಳಿದ್ದು, ಗಣಿಕೆಗಾರಿಕೆ ದಂಧೆಗೆ ಸ್ಥಳೀಯವಾಗಿ ವಾಸವಿರುವ ಜನರು ಮಾತ್ರ ಕಂಗಾಲಾಗಿದ್ದಾರೆ. (ಮೊದಲ ಪುಟದಿಂದ) ಈ ದಂಧೆಯಲ್ಲಿ ಶಾಮೀಲಾಗಿದ್ದ ವ್ಯಕ್ತಿಗಳು ಮಾತ್ರ ರಾತ್ರಿ ಯಂತ್ರಗಳ ಮೂಲಕ ಮಣ್ಣನ್ನು ತೆಗೆದು, ಕೂಲಿ ಕಾರ್ಮಿಕರ ಮೂಲಕ ವಜ್ರವನ್ನು ಹೊರತೆಗೆಸುತ್ತಿ ದ್ದಾರೆ.

ಹಲವು ವರ್ಷಗಳ ಹಿಂದೆ ವಜ್ರವಿರುವ ಮಾಹಿತಿ ಇದ್ದು, ಆ ವೇಳೆ ವಜ್ರವನ್ನು ಅಗೆದು ತೆಗೆಯಲಾಗಿದೆ ಎನ್ನಲಾಗುತ್ತಿದ್ದು, ಮೂರು ವರ್ಷಗಳಿಂದ ಮಾತ್ರ ನಿರಂತರ ಯಂತ್ರ ಬಳಸಿ ತೆಗೆಯ ಲಾಗುತ್ತಿದೆ. ಇಲ್ಲಿಗೆ ವಜ್ರಪುರವೆಂದೇ ಹೆಸರಿದ್ದು, ಅಪ್ಪಟ ವಜ್ರವೂ ಸಿಗುತ್ತಿದೆ.

ವಜ್ರ ಅಗೆಯುವಾಗ ಕ್ವಿಂಟಾಲ್‍ಗಟ್ಟಲೆ ಸಿಗುತ್ತಿದೆ ಎನ್ನುವ ಮಾಹಿತಿ ಸ್ಥಳೀಯರಿಂದ ದೊರೆತ್ತಿದ್ದು, ಬಂಗಾರಕೋಡಿ ರಸ್ತೆಯ ಮೂಲಕ ಸಾಗಿಸಲಾಗುತ್ತಿದೆ. ಸಾಗಾಟ ರಾತ್ರಿಯೇ ನಡೆಯುತ್ತಿದ್ದು, ಅಗೆಯುವ ಕೆಲಸ ಹಗಲಿನಲ್ಲೂ ನಡೆಯುತ್ತಿದೆ.

ಜೋಡುಪಾಲ ಪ್ರಕೃತಿ ದುರಂತದ ಆತಂಕ

ಆಳವಾಗಿ ಕೊರೆದು, ವಜ್ರ ಗಣಿಗಾರಿಕೆ ಮಾಡಲಾಗುತ್ತಿದ್ದು, ಮುಂದೆ ಮಳೆಗಾಲ ಆರಂಭವಾದರೆ ಮಳೆ ನೀರು ಹರಿದು ಜೋಡುಪಾಲ ಪ್ರಕೃತಿ ದುರಂತದಂತೆ ಬೆಟ್ಟಗುಡ್ಡಗಳು ಒಡೆದು ಜೀವಹಾನಿ ಸಂಭವಿಸ ಬಹುದೆಂಬ ಆತಂಕ ಸ್ಥಳೀಯವಾಗಿ ವಾಸವಿರುವ ಜನರಲ್ಲಿದೆ.

ಇಲಾಖೆಗಳು ಶಾಮೀಲು: ಸ್ಥಳೀಯರು ಕಾರ್ಮಿಕರನ್ನು ಮತ್ತು ದಂಧೆಯಲ್ಲಿ ಶಾಮೀಲಾಗಿರುವ ವ್ಯಕ್ತಿಗಳನ್ನು ಗಣಿಗಾರಿಕೆ ನಡೆಸದಂತೆ ಎಚ್ಚರಿಸಿದ್ದಾರೆ. ಅಲ್ಲದೆ ಸ್ಥಳೀಯ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಅರಣ್ಯ ಇಲಾಖೆಗೆ ಗಣಿಗಾರಿಕೆ ಬಗ್ಗೆ ಮಾಹಿತಿ, ದೂರುಗಳನ್ನು ನೀಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸಂಬಂಧಿತ ಇಲಾಖೆಯವರು ಅವರುಗಳನ್ನು ಓಲೈಸಿ ಭೇಟಿ ನೀಡುವ ಮೊದಲೆ ಹಿಂದಕ್ಕೆ ಕಳುಹಿಸಲಾಗುತ್ತಿದೆ.

ಕೂಡಲೇ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಜನರು ಆಗ್ರಹಿಸುತ್ತಿದ್ದಾರೆ. -ಗಿರೀಶ್ ಪೆರಾಜೆ