ಮಡಿಕೇರಿ, ಮಾ. 13: ಕೊಡಗಿನ ಗೌರಮ್ಮ ಹೊಸಗನ್ನಡ ಸಾಹಿತ್ಯದ ಸಣ್ಣಕತೆಗಳ ದೊಡ್ಡ ಸಾಹಿತಿ ಎಂದು ಹಿರಿಯ ಸಾಹಿತಿ ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ತಾರಿಣಿ ಅವರು ಅಭಿಪ್ರಾಯಪಟ್ಟರು.ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಲಾಗಿದ್ದ 2018-19ನೇ ಸಾಲಿನ ಗೌರಮ್ಮ ಜನ್ಮದಿನಾಚರಣೆ ಹಾಗೂ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದರು. ಸಮಾಜದ ಸುತ್ತಮುತ್ತಲಿನ ಆಗುಹೋಗುಗಳೇ ಗೌರಮ್ಮ ಅವರಿಗೆ ಕಥಾ ವಸ್ತುಗಳಾಗಿದ್ದವು ಎಂದು ಹೇಳಿದರು. ತಮ್ಮ ತಂದೆ ಕುವೆಂಪು ಅವರಿಗೆ ಕೊಡಗಿನೊಂದಿಗೆ ನಿಕಟ ಸಂಪರ್ಕವಿತ್ತು. ಫೀ.ಮಾ. ಕಾರ್ಯಪ್ಪ ಅವರ ಮನೆಗೆ ಕುವೆಂಪು ಬಂದಿದ್ದರು ಎಂದು ನೆನಪಿಸಿಕೊಂಡ ಅವರು, ಕುವೆಂಪು ಅವರು ಕಾದಂಬರಿ ರಚಿಸುತ್ತಿದ್ದ ಬಗೆಗಿನ ನೆನಪನ್ನು ಹಂಚಿಕೊಂಡರು.

(ಮೊದಲ ಪುಟದಿಂದ) ಮುಖ್ಯ ಭಾಷಣ ಮಾಡಿದ ಮೈಸೂರಿನ ಸಾಹಿತಿ ಚಿದಾನಂದ ಗೌಡ್ರು ಕತೆ, ಕಾದಂಬರಿಗಳ ಮೌಲ್ಯ ಗೌರಮ್ಮ ಅವರ ಕತೆಗಳಲ್ಲಿದೆ. ಶೋಷಿತರ ಕಾಳಜಿ ಬಗ್ಗೆ ಪ್ರಶಂಸಿಸಿದರಲ್ಲದೆ, ಗೌರಮ್ಮ ಅವರ ಕತೆಗಳ ಬಗ್ಗೆ ವಿಶ್ಲೇಷಿಸಿದರು.

ಕೊಡಗಿನ ಗೌರಮ್ಮ ಪ್ರಶಸ್ತಿಗೆ ಭಾಜನರಾದ ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ, ಡಾ. ಕಾವೇರಿ ಪ್ರಕಾಶ್ ಅವರು ಮಾತನಾಡಿ, ಗೌರಮ್ಮ ಕೇವಲ 27 ವರ್ಷಗಳ ಕಾಲ ಮಾತ್ರ ಬದುಕಿದ್ದರೂ ಕಥಾ ಪ್ರಪಂಚಕ್ಕೆ ಅವರೊಂದು ಅಮೂಲ್ಯ ನೆನಪು. ಸ್ವಾತಂತ್ರ್ಯ ಪೂರ್ವದಲ್ಲೇ ಅವರ ದಿಟ್ಟತನ ಮೆಚ್ಚುವಂತದ್ದು ಎಂದರು.

ಅತಿಥಿಗಳಾಗಿದ್ದ ಲೇಖಕಿಯರ ಬಳಗದ ಅಧ್ಯಕ್ಷೆ ಕಸ್ತೂರಿ ಗೋವಿಂದಮ್ಮಯ್ಯ ಅವರು ಮಾತನಾಡಿ, ಸಾಹಿತ್ಯ ಹೇಗಾದರೂ ಕಷ್ಟಪಟ್ಟು ರಚಿಸಬಹುದು. ಆದರೆ ಅದನ್ನು ಓದುವವರು ಹೆಚ್ಚಾಗಬೇಕೆಂದು ಹೇಳಿದರು. ಸಾಹಿತಿ, ನಿವೃತ್ತ ಪ್ರಾಧ್ಯಾಪಕಿ ಪ್ರೊ.ಪಿ.ಎ. ಸುಶೀಲ ಅವರು ಗೌರಮ್ಮರಂತಹ ದಿಟ್ಟತನ ಎಲ್ಲರಲ್ಲೂ ಬರಬೇಕು. ಸಾಹಿತ್ಯದತ್ತ ಒಲವು ತೋರಲು ಮಕ್ಕಳಿಗೆ ಪೋಷಕರು, ಶಿಕ್ಷಕರು ಪ್ರೇರೇಪಿಸಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮೇ 5ರಂದು ಗೌರಮ್ಮ ಅವರ ಜನ್ಮದಿನಾಚರಣೆಯನ್ನು ಸಾಹಿತ್ಯ ದಿನವನ್ನಾಗಿ ಕಳೆದೆರಡು ವರ್ಷಗಳಿಂದ ಆಚರಿಸುತ್ತಾ ಬರಲಾಗುತ್ತಿದೆ. ಕಳೆದ 14 ವರ್ಷಗಳಿಂದ ಗೌರಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸಾಹಿತಿಗಳು ಹೆಚ್ಚಾಗಿದ್ದಾರೆ. ಆದರೆ ಓದುವ ಜನರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಜನರಿಗೆ ಮಾಹಿತಿ ಸಿಗುತ್ತಿಲ್ಲ. ಪತ್ರಿಕೆ, ಪುಸ್ತಕಗಳನ್ನು ಓದುವಂತೆ ಕೋರಿದರು. ಮಾಧ್ಯಮಗಳಲ್ಲಿ ಗೌರಮ್ಮ ಪ್ರಶಸ್ತಿಗೆ ಆಹ್ವಾನ ಮಾಡಿದ್ದರೂ ಕೆಲವೇ ಪುಸ್ತಕಗಳು ಬಂದಿದ್ದು, ಆ ಪೈಕಿ ಪಾರದರ್ಶಕವಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಸಾಹಿತ್ಯ ಕೃಷಿ, ಚಟುವಟಿಕೆಗಳು ಹೆಚ್ಚಾಗಬೇಕೆಂಬದೇ ಕಸಾಪ ಉದ್ದೇಶವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಸ್ಥಳದಲ್ಲೇ ಕತೆ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಮಡಿಕೇರಿ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಾದ ಹೆಚ್.ಎಸ್. ಮಮತಾ (ಪ್ರ.), ಮಂಜುಳಾ (ದ್ವಿ.) ಹಾಗೂ ಹಟ್ಟಿಹೊಳೆ ನಿರ್ಮಲಾ ಮಾತೆ ವಿದ್ಯಾಸಂಸ್ಥೆಯ ಶ್ರೀಶಾಂತ್ (ತೃ.) ಅವರುಗಳಿಗೆ ಬಹುಮಾನ ವಿತರಿಸಲಾಯಿತು. ಈ ಸ್ಪರ್ಧೆಯ ತೀರ್ಪುಗಾರರಾಗಿ ಸಾಹಿತಿ ಪೂಜಾರಿರ ಕೃಪಾ ದೇವರಾಜ್ ಕಾರ್ಯನಿರ್ವಹಿಸಿದ್ದರು. ಪ್ರಶಸ್ತಿಗೆ ಭಾಜನರಾದ ಡಾ. ಕಾವೇರಿ ಅವರನ್ನು ಅವರ ಕುಟುಂಬದವರು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿಗಳಾದ ಡಾ. ಕೂಡಕಂಡಿ ದಯಾನಂದ, ಬಾಳೆಯಡ ಕಿಶನ್ ಪೂವಯ್ಯ, ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ, ಡಾ. ಕೋರನ ಸರಸ್ವತಿ ಪ್ರಕಾಶ್, ಬೈತಡ್ಕ ಜಾನಕಿ ಬೆಳ್ಯಪ್ಪ, ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ. ಸೋಮವಾರಪೇಟೆ ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಚುಟುಕು ಸಾಹಿತಿ ಹಾ.ತಿ. ಜಯಪ್ರಕಾಶ್, ವಕೀಲ ಕುಂಞ ಅಬ್ದುಲ್ಲ, ಕವಿ ಪಿ.ಎಸ್. ವೈಲೇಶ್, ಕಸಾಪ ಜಿಲ್ಲೆ ಹಾಗೂ ತಾಲೂಕು ನಿರ್ದೇಶಕರುಗಳು, ಸದಸ್ಯರುಗಳು, ಸಾಹಿತಿಗಳು ಭಾಗವಹಿಸಿದ್ದರು.

ನಾಪೋಕ್ಲುವಿನ ಶ್ರೀರಕ್ಷ, ಪ್ರಭಾಕರ್ ಪ್ರಾರ್ಥಿಸಿದರೆ, ನಾಪೋಕ್ಲು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಮಡಿಕೇರಿ ತಾಲೂಕು ಕಸಾಪ ನಿರ್ದೇಶಕಿ ಚೋಕೀರ ಅನಿತಾ ದೇವಯ್ಯ ನಿರೂಪಿಸಿದರೆ, ನಿರ್ದೇಶಕಿ ಡಿ.ಹೆಚ್. ಪುಷ್ಪ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕಿ ತಳೂರು ಉಷಾರಾಣಿ ವಂದಿಸಿದರು.