ಸಿದ್ದಾಪುರ, ಮಾ. 12: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾಗೂ ಕಣ್ಣಂಗಾಲ ಗ್ರಾ.ಪಂ ವ್ಯಾಪ್ತಿಯ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಕೆ.ಜಿ ಬೋಪಯ್ಯ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ಸರಕಾರದ ವಿಶೇಷ ಅನುದಾನ ಹಾಗೂ ಮಳೆ ಹಾನಿ ಅನುದಾನದಿಂದ ಸಿದ್ದಾಪುರ ವ್ಯಾಪ್ತಿಯ ಗುಹ್ಯ ಗ್ರಾಮದ ಪಳ್ಳಕರೆಯಿಂದ ಕಕ್ಕಟ್ಟುಕಾಡುವರೆಗೆ ತೆರಳುವ ರಸ್ತೆ ರೂ. 10 ಲಕ್ಷ, ಕರಡಿಗೋಡು ಬಸವೇಶ್ವರ ದೇವಾಲಯದ ಮೂಲಕ ಸರಕಾರಿ ಪ್ರಾಥಮಿಕ ಶಾಲೆಗೆ ತೆರಳುವ ರಸ್ತೆ ರೂ. 10 ಲಕ್ಷ, ಕರಡಿಗೋಡು ಹೊಳ ಕರೆ ರಸ್ತೆ ಅಭಿವೃದ್ಧಿಗೆ ರೂ. 10 ಲಕ್ಷ, ಗುಹ್ಯ ಒಂಟಿಯಂಗಡಿ ಸಂಪರ್ಕ ರಸ್ತೆ ರೂ 20 ಲಕ್ಷ, ಹೈಸ್ಕೂಲ್ ಕೂಡುಗದ್ದೆ ಸಂಪರ್ಕ ರಸ್ತೆ ರೂ. 10 ಲಕ್ಷ, ಗುಹ್ಯ ಕಣ್ಣಂಗಾಲ ರಸ್ತೆ ರೂ. 15 ಲಕ್ಷ ಹಾಗೂ ಇನ್ನಿತರ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸರಕಾರದ ವಿಶೇಷ ಅನುದಾನವನ್ನು ಲೋಕೋಪಯೋಗಿ ಸಚಿವರ ಮುಖಾಂತರ ಬಿಡುಗಡೆಗೊಳಿಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ಕೂಡಾ ವಿಶೇಷ ಅನುದಾನ ಹಾಗೂ ಮಳೆ ಹಾನಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವದು ಎಂದು ತಿಳಿಸಿದರು.
ಈ ಸಂದರ್ಭ ತಾ.ಪಂ. ಸದಸ್ಯ ಕೆ.ಎಂ. ಜೆನೀಶ್, ಗ್ರಾ.ಪಂ. ಸದಸ್ಯರುಗಳಾದ ಪೂವಮ್ಮ, ಶೈಲಾ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕುಕ್ಕುನೂರು ನಾಣಯ್ಯ, ಬಿಜೆಪಿ ಪ್ರಮುಖರಾದ ಬಿ.ಕೆ. ಅನಿಲ್ ಶೆಟ್ಟಿ, ಕುಕ್ಕುನೂರು ಪ್ರಕಾಶ್,ಹರಿದಾಸ್, ಮಲ್ಲಂಡ ಮಧು ದೇವಯ್ಯ, ಎಂ.ಎ. ಆನಂದ ಸೇರಿದಂತೆ ಇತರರು ಇದ್ದರು.