ವಿಶೇಷ ವರದಿ ವಿಜಯ್ ಹಾನಗಲ್ ಸೋಮವಾರಪೇಟೆ, ಮಾ.13: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಯಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್‍ನಿಂದ ಮಾಜಿ ಸಚಿವ ಸಿ.ಹೆಚ್. ವಿಜಯಶಂಕರ್ ಸ್ಪರ್ಧಿಸುವದು ಬಹುತೇಕ ಖಚಿತವಾಗಿದೆ. ಬಿ.ಜೆ.ಪಿಯಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಹೆಸರು ಬಹುತೇಕ ಖಚಿತಗೊಂಡಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ನಡುವೆ ಅಭ್ಯರ್ಥಿ ಸ್ಥಾನಕ್ಕಾಗಿ ಪೈಪೋಟಿ ನಡೆದು ಇಂದು ಆ ಕ್ಷೇತ್ರವನ್ನು ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಯಶಸ್ವಿಯಾಗಿದೆ. ಮಾಜಿ ಸಚಿವ ಕಾಂಗ್ರೆಸ್‍ನ ಸಿ.ಹೆಚ್À. ವಿಜಯಶಂಕರ್ ಅವರು ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸುವದು ಬಹುತೇಕ ಖಚಿತಗೊಂಡಿದೆ. (ಮೊದಲ ಪುಟದಿಂದ) ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆದ ಈ ಸಂಬಂಧ “ಶಕ್ತಿ” ಮಾಹಿತಿ ಸಂಗ್ರಹಿಸಿದಾಗ ಈ ಕ್ಷೇತ್ರವನ್ನು ಮೂರೂ ರಾಷ್ಟ್ರೀಯ ಪಕ್ಷಗಳು ಪ್ರತಿಷ್ಠಿತ ಕ್ಷೇತ್ರವಾಗಿ ಪರಿಗಣಿಸಿದ್ದುದು ಗಮನಕ್ಕೆ ಬಂದಿತು. ಇಂದು ನಡೆದ ಸಭೆಯಲ್ಲಿ ರಾಜ್ಯದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ 8 ಕ್ಷೇತ್ರಗಳಲ್ಲಿ ಜೆ.ಡಿ.ಎಸ್. ಅಭ್ಯರ್ಥಿಗಳು ಮೈತ್ರಿಕೂಟ ಹೊಂದಾಣಿಕೆಯೊಂದಿಗೆ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಮೈಸೂರು- ಕೊಡಗು ಕ್ಷೇತ್ರವನ್ನು ಪೈಪೋಟಿ ಬಳಿಕ ಕಾಂಗ್ರೆÀ್ರಸ್ ತೆಕ್ಕ್ಕೆಗೆ ಬಿಟ್ಟುಕೊಡಲಾಗಿದೆ.

ಈ ನಡುವೆ ಬಿ.ಜೆ.ಪಿ ಮಟ್ಟಿಗೆ ಅಭ್ಯರ್ಥಿ ಆಯ್ಕೆಯ ಗೊಂದಲ ಅಷ್ಟಾಗಿ ಕಂಡುಬಂದಿಲ್ಲ. ಬಹುತೇಕ ಈಗಿನ ಸಂಸದರಿಗೆ ಆದ್ಯತೆಯಲ್ಲಿ ಅವಕಾಶ ಮುಂದುವರಿಸುವದರೊಂದಿಗೆ ಉಳಿದ ಕ್ಷೇತ್ರಗಳಲ್ಲಿ ಮಾತ್ರ ನೂತನ ಅಭ್ಯರ್ಥಿಗಳ ಆಯ್ಕೆಗೆ ಬಿ.ಜೆ.ಪಿ ರಾಜ್ಯ ಕಾರ್ಯಕಾರಿಣಿ ಸನ್ನದ್ಧವಾಗುತ್ತಿದೆ ಎಂದು ತಿಳಿದುಬಂದಿದೆ. ಆದರೂ, ಸಂಸದರಾಗಿರುವವರನ್ನೇ ಆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾಗಿ ಉಳಿಸಿಕೊಳ್ಳುವ ಬಗ್ಗೆ ಪಕ್ಷದಲ್ಲಿ ಸ್ಪಷ್ಟ ನಿರ್ಧಾರವಾಗಿಲ್ಲ ಎನ್ನುವ ಕುರಿತೂ ಕೇಳಿಬಂದಿದ್ದು ಈ ಬಗ್ಗೆ ಬಿ.ಜೆ.ಪಿ ಸಂಸದರುಗಳÀಲ್ಲಿ ಆತಂಕ ಮಾಯವಾಗಿಲ್ಲ.

‘ಶಕ್ತಿ’ ಸಂಸದ ಪ್ರತಾಪ್ ಸಿಂಹ ಅವರನ್ನು ಸಂಪರ್ಕಿಸಿದಾಗ ರಾಜ್ಯದ 17 ಕ್ಷೇತ್ರಗಳಲ್ಲಿ ಈ ಹಿಂದೆ ಬಿ.ಜೆ.ಪಿ. ವಿಜಯ ಸಾಧಿಸಿತ್ತು. ಆ ಪೈಕಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಅನಂತ್ ಕುಮಾರ್ ಅವರು ವಿಧಿವಶರಾಗಿರುವದರಿಂದ ಆ ಕ್ಷೇತ್ರದಲ್ಲಿ ಮಾತ್ರ ನೂತನ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವ ಕುರಿತು ಸುಳಿವು ನೀಡಿದರು. ಉಳಿದಂತೆ 16 ಕ್ಷೇತ್ರಗಳಲ್ಲಿ ಈಗಿನ ಸಂಸದರನ್ನೇ ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಿರುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿಯವರಂತಹ ದಿಟ್ಟ ನಾಯಕತ್ವದಲ್ಲಿ ತನಗೆ ಯಾವದೇ ಆತಂಕವಿಲ್ಲ. ಎದುರಿಸುವ ಧೈರ್ಯವಿದೆ. ಜಯ ಶತ:ಸ್ಸಿದ್ಧ ಎನ್ನುವ ನಂಬಿಕೆಯಿದೆ. ಕೊಡಗಿನ ಜನತೆಯ ಮೇಲಂತೂ ತನಗೆ ಪೂರ್ಣ ವಿಶ್ವಾಸವಿದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.

‘ಶಕ್ತಿ’ಗೆ ಬಲ್ಲ ಮೂಲವೊಂದರಿಂದ ತಿಳಿದು ಬಂದ ಪ್ರಕಾರ ಕಾಂಗ್ರೆಸ್ ಪರವಾಗಿ ಮೈಸೂರು- ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಸಿ.ಹೆಚ್. ವಿಜಯ ಶಂಕರ್ ಅವರ ಹೆಸರು ಆದ್ಯತಾ ಪಟ್ಟಿಯಲ್ಲಿದೆ. ಚುನಾವಣೆಯಲ್ಲಿ ಮೈತ್ರಿ ಪಕ್ಷದಿಂದ ಟಿಕೆಟ್ ಪಡೆಯುವ ರೇಸ್‍ನಲ್ಲಿ ಮುಂದಿರುವ ವಿಜಯಶಂಕರ್ ಅವರು ತನಗೇ ಟಿಕೆಟ್ ಒಲಿಯಲಿದೆ. ಮೈತ್ರಿಯಿಂದ ಸ್ಪರ್ಧೆ ಮಾಡಿದರೆ ಗೆಲುವು ಖಚಿತ. ಈ ಹಿಂದೆ ಎರಡು ಬಾರಿ ತಾನು ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಈ ಹಿಂದೆ ಕಾಂಗ್ರೆಸ್- ಜೆ.ಡಿಎಸ್. ಮೈತ್ರಿಕೂಟದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಹೆಸರು ಮೈಸೂರು- ಕೊಡಗು ಕ್ಷೇತ್ರದಲ್ಲಿ ಮುಂಚೂಣಿಯಲ್ಲ್ಲಿದ್ದುದು ಈಗ ಬದಲಾವಣೆ ಕಂಡುಬಂದಿದೆ. ದೇವೇಗೌಡ ಅವರು ಬೆಂಗಳೂರು ಉತ್ತರ ಅಥವ ತುಮಕೂರಿನಿಂದ ಸ್ಪರ್ಧಿಸುವ ಸಾಧ್ಯತೆ ಇರುವದಾಗಿ ಬಲ್ಲ ಮೂಲಗಳು ತಿಳಿಸಿವೆ.

ಚುನಾವಣಾ ಹಿನ್ನೋಟ

2014 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪ್ ಸಿಂಹ 5,03,908, ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಅಡಗೂರು ವಿಶ್ವನಾಥ್ ಅವರು 4,72,300, ಜೆಡಿಎಸ್ ಅಭ್ಯರ್ಥಿಯಾಗಿದ್ದ ಚಂದ್ರಶೇಖರಯ್ಯ ಅವರು 1,38,587 ಮತಗಳನ್ನು ಸಂಪಾದಿಸಿದ್ದು, ಪ್ರತಾಪ್ ಸಿಂಹ ಅವರು ವಿಶ್ವನಾಥ್ ಅವರ ವಿರುದ್ಧ 31,608 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಕೊಡಗಿನ ಎರಡೂ ವಿಧಾನ ಸಭಾ ಕ್ಷೇತ್ರಗಳಲ್ಲೂ ಬಿಜೆಪಿಗೆ ಹೆಚ್ಚಿನ ಮತಗಳು ಸಂದಾಯವಾಗಿದ್ದವು. ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ವಿಶ್ವನಾಥ್ ಅವರಿಗೆ 56,791ಮತಗಳು ಲಭಿಸಿದ್ದರೆ, ಪ್ರತಾಪ್ ಸಿಂಹ ಅವರಿಗೆ 81,837 (25,046 ಹೆಚ್ಚು ಮತ) ವೀರಾಜಪೇಟೆಯಲ್ಲಿ ಕಾಂಗ್ರೆಸ್‍ಗೆ 59,951, ಬಿಜೆಪಿಗೆ 77,754 (17,803 ಅಧಿಕ) ಮತಗಳು ಲಭಿಸಿದ್ದವು.

ಉಳಿದಂತೆ ಮೈಸೂರು ಜಿಲ್ಲೆಯ ಕೃಷ್ಣರಾಜ (ಕಾಂಗ್ರೆಸ್ 45,152, ಬಿಜೆಪಿ 79,824 ಮತಗಳು) ಮತ್ತು ಚಾಮರಾಜದಲ್ಲಿ ಮಾತ್ರ ಕಾಂಗ್ರೆಸ್‍ಗಿಂತ ಬಿಜೆಪಿಗೆ ಅಧಿಕ (ಕಾಂಗ್ರೆಸ್ 39,379 ಬಿಜೆಪಿ 72,659)ಮತಗಳು ಲಭಿಸಿದ್ದವು. ಉಳಿದಂತೆ 4 ಕ್ಷೇತ್ರಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತಗಳು ಲಭಿಸಿದ್ದವು.

ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಈ ವರೆಗೆ ಒಟ್ಟು 13 ಬಾರಿ ಗೆಲುವು ಸಾಧಿಸಿದ್ದು, ಬಿಜೆಪಿ 3 ಬಾರಿ ವಿಜಯದ ನಗೆ ಬೀರಿದೆ. 2008ರಲ್ಲಿ ಕ್ಷೇತ್ರ ಮರು ವಿಂಗಡಣೆ ನಂತರ ಕೊಡಗು ಜಿಲ್ಲೆ ಮೈಸೂರಿಗೆ ಸೇರ್ಪಡೆಗೊಂಡಿದೆ.