ಕುಶಾಲನಗರ, ಮಾ. 13: ದೇವಾಟ್‍ಪರಂಬ್ ಕೊಡವ ನರಮೇಧ ದುರಂತದ ಬೆಂಗಾವಲಾಗಿ ನಿಂತ ಫ್ರೆಂಚ್ ಸರಕಾರ ಕ್ಷಮೆಯಾಚಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಬೇಕೆಂದು ಕರ್ನಾಟಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ ಎಂದು ಸಿಎನ್‍ಸಿ ಮುಖ್ಯಸ್ಥ ನಂದಿನೆರವಂಡ ನಾಚಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜಲಿಯನ್ ವಾಲಾಬಾಗ್ ನರಮೇಧ ದುರಂತದ ಕುರಿತು ಬ್ರಿಟನ್ ಸರ್ಕಾರ ಕ್ಷಮೆ ಕೇಳಬೇಕೆಂದು ಇತ್ತೀಚೆಗೆ ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ರೀತಿಯಲ್ಲೇ ಕರ್ನಾಟಕ ವಿಧಾನಸಭೆಯಲ್ಲಿ ದೇವಾಟ್‍ಪರಂಬ್ ಕೊಡವ ನರಮೇಧ ದುರಂತದ ಮತ್ತು ಅದಕ್ಕೆ ಕಾರಣೀಭೂತರಾದ ಫ್ರೆಂಚ್ ಸರ್ಕಾರ ಕ್ಷಮೆಯಾಚಿಸಬೇಕೆಂಬ ನಿರ್ಣಯ ಅಂಗೀಕರಿಸಲು ಸಿಎನ್‍ಸಿ ಯಿಂದ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

1919ರಲ್ಲಿ ನಡೆದ ಅಮೃತ ಸರದ ಜಲಿಯನ್ ವಾಲಾಬಾಗ್‍ನಲ್ಲಿ ಬ್ರಿಟಿಷ್ ಬ್ರಿಗೇಡಿಯರ್ ಜನರಲ್ ರಿಜಿನಾಲ್ಡ್ ಡಯರ್ ಮುಂದಾಳತ್ವದಲ್ಲಿ ಬೈಸಾಖಿ ಉತ್ಸವಕ್ಕೆ ಸೇರಿದ ನೂರಾರು ಮುಗ್ದರನ್ನು ಗೋಲಿಬಾರಿನ ಮೂಲಕ ಮಾರಣ ಹೋಮ ನಡೆಸಿದ ದುರ್ಘಟನೆಗೆ 100 ವರ್ಷ ತುಂಬಿರುವ ಈ ವೇಳೆ ಆ ದುರಂತಕ್ಕೆ ಮೂಲ ಕಾರಣವಾದ ಅಂದಿನ ಬ್ರಿಟಿಷ್ ಸರ್ಕಾರದ ಉತ್ತರಾಧಿಕಾರಿಗಳಾದ ಇಂದಿನ ಬ್ರಿಟನ್ ಸರ್ಕಾರ ಬಹಿರಂಗ ಕ್ಷಮೆಯಾಚಿಸಬೇಕೆಂಬ ನಿರ್ಣಯವನ್ನು ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ಗೊತ್ತುವಳಿ ಅಂಗೀಕರಿಸಿದೆ.

ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಿ ಬ್ರಿಟಿಷ್ ಸರ್ಕಾರಕ್ಕೆ ತಾಕೀತು ಮಾಡಬೇಕೆಂದು ನಿರ್ಣಯ ಮಾಡಲಾಗಿದೆ.

ಜಲಿಯನ್ ವಾಲಾಬಾಗ್ ದುರಂತ ಮಾರಣ ಹೋಮಕ್ಕಿಂತ ಹೀನ ಹಾಗೂ ಪೈಶಾಚಿಕ ನರಮೇಧವು ದೇವಾಟುಪರಂಬ್ ದುರಂತದ ಮೂಲಕ ಕೊಡವರ ಚರಿತ್ರೆಯಲ್ಲಿ ಘಟಿಸಿಹೋಗಿದ್ದು, ಕರ್ನಾಟಕದ ವತಿಯಿಂದಲೂ ಈ ಆಗ್ರಹ ಮಾಡಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಪಂಜಾಬ್ ಸರ್ಕಾರ ಮತ್ತು ಅದರ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ನಡೆದ ದಾರಿಯಲ್ಲೆ ಕರ್ನಾಟಕದ ಮುಖ್ಯಮಂತ್ರಿಗಳು ಹೆಜ್ಜೆಯಿರಿಸಿ, ಕರ್ನಾಟಕ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಬೇಕೆಂದು ನಾಚಪ್ಪ ಮನವಿಯಲ್ಲಿ ಆಗ್ರಹಿಸಿದ್ದಾರೆ.