ಮಡಿಕೇರಿ, ಮಾ. 12: ಜಿಲ್ಲೆಯಲ್ಲಿರುವ ಇತರ ಕೊಡವ ಸಮಾಜಗಳಿಗಿಂತ ವಿಭಿನ್ನ ರೀತಿಯಲ್ಲಿ ನಾಪೋಕ್ಲು ಕೊಡವ ಸಮಾಜದ ಆಡಳಿತ ಮಂಡಳಿ ರಚನೆಯಾಗುತ್ತದೆ. ಪದಾಧಿಕಾರಿ ಸ್ಥಾನ ಹೊರತಾಗಿ ನಿರ್ದೇಶಕ ಸ್ಥಾನಕ್ಕೆ ಆಯಾ ವ್ಯಾಪ್ತಿಯ ಕ್ಷೇತ್ರಗಳಿಗೆ ಸೀಮಿತವಾಗಿ ನಿರ್ದೇಶಕರು ಚುನಾವಣೆಗೆ ಸ್ಪರ್ಧಿಸುವಂತಹ ಹಾಗೂ ಆ ವ್ಯಾಪ್ತಿಯ ಸದಸ್ಯರು ಮತ ಚಲಾಯಿಸುವಂತಹ ನಿಯಮವನ್ನು ಅಳವಡಿಸಿಕೊಂಡಿರುವ ನಾಲ್ಕುನಾಡು ವಿಭಾಗಕ್ಕೆ ಸಂಬಂಧಿಸಿದ ನಾಪೋಕ್ಲು ಕೊಡವ ಸಮಾಜಕ್ಕೆ ಈ ಬಾರಿ ಅವಿರೋಧವಾಗಿ ಆಡಳಿತ ಮಂಡಳಿ ರಚನೆಯಾಗಿದೆ.
ಪದಾಧಿಕಾರಿಗಳ ಸ್ಥಾನ ಸೇರಿದಂತೆ ವಿವಿಧ ಗ್ರಾಮಗಳ ವ್ಯಾಪ್ತಿಗೆ ಸೀಮಿತವಾದಂತೆ ತಾ. 17 ರಂದು ಚುನಾವಣೆ ನಿಗದಿಯಾಗಿತ್ತು. ಒಟ್ಟು 21 ಸ್ಥಾನಗಳಿಗೆ 56 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದವರು ಹಾಗೂ ಇನ್ನಿತರ ಪ್ರಮುಖರು ಸೇರಿ ಪರಸ್ಪರ ಚರ್ಚೆ ನಡೆಸುವ ಮೂಲಕ ಮುಂದಿನ ಸಾಲಿನ ಆಡಳಿತ ಮಂಡಳಿ ಅವಿರೋಧವಾಗಿ ರಚನೆಯಾಗಿದೆ.
ಪ್ರತಿಷ್ಠಿತ ನಾಪೋಕ್ಲು ಕೊಡವ ಸಮಾಜ ಸುಮಾರು 3 ಸಾವಿರದಷ್ಟು ಸದಸ್ಯರನ್ನು ಹೊಂದಿದೆ. ಈ ಬಾರಿಯ ಅಧ್ಯಕ್ಷ ಸ್ಥಾನಕ್ಕೆ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬಿದ್ದಾಟಂಡ ಎಸ್. ತಮ್ಮಯ್ಯ, ಡಾ. ಬೊಪ್ಪಂಡ ಜಾಲಿ ಬೋಪಯ್ಯ ಹಾಗೂ ಡಾ. ಸಣ್ಣುವಂಡ ಕಾವೇರಪ್ಪ ನಾಮಪತ್ರ ಸಲ್ಲಿಸಿದ್ದರು. ಇವರ ಪೈಕಿ ಮೂವರು ನಾಮಪತ್ರ ಹಿಂಪಡೆದಿದ್ದು, ಮನು ಮುತ್ತಪ್ಪ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕುಲ್ಲೇಟಿರ ಅಜಿತ್ ನಾಣಯ್ಯ ಹಾಗೂ ಮಣವಟ್ಟಿರ ದಯಾ ಕುಟ್ಟಪ್ಪ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಬಳಿಕ ಕುಲ್ಲೇಟಿರ ಅಜಿತ್ ನಾಣಯ್ಯ ಆಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಮಾಳೆಯಂಡ ಅಯ್ಯಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅರೆಯಡ ಅಶೋಕ್ ಹಾಗೂ ಮಂಡೀರ ಎ. ರಾಜಪ್ಪ ನಾಮಪತ್ರ ಸಲ್ಲಿಸಿದ್ದರು. ಇವರ ಪೈಕಿ ಮೂವರು ಉಮೇದುವಾರಿಕೆ ಹಿಂಪಡೆದು ಮಾಳೆಯಂಡ ಅಯ್ಯಪ್ಪ ಉಪಾಧ್ಯಕ್ಷರಾದರು.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೂ ಬೊಪ್ಪೆರ ಉತ್ತಪ್ಪ, ಮಣವಟ್ಟಿರ ಕುಶಾಲಪ್ಪ, ಕುಂಡ್ಯೋಳಂಡ ವಿಷು ಪೂವಯ್ಯ, ಚೋಕಿರ ಸಜಿತ್ ಚಿಣ್ಣಪ್ಪ, ಮಾಚೆಟ್ಟಿರ ಕುಶಾಲಪ್ಪ ನಾಮಪತ್ರ ಸಲ್ಲಿಸಿದ್ದರು. ಇವರ ಪೈಕಿ ಇತರರು ನಾಮಪತ್ರ ಹಿಂಪಡೆಯುವದರೊಂದಿಗೆ ಮಾಚೆಟ್ಟಿರ ಕುಶಾಲಪ್ಪ ಜಂಟಿ ಕಾರ್ಯದರ್ಶಿಯಾದರು.
ಖಜಾಂಚಿ ಸ್ಥಾನಕ್ಕೆ ಅಪ್ಪಾರಂಡ ಅಯ್ಯಪ್ಪ, ಬಿದ್ದಂಡ ಉಷಾ ದೇವಮ್ಮ, ಮಚ್ಚುರ ಎಂ. ರವೀಂದ್ರ ಹಾಗೂ ಚೀಯಕಪೂವಂಡ ಎಂ. ಅಪ್ಪಚ್ಚು ಉಮೇದುವಾರಿಕೆ ಸಲ್ಲಿಸಿದ್ದರು. ಇವರಲ್ಲಿ ಇತರರು ನಾಮಪತ್ರ ಹಿಂಪಡೆದು ಅಪ್ಪಾರಂಡ ಅಯ್ಯಪ್ಪ ಖಜಾಂಚಿಯಾಗಿ ಮುಂದುವರಿಯಲಿದ್ದಾರೆ.
ನಿರ್ದೇಶಕರುಗಳು: ನಿರ್ದೇಶಕ ಸ್ಥಾನಕ್ಕೆ ನಿಗದಿತ ಕ್ಷೇತ್ರದಿಂದ ಅಭ್ಯರ್ಥಿಗಳು ಸ್ಪರ್ಧಿಸುವದು ಹಾಗೂ ಆ ವಿಭಾಗದ ಸದಸ್ಯರು ಮತದಾರರಾಗಿರುವದು ಈ ಸಮಾಜದ ನಿಯಮವಾಗಿದೆ. ಇದರಂತೆ ನಿರ್ದೇಶಕ ಸ್ಥಾನದ 11 ಸಾಮಾನ್ಯ ಕ್ಷೇತ್ರ ಹಾಗೂ ಐದು ಮಹಿಳಾ ಮೀಸಲು ಕ್ಷೇತ್ರಕ್ಕೂ ಹಲವು ಮಂದಿ ಸ್ಪರ್ಧಿಸಿದ್ದರು.
ಸಮಾಲೋಚನೆಯ ಬಳಿಕ ನಾಪೋಕ್ಲು ಕ್ಷೇತ್ರದಿಂದ ಶಿವಚಾಳಿಯಂಡ ಎಂ. ಕಾರ್ಯಪ್ಪ, ನಾಪೋಕ್ಲು ಪಟ್ಟಣದಿಂದ ಅರೆಯಡ ರಘು ಕರುಂಬಯ್ಯ, ಕೊಳಕೇರಿ ಪೂರ್ವಕ್ಕೆ ಕಾಟ್‍ಮಣಿಯಂಡ ಎಂ. ಉಮೇಶ್, ಕೊಳಕೇರಿ ಪಶ್ಚಿಮಕ್ಕೆ ಕುಂಡ್ಯೋಳಂಡ ವಿಷು ಪೂವಯ್ಯ, ಬೇತುವಿಗೆ ಕೊಂಡಿರ ನಾಣಯ್ಯ, ನೆಲಜಿಗೆ ಮುಕ್ಕಾಟಿರ ವಿನಯ್, ಬಲ್ಲಮಾವಟಿಗೆ ಚೀಯಕಪೂವಂಡ ಸಚಿನ್ ಪೂವಯ್ಯ, ಪಾರಾಣೆಗೆ ಬೊಳ್ಳಚೆಟ್ಟಿರ ಎಂ. ಸುರೇಶ್, ನರಿಯಂದಡಕ್ಕೆ ಚೇನಂಡ ಗಿರೀಶ್ ಪೂಣಚ್ಚ, ಕಕ್ಕಬೆಗೆ ಉದಿಯಾಂಡ ಸುರನ್ ನಾಣಯ್ಯ ಹಾಗೂ ಕುಯ್ಯಂಗೇರಿ ಕ್ಷೇತ್ರಕ್ಕೆ ಬೊಳ್ಳಿಯಂಡ ಹರೀಶ್ ಕಾರ್ಯಪ್ಪ ನಿರ್ದೇಶಕರಾಗಿ ಆಯ್ಕೆಯಾದರು.
ಮಹಿಳಾ ಮೀಸಲು ಕ್ಷೇತ್ರ
ಮಹಿಳೆಯರಿಗೆ ಮೀಸಲಾಗಿರುವ ನಾಪೋಕ್ಲು ಕ್ಷೇತ್ರಕ್ಕೆ ಕುಲ್ಲೇಟಿರ ಅಮ್ಮವ್ವ ಅರುಣ, ನಾಪೋಕ್ಲು ಪಟ್ಟಣಕ್ಕೆ ನಾಟೋಳಂಡ ಕಸ್ತೂರಿ ಉತ್ತಪ್ಪ, ನೆಲಜಿ-ಬಲ್ಲಮಾವಟಿ ಜಂಟಿ ಕ್ಷೇತ್ರಕ್ಕೆ ಮೂವೆರ ರೇಖಾ ಪ್ರಕಾಶ್, ಪಾರಾಣೆ ಕ್ಷೇತ್ರಕ್ಕೆ ಬಿದ್ದಂಡ ಉಷಾ ದೇವಮ್ಮ ಹಾಗೂ ಕಕ್ಕಬೆ ಕ್ಷೇತ್ರಕ್ಕೆ ಅಪ್ಪಾರಂಡ ನಂದಿನಿ ನಾಚಪ್ಪ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.
ಚುನಾವಣಾಧಿಕಾರಿಯಾಗಿ ಚೋಕಿರ ಪೂವಯ್ಯ ಕಾರ್ಯನಿರ್ವಹಿಸಿದರು. ಬಿದ್ದಾಟಂಡ ರಮೇಶ್ ಚಂಗಪ್ಪ ನೇತೃತ್ವದ ಹಾಲಿ ಆಡಳಿತ ಮಂಡಳಿಯ ಅಧಿಕಾರಾವಧಿ ಪೂರ್ಣಗೊಂಡಿದ್ದು, ನೂತನ ತಂಡ ತಾ. 14 ರಂದು ಅಧಿಕಾರ ವಹಿಸಿಕೊಳ್ಳಲಿದೆ.