ಮಡಿಕೇರಿ, ಮಾ. 12: ಕೊಡಗು ಜಿಲ್ಲಾ ಖಾಸಗಿ ಅನುದಾನಿತ ಶಾಲೆಗಳ ವಾರ್ಷಿಕ ಸಭೆಯು ನಗರದ ಹೊಟೇಲ್ ಮಯೂರದಲ್ಲಿ ನಡೆಯಿತು. ಕ್ಯಾಮ್ಸ್‍ನ (ಕರ್ನಾಟಕ ಅನುದಾನ ರಹಿತ ಖಾಸಗಿ ಆಡಳಿತ ಮಂಡಳಿ) ಪ್ರಧಾನ ಕಾರ್ಯದರ್ಶಿ, ಶಶಿಕುಮಾರ್ ಅವರು ಮಾತನಾಡಿ, ಖಾಸಗಿ ಶಾಲೆಗಳ ಬಗ್ಗೆ ಬಹುತೇಕ ಜನಸಮುದಾಯದಲ್ಲಿ ಹೆಚ್ಚಿಗೆ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂಬ ಅಭಿಪ್ರಾಯವಿದೆ. ಆದರೆ 92 ಪ್ರತಿಶತ ಶಾಲೆಗಳು ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಅವಕಾಶ ಕಲ್ಪಿಸಿ ಸರಕಾರವು ಪ್ರತಿ ವರ್ಷ ಒಂದು ಮಗುವಿಗೆ ಮಾಡುವ ಖರ್ಚಿಗಿಂತ ಕಡಿಮೆ ಶುಲ್ಕ ಪಡೆದು, ಶಿಕ್ಷಣ ನೀಡುತ್ತಿರುವದು ಹೆಗ್ಗಳಿಕೆ ಎಂದರು. ಆರ್.ಟಿ.ಇ. ಎಂಬದು ಸರ್ಕಾರ ತಾನು ನೀಡುವ ಗುಣಮಟ್ಟದ ಶಿಕ್ಷಣದಲ್ಲಿ ವಿಫಲಗೊಂಡು ಖಾಸಗಿ ಶಾಲೆಗಳಿಗೆ ಹೊರಿಸಿರುವ ಹೊರೆ, ಹಾಗೆಂದು ಎಲ್ಲಾ ಖಾಸಗಿ ಶಾಲೆಗಳನ್ನು ಸರಿ ಎಂದು ಹೇಳುತ್ತಿಲ್ಲ, ಕೆಲವು ಶಾಲೆಗಳು ಪೋಷಕರಿಂದ ಬಹು ಹೆಚ್ಚಿನ ಶುಲ್ಕ ಪಡೆದು, ಅಹಂಕಾರದಿಂದ ವರ್ತಿಸುವದು ಉಂಟು. ಅಂತಹ ಶಾಲೆಗಳನ್ನು ಕಾನೂನಾತ್ಮಕವಾಗಿ ಬಗ್ಗು ಬಡಿಯಲು ಪ್ರಾರಂಭಿಸಿದ ಹೊರೆಯೇ ಆರ್.ಟಿ.ಇ. ಎಂದು ಅವರು ವಿಶ್ಲೇಷಿಸಿದರು.

ಶಾಲೆಗಳ ಪರಿಸ್ಥಿತಿಯನ್ನು ಬಿಚ್ಚಿಡುತ್ತಾ, ಕಳೆದ ವರ್ಷದ ಆರ್.ಟಿ.ಇ. ಹಣ ಈವರೆಗೂ ಬಿಡುಗಡೆ ಆಗಿರುವದಿಲ್ಲ. ಜೊತೆಗೆ ವರ್ಷವಿಡೀ 25% ಶುಲ್ಕವನ್ನು ಪೋಷಕರು ಕಟ್ಟುವದಿಲ್ಲ. ಇನ್ನು 25% ಆರ್.ಟಿ.ಇ. ಹಣವನ್ನು ಸರ್ಕಾರ ನೀಡುತ್ತಿಲ್ಲ, ಅಂದಾಗ, ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಯುವದು ಹೇಗೆ?

ಎಲ್ಲಾ ಹಂತದ ಅಧಿಕಾರಿಗಳು ಕೂಡ ಇಂದು ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕೆ ಕಾರಣ ವರ್ಷವಿಡೀ ನಡೆಯುವ ವಿವಿಧ ಸಭೆಗಳು, ಭೇಟಿಗಳೇ ಆಗಿಹೋಗಿರುತ್ತವೆ ಎಂದರು. ಆಂಗ್ಲ ಮಾಧ್ಯಮ ಶಾಲೆಗಳನ್ನು ಕನ್ನಡ ದ್ರೋಹಿಗಳೆಂದು ಬಿಂಬಿಸಲಾಗುತ್ತದೆ. ಆದರೆ ನಿಜಾರ್ಥದಲ್ಲಿ ಕನ್ನಡ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಬೋಧಿಸಲಾಗುತ್ತಿದ್ದು, ಕನ್ನಡ ಭಾಷೆಯಲ್ಲಿ ಖಾಸಗಿ ಶಾಲೆಯ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳನ್ನು ಪಡೆಯುತ್ತಿದ್ದಾರೆ ಎಂದರು.

ರಾಜ್ಯಪಠ್ಯಕ್ರಮದಲ್ಲಿ ಅಮೂಲಾಗ್ರ ಬದಲಾವಣೆ ತರಲು ಚಿಂತಿಸಲಾಗು ತ್ತಿದೆ. ಕೇಂದ್ರ ಪಠ್ಯಕ್ರಮ- ರಾಜ್ಯದ ನಡುವಿನ ಅಂತರ ಕಡಿಮೆಗೊಳಿಸಿ, ಸಮಾನ ಶಿಕ್ಷಣದ ಚಿಂತನೆಯ ನೆಲೆಯಲ್ಲಿ ಚಿಂತಿಸಲಾಗುತ್ತಿದೆ.

ಕ್ಯಾಮ್ಸ್ ಸಂಘಟನೆಯ ಸತತ ಪ್ರಯತ್ನದ ಫಲವಾಗಿ ಪಠ್ಯಪುಸ್ತಕಗಳು ನೇರವಾಗಿ ಶಾಲೆಗಳಿಗೆ ತಲಪುವ ವ್ಯವಸ್ಥೆ ಕೂಡ ಆಗಿದೆ. ಅದೆಷ್ಟೋ ತೊಂದರೆಗಳನ್ನು ನಿವಾರಿಸಲಾಗುತ್ತಿದೆ. ಇತ್ತೀಚೆಗೆ ಎಲ್ಲವೂ ಆನ್‍ಲೈನ್ ಮೂಲಕ ಆಗುತ್ತಿದ್ದು, ಅಧಿಕಾರಿಗಳ ಮಟ್ಟದಲ್ಲಿ ಆಗುತ್ತಿದ್ದ ಲೆಕ್ಕವಿಲ್ಲದಷ್ಟು ಖರ್ಚುಗಳು ಕಡಿಮೆಯಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.

ಹಾಗೆಯೇ ಹೊಸ ದಾಖಲೆಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾ ಗುತ್ತಿದ್ದು, ಹಂಚಿಹೋಗಿರುವದರಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

ಆರ್.ಟಿ.ಇ. ಕಾರ್ಯಕರ್ತೆಯ ರೆಂದು ಹೇಳಿಕೊಂಡು, ಖಾಸಗಿ ಶಾಲೆಗಳಿಗೆ ತೊಂದರೆ ಕೊಡುವ, ಹೆದರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳುತ್ತಾ ಕ್ಯಾಮ್ಸ್‍ನ ಬೆಳವಣಿಗೆ, ಶಾಲೆಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರಂತರವಾಗಿ ನಡೆಸುತ್ತಾ ಬಂದಿರುವ ಹೋರಾಟದ ಹಾದಿಯನ್ನು ಬಿಚ್ಚಿಟ್ಟರು.

ಕೊಡಗು ಜಿಲ್ಲಾ ಖಾಸಗಿ ಅನುದಾನಿತ ಶಾಲೆಗಳ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಕ್ಷ ಝರುಗಣಪತಿ, ಜಿಲ್ಲಾ ಉಪಾಧ್ಯಕ್ಷ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಾಮೋದರ್ ಉಪಸ್ಥಿತರಿದ್ದರು.

ಕ್ಯಾಮ್ಸ್‍ನ ಕೊಡಗು ಜಿಲ್ಲಾ ಮುಖ್ಯಸ್ಥೆ ಡಿ. ಸುಜಲಾದೇವಿ ವಂದಿಸಿದರು, ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಮುಖಂಡರು ಉಪಸ್ಥಿತರಿದ್ದರು.