ಮಡಿಕೇರಿ,ಮಾ.11 : ಮೈಸೂರಿನ ವೈಜಯಂತಿ ಚಿತ್ರಕಲಾ ಮಹಾವಿದ್ಯಾಲಯ ಆಯೋಜಿಸಿದ್ದ ಮೈಸೂರು ನಗರ ಮಟ್ಟದ ಚಿತ್ರಕಲಾ ಶಾಲೆಗಳ ಕಲಾಸ್ಪರ್ಧೆಯಲ್ಲಿ ವೀರಾಜಪೇಟೆಯ ಬಿ.ಎಸ್.ಯಶಸ್ವಿನಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಮೈಸೂರು ನಗರ ಮಟ್ಟದ ಚಿತ್ರಕಲಾ ಶಾಲೆಗಳ ಚಿತ್ರ ಕಲಾಕೃತಿಗಳ ರಚನೆಯ ಕಾರ್ಯಾಗಾರ ಹಾಗೂ ಶಿಬಿರದಲ್ಲಿ ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜಿನ ಪ್ರಥಮ ಎಂಎಫ್‍ಎ ವಿದ್ಯಾರ್ಥಿನಿಯಾಗಿದ್ದಾಳೆ.
ಕೊಡಗಿನ ಚಿತ್ರಕಲಾವಿದ ಬಿ.ಆರ್.ಸತೀಶ್, ಕೆ.ಎನ್. ದಮಯಂತಿ ದಂಪತಿ ಪುತ್ರಿಯಾಗಿರುವ ಯಶಸ್ವಿನಿ ಪ್ರಾಥಮಿಕ ಹಾಗೂ ಮಾದ್ಯಮಿಕ ಶಿಕ್ಷಣವನ್ನು ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಪಡೆದಿದ್ದು ಚಿತ್ರಕಲೆಯಲ್ಲಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು , ಮೈಸೂರಿನಲ್ಲಿ ಬಿ.ಎಫ್.ಎ ( ಬ್ಯಾಚುಲರ್ ಆಫ್ ಫೈನ್ ಆಟ್ರ್ಸ್) ಮುಗಿಸಿ ಅದೇ ಕಾಲೇಜಿನಲ್ಲಿ ಪ್ರಥಮ ಎಂ.ಎಫ್.ಎ ( ಮಾಸ್ಟರ್ ಆಫ್ ಫೈನ್ ಆಟ್ರ್ಸ್) ನಲ್ಲಿ ಓದುತ್ತಿದ್ದಾರೆ.
ಹಲವಾರು ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಶಿಬಿರ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಯಶಸ್ವಿನಿ ಚಿತ್ರಕಲಾಕೃತಿಯಲ್ಲಿ ಜಲವರ್ಣ,ತೈಲವರ್ಣ,ಅಕ್ರಿಲಿಕ್ ಹಾಗೂ ಮಿಶ್ರ ಮಾಧ್ಯಮದಲ್ಲೂ ಪರಿಣತಿ ಹೊಂದಿದ್ದಾರೆ.
ಸರ್ಕಾರದ ಬಾಲಭವನ ವತಿಯಿಂದ ನೀಡುವ 2008 ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಪ್ರಶಸ್ತಿಗೂ ಪಾತ್ರಳಾಗಿದ್ದ ಯಶಸ್ವಿನಿ, ರಾಷ್ಟ್ರೀಯ ಬಾಲಭವನ ವತಿಯಿಂದ ದೆಹಲಿಯಲ್ಲಿ ನಡೆದ ಬಾಲಶ್ರೀ ಕಾರ್ಯಗಾರದಲ್ಲಿ ಪಾಲ್ಗೊಂಡು ಶಿಷ್ಯವೇತನ ಪಡೆದಿದ್ದಾಳೆ. ಆಧುನಿಕ ಚಿತ್ರಕಲಾ ಮಾಧ್ಯಮ ಡಿಜಿಟಲ್ ಮಾಧ್ಯಮದಲ್ಲೂ ಪರಿಣತಿ ಹೊಂದಿ, ಛಾಯಚಿತ್ರಕಲೆಯಲ್ಲಿಯೂ ಸಹ ನಿಪುಣರಾಗಿದ್ದಾಳೆ. ಪ್ರಕೃತಿ ಚಿತ್ರಣ, ಸಂಯೋಜನಾ ಚಿತ್ರಣ ಹಾಗೆಯೇ ಪ್ರಸ್ತುತ ಕಾಣುವಂತ ಸಮಕಾಲಿನ ಕಲೆ ಅಲ್ಲದೆ ಅಮೂರ್ತ ಕಲೆಗಳು ಯಶಸ್ವಿನಿಯ ಕಲಾಕೃತಿಗಳಲ್ಲಿ ಗಮನಾರ್ಹವಾಗಿವೆ.