ಗೋಣಿಕೊಪ್ಪಲು, ಮಾ. 11: ಸಾಮಾಜಿಕ ಮೌಲ್ಯಗಳಡಿಯಲ್ಲಿ ಸಾಮಾಜಿಕ ಸಂಘಟನೆಗಳು ಜೊತೆಗೂಡಿ ಸ್ವರಾಜ್ ಇಂಡಿಯಾ ಪಕ್ಷ ಸ್ಥಾಪಿಸಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಅಭಿರುಚಿ ಗಣೇಶ್ ಎಂದು ತಿಳಿಸಿದರು. ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘಟನೆ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.
ರಾಜಕೀಯ ಪಕ್ಷಗಳಲ್ಲಿ ಸಾಮಾಜಿಕ ಮೌಲ್ಯಗಳು ಅಡಗಿರ ಬೇಕು. ಆದ್ದರಿಂದ ರೈತ ಚಳವಳಿ, ದಲಿತ ಚಳವಳಿ ಪ್ರಗತಿಪರ ಚಿಂತಕರು ಸೇರಿದಂತೆ ಇತರೆ ಸಾಮಾಜಿಕ ಸಂಘಟನೆಗಳು ಜೊತೆಗೂಡಿ ಸ್ವರಾಜ್ ಇಂಡಿಯಾ ಪಕ್ಷವನ್ನು ಸ್ಥಾಪಿಸಿದ್ದು ಭ್ರಷ್ಟಾಚಾರ ರಹಿತವಾದ ರೈತರ ಪರವಾದ ಆಡಳಿತವನ್ನು ನೀಡಲು ಸಂಘಟನೆ ಗಳು ರಾಜಕೀಯ ಚಳವಳಿಗೆ ಮುಂದಾಗಿವೆ ಎಂದರು.
ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಮಿಕರು, ರೈತರು, ದಲಿತರು ಒಟ್ಟಾಗಿ ಚಿಂತಿಸಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಬದಲಾವಣೆ ತರಬಹುದು.ಕೇವಲ ಕುಟುಂಬ,ಧರ್ಮ,ಜಾತಿ ವ್ಯವಸ್ಥೆಯ ಪಕ್ಷಗಳಿಗೆ ಅವಕಾಶ ನೀಡದೆ ಇವುಗಳಿಗೆ ಪರ್ಯಾಯ ವ್ಯವಸ್ಥೆ ಯಾಗಿ ಸ್ವರಾಜ್ ಇಂಡಿಯಾ ಪಕ್ಷವನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯಬೇಕು ಎಂದರು.
ರೈತ ಸಂಘದ ಹಿರಿಯ ಮುಖಂಡ ಲೋಕೇಶ್‍ರಾಜೇ ಅರಸ್ ಮಾತನಾಡಿ, ಪ್ರಸ್ತುತ ರಾಜಕಾರಣವು ಹಣ ಬಲ, ಜಾತಿ ಆಧಾರಿತವಾಗಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಮುಖಂಡ ಎಚ್.ಎನ್. ನಂಜುಂಡಸ್ವಾಮಿ, ದಲಿತ ಮುಖಂಡ ರಾದ ಹೆಚ್. ಎಸ್. ಕೃಷ್ಣಪ್ಪ, ಹೆಚ್. ಆರ್. ಪರಶುರಾಮ್, ಕೊಡಗು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಪುಚ್ಚಿಮಾಡ ಶುಭಾಶ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿ ಸಂಚಾಲಕ ಮಂಡೇಪಂಡ ಪ್ರವೀಣ್, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್, ಉಪಾಧ್ಯಕ್ಷ ಹೆಚ್.ಜಿ. ಶಂಕರಪ್ಪ, ರೈತ ಮುಖಂಡರು ಸೇರಿದಂತೆ ಇನ್ನಿತರರು ಹಾಜರಿದ್ದರು.