ಸೇನಾಪಡೆಗಳ ಮಧ್ಯೆ ಗುಂಡಿನ ಚಕಮಕಿ ಜಮ್ಮು, ಮಾ. 10: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನಾಪಡೆಗಳ ಮಧ್ಯೆ ಭಾರೀ ಗುಂಡಿನ ಚಕಮಕಿ ನಡೆದಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಇಂದು ನಸುಕಿನ ಜಾವ 4.30ರ ಸುಮಾರಿಗೆ ಕಾಶ್ಮೀರದ ಕೃಷ್ಣ ಘಾಟಿ ವಲಯದಲ್ಲಿ ಪಾಕಿಸ್ತಾನ ಸೇನಾಪಡೆ ಕದನ ವಿರಾಮ ಉಲ್ಲಂಘಿಸಿ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಗುಂಡಿನ ದಾಳಿಯ ಮಳೆಗೈಯಲಾರಂಭಿಸಿತು ಎಂದು ರಕ್ಷಣಾ ಇಲಾಖೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ. ಭಾರತೀಯ ಸೇನೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಬೆಳಗ್ಗೆ ಸುಮಾರು 7.30ರ ಸುಮಾರಿಗೆ ಎನ್ಕೌಂಟರ್ ಕೊನೆಗೊಂಡಿತು. ಪೂಂಚ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
157 ಮಂದಿ ಸಜೀವ ದಹನ
ಆಡಿಸ್, ಮಾ. 10: ಇಥಿಯೋಪಿಯಾದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಾಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡಿದ್ದು 157 ಮಂದಿ ಸಜೀವ ದಹನವಾಗಿದ್ದಾರೆ. ಆಡಿಸ್ ಅಬಬಾದಿಂದ 62 ಕಿ.ಮೀ ದೂರದಲ್ಲಿರುವ ಬಿಷೋಫ್ಟು ಬಳಿ ವಿಮಾನ ಪತನಗೊಂಡಿದೆ. 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕೀಡಾಗಿದೆ. ಒಟ್ಟು 33 ದೇಶದ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಇಥಿಯೋಪಿಯಾದ ಏರ್ ಲೈನ್ಸ್ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು 8 ಮಂದಿ ಸಿಬ್ಬಂದಿ 149 ಮಂದಿ ಪ್ರಯಾಣಿಕರಿದ್ದ ಬೋಯಿಂಗ್ 737-8 ಮ್ಯಾಕ್ಸ್ ಹೆಸರಿನ ವಿಮಾನ ಪತನವಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತದಲ್ಲಿ ನಾಲ್ವರ ಸಾವು
ಸಕಲೇಶಪುರ, ಮಾ. 10: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾನುವಾರ ನಸುಕಿನ ಜಾವ ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಉಂಟಾದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಮತ್ತಿಬ್ಬರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕೆಎಸ್ ಆರ್ ಟಿಸಿ ಬಸ್ಸು ಮಂಗಳೂರಿನಿಂದ ಬರುತ್ತಿದ್ದು, ಹಾಸನದಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪುರುಷರು, ಓರ್ವ ಮಹಿಳೆ ಮತ್ತು ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಮೃತದೇಹಗಳು ರಸ್ತೆಗೆ ಬಿದ್ದವು. ಕಾರಿನಲ್ಲಿದ್ದ ಮತ್ತಿಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ಸಕಲೇಶಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹಾಸನ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ. ಕಾರಿನಲ್ಲಿದ್ದವರು ಎಲ್ಲಿಯವರು, ಎಲ್ಲಿಗೆ ಹೊರಟಿದ್ದರು ಎಂಬ ಬಗ್ಗೆ ಯಾವದೇ ಮಾಹಿತಿ ಲಭ್ಯವಾಗಿಲ್ಲ. ಮಾರನಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ವಿಮಾನ ಪತನ : 12 ಸಾವು
ಕೊಲೊಂಬಿಯಾ, ಮಾ. 10: 1930ರ ದಶಕದಲ್ಲಿ ಮೊದಲ ಬಾರಿಗೆ ನಿರ್ಮಾಣವಾಗಿದ್ದ ಅಮೆರಿಕನ್ ನಿರ್ಮಿತ ಅವಳಿ ಎಂಜಿನ್ ವಿಮಾನ ಪತನವಾಗಿದ್ದು ಮೇಯರ್ ಕುಟುಂಬ ಸೇರಿ 12 ಜನರ ಸಾವನ್ನಪ್ಪಿರುವ ಘಟನೆ ಕೊಲೊಂಬಿಯಾದಲ್ಲಿ ನಡೆದಿದೆ. ಅಮೆರಿಕನ್ ಅವಳಿ ಎಂಜಿನ್ ಪೆÇ್ರಪೆಲ್ಲರ್ ಪ್ಲೇನ್ ಡೌಗ್ಲಾನ್ ವಿಮಾನವು ಸ್ಯಾನ್ ಜೋಸ್ ಡೆಲ್ ಗುವಿಯಾರೆ ಮತ್ತು ವಿಲ್ಲವಿಸೆನ್ಸಿಯೊ ನಗರಗಳ ನಡುವೆ ಪತನಗೊಂಡಿದೆ. ವಿಮಾನದಲ್ಲಿ ತರೈರಾ ಮುನಿಸಿಪಾಲಿಟಿ ಮೇಯರ್ ಡೊರಿಸ್ ವಿಲೆಗಾಸ್, ಆಕೆಯ ಗಂಡ ಮತ್ತು ಮಗಳು, ವಿಮಾನದ ಮಾಲೀಕರು, ಪೈಲಟ್ ಜೈಮ್ ಕಾರಿಲ್ಲೋ, ಕೋ-ಪೈಲಟ್ ಜೈಮ್ ಹೆರೆರಾ ಮತ್ತು ಟೆಕ್ನಿಷನ್ ಸೇರಿ 12 ಜನ ಮೃತ ಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ. ವಿಮಾನ ಹಾರುತ್ತಿರುವಾಗ ಎಂಜಿನ್ ಫೇಲ್ ಆಗಿದೆ. ಪೈಲಟ್ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿದ್ದರಿಂದ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಸೀಟು : ಶೇ. 50 ಮೀಸಲು
ಬೆಂಗಳೂರು, ಮಾ. 10: ರಾಜ್ಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಆಕಾಂಕ್ಷಿಗಳಿಗೆ ಸಮಾಧಾನದ ಸುದ್ದಿಯಿದೆ, ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮುಕ್ತ ವಿಭಾಗದಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಡಲು ನಿರ್ಧರಿಸಿದೆ. ವೈದ್ಯಕೀಯ ಸ್ನಾತಕೋತ್ತರ ಸೀಟುಗಳಿಗಿರುವ ಬೇಡಿಕೆಗಳನ್ನು ಪರಿಗಣಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ನಿಯಮಕ್ಕೆ ತಿದ್ದುಪಡಿ ತಂದಿದ್ದು ಅದರಲ್ಲಿ ಶೇಕಡಾ 50ರಷ್ಟು ಮೀಸಲಾತಿಯನ್ನು ಮುಕ್ತ ವಿಭಾಗದಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ನಾಳೆ ಇಲಾಖೆ ಈ ಸಂಬಂಧ ಪ್ರವೇಶ ಅಧಿಸೂಚನೆಯನ್ನು ಹೊರಡಿಸಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಮುಕ್ತ ವಿಭಾಗದಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೆ ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ಕಡಿಮೆಯಾಗುತ್ತದೆ. ಇದಕ್ಕಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇಕಡಾ 50ರಷ್ಟು ಮೀಸಲಾತಿ ತರಲಾಗುತ್ತಿದೆ ಎಂದರು.