ಮಡಿಕೇರಿ, ಮಾ. 10: ದೇಶದ 17ನೇ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದ್ದು, 7 ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಏಪ್ರಿಲ್ 11ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮೇ 23ರಂದು ಮತಗಳ ಎಣಿಕೆ ನಡೆಯಲಿದೆ. ಎರಡನೇ ಹಂತದ ಚುನಾವಣೆ ಏಪ್ರಿಲ್ 18 ಕೊಡಗು-ಮೈಸೂರು ಕ್ಷೇತ್ರಕ್ಕೆ ಏಪ್ರಿಲ್ 18 ರಂದು ಮತದಾನದ ಅವಕಾಶ ನೀಡಲಾಗಿದೆ. 3ನೇ ಹಂತದ ಚುನಾವಣೆ ಏಪ್ರಿಲ್ 23 4ನೇ ಹಂತ ಏಪ್ರಿಲ್ 29, 5ನೇ ಹಂತ ಮೇ 6ನೇ ಹಂತ, ಮೇ 12ಕ್ಕೆ ಹಾಗೂ 7ನೇ ಹಂತದ ಚುನಾವಣೆ ಮೇ 19ರಂದು ನಡೆಯಲಿದೆ. ಮೊದಲ ಹಂತದಲ್ಲಿ 20 ರಾಜ್ಯಗಳ 91 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ ಅವರು ದೆಹಲಿಯಲ್ಲಿ ಸಂಜೆ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ್ದು, ಚುನಾವಣಾ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬರುತ್ತದೆಂದು ಪ್ರಕಟಿಸಿದ್ದಾರೆ. ಹಾಗಾಗಿ ಯಾವದೇ ಸರಕಾರಗಳು ಹೊಸ ಕಾರ್ಯಕ್ರಮಗಳ ಘೋಷಣೆ, ರಾಜಕೀಯ ಚುನಾವಣಾ ಭಾಷಣಗಳಲ್ಲಿ ವೈಯಕ್ತಿಕ ನಿಂದನೆಗಳು, ಭರವಸೆಗಳನ್ನು ನೀಡುವಂತಿಲ್ಲವೆಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೂ ನಿಗ ಇಡಲಾಗುವದು ಎಂದು ಎಚ್ಚರಿಸಿರುವ ಆಯುಕ್ತರು, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರೆ ಕಾನೂನು ಕ್ರಮಕೈಗೊಳ್ಳುವದಾಗಿ ಎಚ್ಚರಿಸಿದ್ದಾರೆ.
ಒಂದೇ ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು
ಆಂಧ್ರ, ಅರುಣಾಚಲ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತೆಲಂಗಾಣ, ತಮಿಳುನಾಡು, ಉತ್ತರಾಖಂಡ್, ಅಂಡಮಾನ್- ನಿಕೋಬಾರ್, ದಾದ್ರಾ ನಗರ್‍ಹವೇಲಿ, ದಮನ್ ಅಂಡ್ ದಿಯು, ಲಕ್ಷದ್ವೀಪ, ದಿಲ್ಲಿ, ಪುದುಚೇರಿ, ಚಂಡೀಗಢ.
ಎರಡು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಕರ್ನಾಟಕ, ಮಣಿಪುರ, ರಾಜಸ್ಥಾನ, ತ್ರಿಪುರಾ. ಮೂರು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಅಸ್ಸಾಂ, ಛತ್ತೀಸ್‍ಗಢ.
ನಾಲ್ಕುಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು
ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ. ಐದು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಜಮ್ಮು ಮತ್ತು ಕಾಶ್ಮೀರ. ಏಳು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ
ರಾಜ್ಯವಾರು ಮತದಾನ ವಿವರ: ಹಂತ-1 (ಏಪ್ರಿಲ್ 11) ಆಂಧ್ರಪ್ರದೇಶ (25),
(ಮೊದಲ ಪುಟದಿಂದ) ಅರುಣಾಚಲ (2), ಅಸ್ಸಾಂ (5), ಛತ್ತೀಸ್‍ಗಢ (3), ಜಮ್ಮು ಮತ್ತು ಕಾಶ್ಮೀರ (2), ಮಹಾರಾಷ್ಟ್ರ (7), ಮಣಿಪುರ (1), ಮೇಘಾಲಯ (2), ಮಿಜೋರಾಂ (1), ನಾಗಾಲ್ಯಾಂಡ್ (1), ಒಡಿಶಾ (4), ಸಿಕ್ಕಿಂ (1), ತೆಲಂಗಾಣ (17), ತ್ರಿಪುರಾ (1), ಯುಪಿ (8), ಉತ್ತರಾಖಂಡ (5), ಪಶ್ಚಿಮ ಬಂಗಾಳ (2), ಅಂಡಮಾನ್ (1), ಲಕ್ಷದ್ವೀಪ (1). ಬಿಹಾರ 4.
ಮೊದಲ ಹಂತದ ಚುನಾವಣೆಯಲ್ಲಿ 20 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಟ್ಟು 91 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.
ರಾಜ್ಯವಾರು ಚುನಾವಣೆ ವಿವರ: ಹಂತ-2 (ಏಪ್ರಿಲ್ 18), ಅಸ್ಸಾಂ (5), ಬಿಹಾರ (5), ಛತ್ತೀಸ್‍ಗಢ (3), ಜಮ್ಮು ಮತ್ತು ಕಾಶ್ಮೀರ (2) ಕರ್ನಾಟಕ (14), ಮಹಾರಾಷ್ಟ್ರ (10), ಮಣಿಪುರ (1), ಒಡಿಶಾ (5), ತಮಿಳುನಾಡು (39), ತ್ರಿಪುರಾ (1), ಯುಪಿ (8), ಪಶ್ಚಿಮ ಬಂಗಾಳ (3), ಪುದುಚೇರಿ (1). ಎರಡನೇ ಹಂತದಲ್ಲಿ 13 ರಾಜ್ಯಗಳ ಒಟ್ಟು 97 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.
ರಾಜ್ಯವಾರು ಚುನಾವಣೆ ವಿವರ: ಹಂತ-3 (ಏಪ್ರಿಲ್ 23) ಅಸ್ಸಾಂ (24), ಬಿಹಾರ (5), ಛತ್ತೀಸ್‍ಗಢ (7), ಗುಜರಾತ್ (27), ಗೋವಾ (2), ಜಮ್ಮು ಮತ್ತು ಕಾಶ್ಮೀರ (1), ಕರ್ನಾಟಕ (14), ಕೇರಳ (20), ಮಹಾರಾಷ್ಟ್ರ (14), ಒಡಿಶಾ (6), ಯುಪಿ (10), ಪಶ್ಚಿಮ ಬಂಗಾಳ (5), ದಾದ್ರಾ ಮತ್ತು ನಗರ್‍ಹವೇಲಿ (1), ದಮನ್ ಮತ್ತು ದಿಯು (1).
ಮೂರನೇ ಹಂತದಲ್ಲಿ ಒಟ್ಟು 14 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 115 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ನಾಲ್ಕನೇ ಹಂತದ ಚುನಾವಣೆ: ರಾಜ್ಯವಾರು ವಿವರ (ಏಪ್ರಿಲ್ 29) ಬಿಹಾರ (5), ಜಮ್ಮು ಮತ್ತು ಕಾಶ್ಮೀರ (1), ಜಾರ್ಖಂಡ್ (3), ಮಧ್ಯಪ್ರದೇಶ (6), ಮಹಾರಾಷ್ಟ್ರ (17), ಒಡಿಶಾ (6), ರಾಜಸ್ಥಾನ (13), ಪಶ್ಚಿಮ ಬಂಗಾಳ (7). ಯುಪಿ (13). ನಾಲ್ಕನೇ ಹಂತದಲ್ಲಿ ಒಟ್ಟು 9 ರಾಜ್ಯಗಳ 71 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.
ರಾಜ್ಯವಾರು ಚುನಾವಣೆ ವಿವರ: ಹಂತ 5 (ಮೇ 6) ಬಿಹಾರ (5), ಜಮ್ಮು ಮತ್ತು ಕಾಶ್ಮೀರ (2), ಜಾರ್ಖಂಡ್ (4), ಮಧ್ಯಪ್ರದೇಶ (7), ರಾಜಸ್ಥಾನ (12), ಉತ್ತರ ಪ್ರದೇಶ (14), ಪಶ್ಚಿಮ ಬಂಗಾಳ (7). ಐದನೇ ಹಂತದ ಚುನಾವಣೆಯಲ್ಲಿ 7 ರಾಜ್ಯಗಳ ಒಟ್ಟು 51 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.
ರಾಜ್ಯವಾರು ಚುನಾವಣೆ ವಿವರ: ಹಂತ 6 (ಮೇ 12) ಬಿಹಾರ (8), ಹರ್ಯಾಣ (10), ಜಾರ್ಖಂಡ್ (4), ಉತ್ತರ ಪ್ರದೇಶ (14), ಮಧ್ಯಪ್ರದೇಶ 8, ಪಶ್ಚಿಮ ಬಂಗಾಳ (8), ದಿಲ್ಲಿ-ಎನ್‍ಸಿಆರ್ (7) ಒಟ್ಟು 59. ಆರನೇ ಹಂತದ ಚುನಾವಣೆಯಲ್ಲಿ 6 ರಾಜ್ಯಗಳ ಒಟ್ಟು 59 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.
ರಾಜ್ಯವಾರು ಚುನಾವಣೆ ವಿವರ: ಹಂತ 7 (ಮೇ 19) ಬಿಹಾರ (8), ಜಾರ್ಖಂಡ್ (3), ಮಧ್ಯಪ್ರದೇಶ (8), ಪಂಜಾಬ್ (13), ಪಶ್ಚಿಮ ಬಂಗಾಳ (9), ಚಂಡೀಗಢ (1), ಉತ್ತರ ಪ್ರದೇಶ (13), ಹಿಮಾಚಲ ಪ್ರದೇಶ (4) ಒಟ್ಟು 59. ಏಳನೇ ಹಂತದ ಚುನಾವಣೆಯಲ್ಲಿ 7 ರಾಜ್ಯಗಳ ಒಟ್ಟು 59 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ರಾಜ್ಯಗಳ ವಿಧಾನಸಭೆಗಳಿಗೂ ಲೋಕಸಭೆ ಚುನಾವಣೆ ನಡೆಯಲಿದೆ.
ಸುದ್ದಿಗೋಷ್ಠಿಯ ಮುಖ್ಯಾಂಶಗಳು:
*ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಸಮಗ್ರ ಚರ್ಚೆ ನಡೆಸಿದ ಬಳಿಕ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
*ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮತದಾರರ ಪಟ್ಟಿಗಳನ್ನು ಸಮಗ್ರವಾಗಿ ಪರಿಷ್ಕರಿಸಲಾಗುತ್ತಿದ್ದು ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದೆ.
*18-19 ವರ್ಷ ವಯಸ್ಸಿನ 1.5 ಕೋಟಿ ಮತದಾರರಿದ್ದಾರೆ. 99.6 ಶೇ ಮತದಾರರು ಗುರುತಿನ ಚೀಟಿ (ಎಪಿಕ್ ಕಾರ್ಡ್) ಹೊಂದಿದ್ದಾರೆ.
*ಸುಮಾರು 90 ಕೋಟಿ ಮತದಾರರು 2019ರ ಚುನಾವಣೆಯಲ್ಲಿ ಹಕ್ಕು ಚಲಾಯಿಸಲಿದ್ದಾರೆ.
*ಫೋಟೋ ಸಹಿತ ಮತದಾರರ ಚೀಟಿಯನ್ನು ಮಾರ್ಗದರ್ಶನಕ್ಕಾಗಿ ಮಾತ್ರ ಬಳಸಬಹುದೆ ಹೊರತು ಮತಗಟ್ಟೆಯಲ್ಲಿ ಗುರುತಿನ ಚೀಟಿಯಾಗಿ ಬಳಸುವಂತಿಲ್ಲ.
*ಈ ಬಾರಿ ಎಲ್ಲ ಮತಗಟ್ಟೆಗಳಲ್ಲೂ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗುತ್ತದೆ.
*ದೇಶಾದ್ಯಂತ ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತದೆ. ಯಾವುದೇ ರೀತಿಯ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವದು.
*ಈ ಬಾರಿ 17.4 ಲಕ್ಷ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತದೆ.
*ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಜನತೆಗೆ ಪರಿಚಯಿಸಲು ಕ್ರಮ ಕೈಗೊಳ್ಳಲಾಗುವದು.
*ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಇದ್ದಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಈ ಬಗ್ಗೆ ವಿವರಣೆ ನೀಡಬೇಕು.
*ಜನಸಾಮಾನ್ಯರು ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ದೂರು ನೀಡಲು ವಿಶೇಷ ಆ್ಯಪ್ ಕಲ್ಪಿಸಿದ್ದು, ದೂರುದಾರರ ಹೆಸರನ್ನು ಗೌಪ್ಯವಾಗಿಡಲಾಗುವದು.
*ವಿ.ವಿ. ಪ್ಯಾಟ್‍ನಲ್ಲಿ ಈ ಬಗ್ಗೆ ಅಭ್ಯರ್ಥಿಗಳ ಭಾವಚಿತ್ರ ಸಹಿತ ಚಿಹ್ನೆ ಪ್ರಕಟ.
16ನೇ ಲೋಕಸಭೆ ಅವಧಿ ಜೂನ್ 3ಕ್ಕೆ ಕೊನೆಗೊಳ್ಳುತ್ತದೆ.
ಎಲ್ಲ ಪ್ರಮುಖ ಘಟನೆಗಳನ್ನು ವೀಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ತಮ್ಮ ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳ ವಿವರ ನೀಡಬೇಕಾಗುತ್ತದೆ.
ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ.