ಮಡಿಕೇರಿ, ಮಾ. 9: ತಾ. 10 ರಂದು (ಇಂದು) ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್ ಕೋರಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲೆಯಲ್ಲಿ ಒಟ್ಟು 5,66,397 ಜನಸಂಖ್ಯೆ ಇದ್ದು, ಇವರಲ್ಲಿ 57,424 ನಗರ/ ಪಟ್ಟಣ ಪ್ರದೇಶದಲ್ಲಿ ಮತ್ತು 5,09,013 ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆ ಇದ್ದಾರೆ. ಇವರಲ್ಲಿ 5 ವರ್ಷದೊಳಗಿನ 39,015 ಮಕ್ಕಳು ಜಿಲ್ಲೆಯಲ್ಲಿದ್ದು, ಇವರಲ್ಲಿ 4,602 ನಗರ ಮತ್ತು 34,413 ಗ್ರಾಮೀಣ ಪ್ರದೇಶದ ಮಕ್ಕಳಿದ್ದಾರೆ. ಹಾಗೆಯೇ ಜಿಲ್ಲೆಯಲ್ಲಿ 1,59,443 ವಲಸಿಗ ಜನಸಂಖ್ಯೆ ಇದ್ದು, ಇವರಲ್ಲಿ 12,859 ಐದು ವರ್ಷದೊಳಗಿನ ಮಕ್ಕಳು ಇದ್ದಾರೆ, ಒಟ್ಟಾರೆ ಜಿಲ್ಲೆಯಲ್ಲಿ 1,33,356 ಕುಟುಂಬಗಳಿವೆ ಎಂದು ಮಾಹಿತಿ ನೀಡಿದರು.

ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಒಟ್ಟು 465 ಬೂತ್‍ಗಳನ್ನು ತೆರೆಯಲಾಗಿದೆ. ಅಲ್ಲದೆ 20 ಟ್ರಾನ್ಸಿಸ್ಟ್ ತಂಡಗಳು, 6 ಸಂಚಾರಿ ಲಸಿಕಾ ತಂಡಗಳನ್ನು ವ್ಯವಸ್ಥೆ ಮಾಡಲಾಗಿದೆ. 1,950 ಮಂದಿ ಲಸಿಕೆ ಹಾಕುವವರು, 87 ಮಂದಿ ಮೇಲ್ವಿಚಾರಕರು, 966 ಮನೆ ಮನೆಗೆ ಭೇಟಿ ನೀಡುವ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಹಿತಿ ನೀಡಿದರು.

10 ರಂದು ಬೂತ್ ಮಟ್ಟದಲ್ಲಿ ಪೋಲಿಯೋ ಹನಿ ಹಾಕಲಾಗುತ್ತದೆ. 11 ಮತ್ತು 12 ರಂದು ಬಿಟ್ಟು ಹೋದ 5 ವರ್ಷದೊಳಗಿನ ಮಕ್ಕಳಿಗೆ ಮನೆ ಮನೆ ಭೇಟಿ ನೀಡಿ ಪೋಲಿಯೋ ಹನಿ ಹಾಕಲಾಗುತ್ತದೆ ಎಂದು ಡಾ. ಮೋಹನ್ ಮಾಹಿತಿ ನೀಡಿದರು.

ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ ಪಲ್ಸ್ ಪೋಲಿಯೋ ದಿನವಾದ ಮಾರ್ಚ್ 10 ರಂದು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆಯನ್ನು ಹಾಕಿಸಲು ಮರೆಯಬಾರದು ಎಂದು ಅವರು ಮನವಿ ಮಾಡಿದರು.

ಗ್ಲಾಕೋಮ ಸಪ್ತಾಹ: ಕಾರ್ಯಕ್ರಮ ಅಧಿಕಾರಿ ಡಾ.ಆನಂದ್ ಮಾತನಾಡಿ 10ರಿಂದ 16 ರವರೆಗೆ ಗ್ಲಾಕೋಮ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಜಿಲ್ಲೆಯ ಸಮುದಾಯ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಗ್ಲಾಕೋಮ ಕಣ್ಣಿಗೆ ಸಂಬಂಧಪಟ್ಟ ಆತಂಕಕಾರಿ ಸ್ಥಿತಿಗಳಲ್ಲಿ ಒಂದಾಗಿದ್ದು, ಇದರಿಂದ ಕಣ್ಣಿನ ದೃಷ್ಟಿ ಹೋಗುತ್ತದೆ. ಸಾಧಾರಣವಾಗಿ 40 ವರ್ಷ ಮೇಲ್ಪಟ್ಟವರಿಗೆ ಅನುವಂಶಿಕವಾಗಿ ಗ್ಲಾಕೋಮ ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದರು. ಬೆಳಕಿನ ಸುತ್ತ ಕಾಮನ ಬಿಲ್ಲಿನಂತೆ ವೃತ್ತವನ್ನು ಕಾಣುವದು, ತಲೆನೋವು ಹಾಗೂ ಕಣ್ಣಿನ ನೋವು, ಅಸ್ಪಷ್ಟ ದೃಷ್ಟಿ ಹಾಗೂ ನೋಟದ ವಲಯ ಕುಗ್ಗುತ್ತಾ ಹೋಗುವದು, ಪದೇ ಪದೇ ಕನ್ನಡಕ ಬದಲಾಯಿಸಬೇಕಾಗಿ ಬರುವದು. ಇದು ಗ್ಲಾಕೋಮದ ರೋಗ ಲಕ್ಷಣವಾಗಿದೆ ಎಂದು ಮಾಹಿತಿ ನೀಡಿದರು. ಈ ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳುವಂತೆ ಕೋರಿದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎ.ಸಿ.ಶಿವಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕರಾದ ದೇವರಾಜು, ಧನಂಜಯ ಇತರರು ಇದ್ದರು.