ಮಡಿಕೇರಿ, ಮಾ. 9: ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಬಲ್ಯಹೊಂದಿದ್ದು, ಇದು ಹೆಮ್ಮೆಯ ವಿಚಾರ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು.

ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಅಧಿಕಾರ ಯಾತ್ರೆ ಪ್ರಯುಕ್ತ ಕಮ್ಯುನಿಟಿ ಹಾಲ್ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಿಳೆ ಈ ದೇಶವನ್ನು ಆಳುವಷ್ಟರ ಮಟ್ಟಿಗೆ ಬೆಳೆದಿದ್ದಾಳೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೆ ಇದಕ್ಕೆ ಸಾಕ್ಷಿಯಾಗಿದ್ದು, ಕಾಂಗ್ರೆಸ್‍ನಲ್ಲಿ ಮಾತ್ರ ಮಹಿಳೆಗೆ ಗೌರವಯುತ ಸ್ಥಾನ ನೀಡಲಾಗುತ್ತಿದ್ದು, ಮಹಿಳೆಯರ ಉನ್ನತಿಗೆ ಅವಕಾಶ ನೀಡಲಾಗಿದೆ ಎಂದರು.

ಜಿಲ್ಲಾ ಕೇಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಬಹುಮುಖ್ಯ ಪಾತ್ರವಿದೆ. ಹೆಣ್ಣು ತಾಳ್ಮೆಯ ಪ್ರತೀಕವಾಗಿದ್ದು, ಅವರನ್ನು ಗೌರವಿಸಬೇಕಾದದ್ದು ಪ್ರತಿಯೊಬ್ಬ ಪುರುಷನ ಜವಾಬ್ದಾರಿ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಮಾತನಾಡಿ, ಕಾಂಗ್ರೆಸ್ ಯಾವದೇ ಧರ್ಮಕ್ಕೆ ಸೀಮಿತವಾದ ಪಕ್ಷವಲ್ಲ. ಇಲ್ಲಿ ಎಲ್ಲರಿಗೂ ಸಮಾನ ಗೌರವವಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್ ವಹಿಸಿ ಮಾತನಾಡಿ, ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿಗಾಗಿ ಮಹಿಳಾ ಕಾಂಗ್ರೆಸ್ ನಿಂದ ಒಗ್ಗಟ್ಟಿನಿಂದ ಹೋರಾಟ ಮಾಡಲಾಗುವದು. ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೆಸ್ ಘಟಕವನ್ನು ಬಲಪಡಿಸಲಾಗುವ ದೆಂದರು.

ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ತಾರಾ ಅಯ್ಯಮ್ಮ, ತಾಹಿರಾ ಹಫೀಜ್, ಜಿ.ಪಂ. ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ಪ್ರದೀಪ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ. ಬಿ.ಟಿ. ಪ್ರದೀಪ್ ಅವರ ಪತ್ನಿ ಸುಮನ್, ಮಹಿಳಾ ಕ್ರೀಡಾ ಪಟು ವಿಶಾಲಾಕ್ಷಿ ಹಾಗೂ ಮಹಿಳಾ ಆಟೋ ಚಾಲಕಿ ಶೈಲಜಾ ಇವರುಗಳನ್ನು ಸನ್ಮಾನಿಸಲಾಯಿತು. ಸೀತಾ ಪ್ರಾರ್ಥಿಸಿ, ಶಶಿ ನಿರೂಪಿಸಿದರು. ಮಿನಾಸ್ ಸ್ವಾಗತಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಇಂದಿರಾಗಾಂಧಿ ವೃತ್ತದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ‘ಮಹಿಳಾ ಅಧಿಕಾರ ಯಾತ್ರೆ’ಗೆ ಸುರಯ್ಯ ಅಬ್ರಾರ್ ಚಾಲನೆ ನೀಡಿದರು. ಕಾರ್ಯಕರ್ತರು ಮಹಿಳಾ ಹಕ್ಕುಗಳು ಮತ್ತು ಸಮಾನತೆಯ ಘೋಷಣೆಗಳನ್ನು ಕೂಗಿದರು.